ADVERTISEMENT

ಪಡುಬಿದ್ರಿ: ‘ಸಿಆರ್‌ಝಡ್ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ’

ಹೆಜಮಾಡಿಯಲ್ಲಿ ತಹಶೀಲ್ದಾರ್‌ರಿಂದ ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 6:35 IST
Last Updated 22 ಫೆಬ್ರುವರಿ 2023, 6:35 IST
ಕಂದಾಯ ಇಲಾಖೆ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಜನರಿಂದ ಸೋಮವಾರ ಅಹವಾಲು ಸ್ವೀಕರಿಸಿದರು
ಕಂದಾಯ ಇಲಾಖೆ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಜನರಿಂದ ಸೋಮವಾರ ಅಹವಾಲು ಸ್ವೀಕರಿಸಿದರು   

ಪಡುಬಿದ್ರಿ: ‘ಹಲವು ಬಾರಿ ಸಿಆರ್‌ಝಡ್ ನಿಯಮಗಳಿಗೆ ಬದಲಾವಣೆ ತಂದರೂ ಹೆಜಮಾಡಿ ಗ್ರಾಮದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಆಡಳಿತ ಸಹಿತ ಸಾರ್ವಜನಿಕರು ತಹಶೀಲ್ದಾರ್‌ರೊಂದಿಗೆ ಅಳಲು ತೋಡಿಕೊಂಡರು.

ಸೋಮವಾರ ಹೆಜಮಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾಪು ತಾಲ್ಲೂಕು ಕಂದಾಯ ಇಲಾಖೆ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಅಹವಾಲು ಸ್ವೀಕಾರ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದರು.

ಶೇ. 80ರಷ್ಟು ಬಫರ್ ಝೋನ್ ಹೊಂದಿರುವ ಗ್ರಾಮದಲ್ಲಿ ಕಟ್ಟಡ ನಿರ್ಮಾಣಕ್ಕೆ ಕಳುಹಿಸಿದ ಅರ್ಜಿಗಳ ವಿಲೇವಾರಿ ವಿಳಂಬ ಬಗ್ಗೆಯೂ ಗಮನ ಸೆಳೆಯಲಾಯಿತು. ಹೊಸ ನಿಯಮಗಳ ಬಗ್ಗೆ ಗೊಂದಲ ಇರುವುದಾಗಿ ತಿಳಿಸಲಾಯಿತು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ ಮತ್ತು ಸಿಆರ್‌ಝಡ್ ಅಧಿಕಾರಿಗಳ ಜತೆಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸುವುದಾಗಿ ತಹಶೀಲ್ದಾರ್ ಮತ್ತು ತಾ.ಪಂ. ಇಒ ಭರವಸೆ ನೀಡಿದರು.

ಹೆಜಮಾಡಿ ಗ್ರಾಮದ ಎನ್‌ಎಸ್ ರಸ್ತೆಯಿಂದ ವಾರ್ಡ್ ನಂಬರ್‌ 5ರಲ್ಲಿ ರಸ್ತೆಯ ಜಾಗವನ್ನು ಸ್ಥಳೀಯರೊಬ್ಬರು ಅತಿಕ್ರಮಿಸಿ ಸಾರ್ವಜನಿಕ ಓಡಾಟಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆ, ತಹಶೀಲ್ದಾರ್ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ವಾರದೊಳಗೆ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದರು.

ಟೋಲ್ ನಿರ್ಮಾಣ ಸಂದರ್ಭ ಸ್ಥಳಾಂತರಿಸಿದ್ದ 14 ಕುಟುಂಬಗಳಿಗೆ ಗ್ರಾ.ಪಂ. ಕಚೇರಿ ಸಮೀಪ ಮನೆ ನಿರ್ಮಿಸುತ್ತಿದ್ದು, 9 ವರ್ಷ ಕಳೆದರೂ ಪೂರ್ಣಗೊಂಡಿಲ್ಲ ಆಗ್ರಹಿಸಿದರು.

ಹೆಜಮಾಡಿ ಗ್ರಾ.ಪಂ. ಪಿಡಿಒ ಇನಾಯತುಲ್ಲಾ ಬೇಗ್ ಸ್ವಾಗತಿಸಿದರು. ಲೆಕ್ಕಾಧಿಕಾರಿ ನಿರ್ಮಲಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪಾಂಡುರಂಗ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ತಾ.ಪಂ. ಇಒ ನವೀನ್ ಕುಮಾರ್, ಸಹಾಯಕ ನಿರ್ದೇಶಕಿ ಚಂದ್ರಕಲಾ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ಹೆಜಮಾಡಿ ವಿಎ ಶ್ರೀಕಾಂತ್ ದೇವಾಡಿಗ ಇದ್ದರು.

ಕೇರಾ ಸುರಕ್ಷಾ ಬಾಂಡ್ ವಿತರಣೆ: ತೆಂಗಿನ ಮರ ಹತ್ತುವ ನಾಲ್ವರು ಕಾರ್ಮಿಕರಿಗೆ ಕೇರಾ ಸುರಕ್ಷಾ ಬಾಂಡ್ ವಿತರಿಸಲಾಯಿತು. ಸಂಘಟನೆಯ ಮುಂದಾಳು ಪ್ರಾಣೇಶ್ ಹೆಜ್ಮಾಡಿ ಈ ಬಗ್ಗೆ ಮಾಹಿತಿ ನೀಡಿದರು.

ಪಿಂಚಣಿ ಅದೇಶ ಪತ್ರ ವಿತರಣೆ: 10 ಮಂದಿ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಲಾಯಿತು. 12 ಅರ್ಜಿಗಳು ಅಹವಾಲು ಸ್ವೀಕಾರ ಬಂದಿದ್ದು, ಈ ಪೈಕಿ 2 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.