ADVERTISEMENT

ಸೌದಿಯಿಂದ ಮರಳಿದ ಹರೀಶ್ ಬಂಗೇರ: 20 ತಿಂಗಳ ಬಳಿಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 8:51 IST
Last Updated 18 ಆಗಸ್ಟ್ 2021, 8:51 IST
ಸೌದಿಯಿಂದ ಬಿಡುಗಡೆಯಾಗಿರುವ ಹರೀಶ್ ಬಂಗೇರ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ನಿ ಹಾಗೂ ಸ್ನೇಹಿತ ಬರಮಾಡಿಕೊಂಡರು.
ಸೌದಿಯಿಂದ ಬಿಡುಗಡೆಯಾಗಿರುವ ಹರೀಶ್ ಬಂಗೇರ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ನಿ ಹಾಗೂ ಸ್ನೇಹಿತ ಬರಮಾಡಿಕೊಂಡರು.   

ಕುಂದಾಪುರ (ಉಡುಪಿ): ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಹಾಕಿದ ಆರೋಪದಡಿ ಸೌದಿ ಅರೆಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಬೀಜಾಡಿಯ ಹರೀಶ್ ಬಂಗೇರ ಆರೋಪಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

ಮಾಡದ ತಪ್ಪಿಗೆ 20 ತಿಂಗಳು ಜೈಲು ಶಿಕ್ಷೆ ಅನುಭವಿಸಿರುವ ಹರೀಶ್ ಬಂಗೇರ ಬುಧವಾರ ನಸುಕಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭ ಪತ್ನಿ ಹಾಗೂ ಸ್ನೇಹಿತರು ಬರಮಾಡಿಕೊಂಡರು.

ಘಟನೆ ವಿವರ: ಹರೀಶ್ ಬಂಗೇರ ಸೌದಿಯ ಧಮನ್ ಆಲ್ ಹಸಾದ ಕಾರ್ಟೂನ್ ಕಾರ್ಖಾನೆಯಲ್ಲಿ ಹಲವು ವರ್ಷಗಳಿಂದ ಎಸಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು. ಕಿಡಿಗೇಡಿಗಳು ಹರೀಶ್ ಬಂಗೇರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಸೌದಿ ದೊರೆ ಹಾಗೂ ಮೆಕ್ಕಾ ವಿರುದ್ಧ ಸಂದೇಶ ಹಾಕಿದ್ದರು. ಈ ಸಂಬಂಧ ಸೌದಿ ಪೊಲೀಸರು ಬಂಗೇರ ಅವರನ್ನು 2019, ಡಿ.22ರಂದು ಬಂಧಿಸಿದ್ದರು.

ADVERTISEMENT

ಪತಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದೆ ಎಂದು ಪತ್ನಿ ಸಮನಾ ಉಡುಪಿಯ ಸೆನ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಮೂಡಬಿದರೆಯ ಅಬ್ದುಲ್ ಹುಯೇಜ್ ಹಾಗೂ ಅಬ್ದುಲ್ ತುಯೇಜ್ ಎಂಬುವರನ್ನು ಬಂಧಿಸಿದ್ದರು.

ಬಳಿಕ ಸೌದಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಹರೀಶ್‌ ಬಂಗೇರ ಬಿಡುಗಡೆಗೆ ಮನವಿ ಮಾಡಲಾಗಿತ್ತು. ಸರ್ಕಾರ ಹಾಗೂ ಸಂಘ ಸಂಸ್ಥೆಗಳ ನಿರಂತರ ಪ್ರಯತ್ನದ ಫಲವಾಗಿ ಬಂಗೇರ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.