
ಉಡುಪಿ: ನಗರದ ಅಂಬಲಪಾಡಿ ಬೈಪಾಸ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಕಾಮಗಾರಿ ಮುಗಿಯುವ ಮೊದಲೇ ಸರ್ವಿಸ್ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂಬ ಒತ್ತಾಯವು ಸಾರ್ವಜನಿಕರಿಂದ ಕೇಳಿ ಬಂದಿದೆ.
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಅಗಲ ಕಿರಿದಾದ ಸರ್ವಿಸ್ ರಸ್ತೆಯಲ್ಲಿ ಸಂಚಾರ ನಡೆಸಲು ಕಳೆದ ಮಳೆಗಾಲದಲ್ಲಿ ವಾಹನ ಸವಾರರಿಗೆ ತೊಂದರೆಯಾಗಿತ್ತು. ಮುಂದಿನ ಮಳೆಗಾಲ ಬರುವುದಕ್ಕೂ ಮೊದಲು ಸರ್ವಿಸ್ ರಸ್ತೆಯನ್ನು ವಿಸ್ತರಣೆಗೊಳಿಸಿ, ಅಭಿವೃದ್ಧಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸರ್ವಿಸ್ ರಸ್ತೆಯನ್ನು ವಿಸ್ತರಣೆ ಮಾಡುವ ಜೊತೆಗೆ ಅಂಬಲಪಾಡಿಯಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆಯನ್ನೂ ವಿಸ್ತರಣೆ ಮಾಡಿ ಅಭಿವೃದ್ಧಿಪಡಿಸಬೇಕೆಂದೂ ಒತ್ತಾಯಿಸಿದ್ದಾರೆ.
ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಕರಾವಳಿ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಗಳ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ರಸ್ತೆಯಲ್ಲೇ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಹದಗೆಟ್ಟಿರುವ ಸರ್ವಿಸ್ ರಸ್ತೆಯಿಂದ ವಾಹನ ಸವಾರರು ನಿತ್ಯವೂ ಬವಣೆ ಪಡುವಂತಾಗಿದೆ.
ಮೇಲ್ಸೇತುವೆ ಸಿದ್ಧವಾಗುವ ವೇಳೆಗೆ ಸರ್ವಿಸ್ ರಸ್ತೆಯೂ ಅಭಿವೃದ್ಧಿಗೊಂಡರೆ ಅನುಕೂಲವಾಗಲಿದೆ. ವಿಳಂಬವಾದರೆ ಜನರಿಗೆ ಮತ್ತೆ ತೊಂದರೆಯಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
‘ಬಲೈಪಾದೆಯಿಂದ ಕರಾವಳಿ ಬೈಪಾಸ್ ವರೆಗಿನ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಸರ್ವಿಸ್ ರಸ್ತೆಗಳನ್ನು ವಿಸ್ತರಣೆ ಮಾಡಿ, ಸಮರ್ಪಕ ಚರಂಡಿ ವ್ಯವಸ್ಥೆಯೊಂದಿಗೆ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಈಗಾಗಲೇ ಸಂಸದರ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಭಾಸ್ಕರ ಶೆಟ್ಟಿ ತಿಳಿಸಿದ್ದಾರೆ.
‘ಕಿರಿದಾದ ಸರ್ವಿಸ್ ರಸ್ತೆಯನ್ನು ದ್ವಿಪಥಕ್ಕೆ ಸರಿಯಾಗಿ ವಿಸ್ತರಣೆ ಮಾಡಿ, ಅಭಿವೃದ್ಧಿಗೊಳಿಸಬೇಕು, ಅಂಡರ್ ಪಾಸ್‌ನ ಎರಡೂ ದ್ವಾರಗಳಲ್ಲಿ ತಿರುವು ಪಡೆಯುವಲ್ಲಿ ರಸ್ತೆಯನ್ನು ವಿಸ್ತರಣೆ ಮಾಡಬೇಕು, ಸರ್ವಿಸ್ ರಸ್ತೆಗೆ ಸಿಗ್ನಲ್ ದೀಪಗಳನ್ನು ಅಳವಡಿಸಬೇಕು ಎಂದು ನಾವು ಸಚಿವರಿಗೆ ಸಲ್ಲಿಸಿದ್ದ ಮನವಿಯಲ್ಲಿ ಒತ್ತಾಯಿಸಿದ್ದೆವು’ ಎಂದೂ ಅವರು ಹೇಳಿದ್ದಾರೆ.
‘ಸರ್ವಿಸ್ ರಸ್ತೆ ಅಭಿವೃದ್ಧಿ ವಿಳಂಬವಾದರೆ ಸಾರ್ವಜನಿಕರಿಗೆ ಇನ್ನಷ್ಟು ಸಮಸ್ಯೆಯಾಗಲಿದೆ. ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.