ADVERTISEMENT

ಡೀಮ್ಡ್‌ ಫಾರೆಸ್ಟ್‌ ಹೆಸರಲ್ಲಿ ಅನ್ಯಾಯ ಸಲ್ಲ: ಪ್ರತಾಪಚಂದ್ರ ಶೆಟ್ಟಿ

ಹೆಬ್ರಿಯಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರು ಮತ್ತು ರೈತರ ಸಭೆ.

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 12:24 IST
Last Updated 10 ಜುಲೈ 2022, 12:24 IST
ಹೆಬ್ರಿಯಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರು ಮತ್ತು ರೈತರ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಮಾತನಾಡಿದರು
ಹೆಬ್ರಿಯಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರು ಮತ್ತು ರೈತರ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಮಾತನಾಡಿದರು   

ಹೆಬ್ರಿ: ಅರಣ್ಯದಲ್ಲಿ ಹಲವು ವಿಧಗಳಿರಬಹುದು. ಆದರೆ ಡೀಮ್ಡ್‌ ಫಾರೆಸ್ಟ್‌ ಹೆಸರಿನಲ್ಲಿ ಕೃಷಿಕರಿಗೆ, ಬಡ ಜನತೆಗೆ ಅನ್ಯಾಯವಾಗಬಾರದು. ಸರ್ಕಾರ ಡೀಮ್ಡ್‌ ಫಾರೆಸ್ಟ್‌ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಸರಿಪಡಿಸಿ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದರು.

ಅವರು ಹೆಬ್ರಿಯ ಶೀಲಾ ಸುಭೋದ್‌ ಬಲ್ಲಾಳ್‌ ಬಂಟರ ಭವನದಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರು ಮತ್ತು ರೈತರ ಸಭೆಯಲ್ಲಿ ಮಾತನಾಡಿದರು.

‘ಈ ಹಿಂದೆ ಸಿ ಮತ್ತು ಡಿ ಜಮೀನುಗಳನ್ನು ಕೃಷಿ ಯೋಗ್ಯವಲ್ಲದ ಜಮೀನುಗಳು ಎಂದು ಗುರುತಿಸಿ ಸರ್ಕಾರಿ ಜಮೀನು ಎಂದು ಹೇಳಲಾಗುತ್ತಿತ್ತು. ಆದರೆ ಇದರಲ್ಲಿ ಯಾವುದೇ ಗೊಂದಲಗಳಿರಲಿಲ್ಲ. ಈಗ ರೈತರು, ಬಡ ಜನರು ಕೃಷಿ ಮಾಡುತ್ತಿರುವ ಜಮೀನನ್ನೇ ಡೀಮ್ಡ್‌ ಫಾರೆಸ್ಟ್‌ ಸಹಿತ ವಿವಿಧ ಹೆಸರಿನಲ್ಲಿ ರೈತರಿಗೆ ಗೊಂದಲ ಮಾಡುತ್ತಿರುವುದು ಸರಿಯಲ್ಲ. ರೈತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗಬಾರದು’ ಎಂದು ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ADVERTISEMENT

ಹಲವು ವಿಚಾರಗಳ ಚರ್ಚೆ

ರೈತರ ಕುಮ್ಕಿ ಹಕ್ಕು, ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ, ಕಾಡು ಪ್ರಾಣಿಗಳ ಹಾವಳಿ, ಕೃಷಿ ನಾಶ, ಸರ್ಕಾರದಿಂದ ದೊರೆಯುವ ಪರಿಹಾರದಲ್ಲಿ ವಿಳಂಬ ನೀತಿ, ಸರ್ಕಾರದ ಸಹಾಯಧನ ಮತ್ತು ಕಳಪೆ ಗುಣಮಟ್ಟದ ಯಂತ್ರ ವಿತರಣೆ ಮತ್ತು ವಿದ್ಯುತ್‌ ಇಲಾಖೆಯ ಖಾಸಗಿಕರಣ ಸಹಿತ ಹಲವು ವಿಚಾರಗಳ ಚರ್ಚೆ ನಡೆಯಿತು.

ಮೇಗದ್ದೆ ರಮೇಶ ಶೆಟ್ಟಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ಗಮನ ಸೆಳೆದರು. ಕೃಷಿಕರಾದ ಕುಚ್ಚೂರಿನ ಎಚ್.ರಾಜೀವ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಹರ್ಷ ಶೆಟ್ಟಿ ಬೇಳಂಜೆ, ಶಾಡಿಗುಂಡಿ ರಾಜು ಶೆಟ್ಟಿ, ವಿಶ್ವಾಸ್‌ ಶೆಟ್ಟಿ ಸಹಿತ ಹಲವರು ವಿವಿಧ ಸಮಸ್ಯೆಗಳನ್ನು ರೈತ ಮುಖಂಡರ ಗಮನಕ್ಕೆ ತಂದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಚೈತನ್ಯ ಕೆ.ಎಸ್‌. ಅಡಿಕೆ ತೋಟ ಸಹಿತ ಸಮಗ್ರ ಕೃಷಿಯ ಮಾಹಿತಿ ನೀಡಿದರು.

ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರಾದ ಸದಾಶಿವ ವಂಡ್ಸೆ, ಪ್ರದೀಪ ಬಲ್ಲಾಳ್‌, ಕೆದೂರು ಸದಾಶಿವ ಶೆಟ್ಟಿ, ಬಲಾಡಿ ಸಂತೋಷ ಶೆಟ್ಟಿ, ಹೆಬ್ರಿ ವಲಯದ ವಿವಿಧ ಘಟಕಗಳ ಪ್ರಮುಖರಾದ ಕಿರಣ್‌ ತೋಳಾರ್‌, ವಾದಿರಾಜ ಶೆಟ್ಟಿ, ಶ್ರೀಕಾಂತ್‌ ಹೆಗ್ಡೆ, ಮಹೇಶ ಶೆಟ್ಟಿ ಕುಚ್ಚೂರು, ವಿಜಯ ಕುಮಾರ್‌ ಶೆಟ್ಟಿ, ಜಯರಾಮ ಹಾಂಡ, ಸುಧಾಕರ ಶೆಟ್ಟಿ ದೇವಳ ಬೈಲು, ರಘುರಾಮ ಕುಲಾಲ್‌, ರಾಜೇಶ ಪೂಜಾರಿ, ಮಿಥುನ್‌ ಶೆಟ್ಟಿ ಚಾರ, ರೋಶನ್‌ ಕುಮಾರ್‌ ಶೆಟ್ಟಿ, ಶುಭದರ ಶೆಟ್ಟಿ ಮುದ್ರಾಡಿ, ಸತೀಶ ಶೇರಿಗಾರ್‌, ರಮೇಶ ಶೆಟ್ಟಿ ಅಜ್ಜೋಳ್ಳಿ, ಉದಯ ಆಚಾರ್‌ ತಣ್ಣೀರು, ಶ್ರೀಕಾಂತ್‌ ಭಟ್‌ ಶಿವಪುರ, ಸುಭಾಶ್ಚಂದ್ರ ನಾಯ್ಕ್‌, ಗುಂಡಾಳ ಸದಾಶಿವ ಶೆಟ್ಟಿ, ಕೃಷ್ಣ ಆಚಾರ್ಯ ಮುದ್ರಾಡಿ, ಲಕ್ಷ್ಮಣ ಆಚಾರ್‌ ವರಂಗ, ರವಿ ಪೂಜಾರಿ ಮುನಿಯಾಲು ಮುಂತಾದವರು ಇದ್ದರು.

ಚೋರಾಡಿ ಅಶೋಕ ಶೆಟ್ಟಿ ನಿರೂಪಿಸಿ, ನವೀನ್‌ ಕೆ. ಅಡ್ಯಂತಾಯ ಸ್ವಾಗತಿಸಿದರು. ಬೆಳ್ವೆ ಸತೀಶ್‌ ಕಿಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.