ADVERTISEMENT

ಹೆಗ್ಗಡೆ, ಧರ್ಮಸ್ಥಳ ವಿರುದ್ಧದ ಅಪಪ್ರಚಾರ ನಿಲ್ಲಲಿ: ಶಾಸಕ ಕಿರಣ್‌ಕುಮಾರ ಕೊಡ್ಗಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:04 IST
Last Updated 22 ಆಗಸ್ಟ್ 2025, 5:04 IST
ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್ ಅವರನ್ನು ಬುಧವಾರ ಭೇಟಿಯಾದ ಭಕ್ತರು, ಅಪಪ್ರಚಾರ ತಡೆಯುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್ ಅವರನ್ನು ಬುಧವಾರ ಭೇಟಿಯಾದ ಭಕ್ತರು, ಅಪಪ್ರಚಾರ ತಡೆಯುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ಕುಂದಾಪುರ: ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂಬುದು ನಮ್ಮ ಒಕ್ಕೊರಲ ಆಗ್ರಹವಾಗಿದ್ದು, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾಡುತ್ತಿರುವ ಅಪಪ್ರಚಾರ ಖಂಡನೀಯ ಎಂದು ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.

ಕುಂದಾಪುರದ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಗುರುವಾರ ನಡೆದ ಜನಾಗ್ರಹ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧಾರ ರಹಿತ ಅಪಪ್ರಚಾರದಲ್ಲಿ ತೊಡಗಿದ ವ್ಯಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದೂ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಕ್ಷೇತ್ರದ ಡಿ.ವೀರೇಂದ್ರ ಹೆಗ್ಗಡೆ ಮಾಡುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಸಂಘದ ಮೂಲಕ ಆರ್ಥಿಕ ಸಹಾಯ ಮಾಡಿ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಹಕಾರ ಮಾಡಿದ್ದಾರೆ. ಶಿಕ್ಷಕರ ಕೊರತೆಯನ್ನು ಜ್ಞಾನದೀಪ ನೀಗಿಸಿದೆ. ಸಂಸ್ಕೃತಿ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಧಾರ್ಮಿಕ ಪುಣ್ಯ ಕ್ಷೇತ್ರದ ಮೇಲೆ ನಡೆಯುತ್ತಿರುವ ಅಪಪ್ರಚಾರಗಳನ್ನು ಕೂಡಲೇ ನಿಲ್ಲಿಸಬೇಕು ಎಂದರು.

ADVERTISEMENT

ಹಿಂದೂ ಸಂಘಟನೆಯ ಮುಖಂಡ ಕಟ್ಕೆರೆ ಪ್ರೇಮಾನಂದ ಶೆಟ್ಟಿ ಮಾತನಾಡಿ, ‘ಸೌಜನ್ಯ ಪ್ರಕರಣವನ್ನು ನೆಪವಾಗಿಸಿಕೊಂಡು ಶ್ರದ್ಧಾ ಕೇಂದ್ರವನ್ನು ಗುರಿಯಾಗಿಸಿ ಅಪಪ್ರಚಾರ ನಡೆಸಲಾಗುತ್ತಿದೆ. ಧರ್ಮಸ್ಥಳ ಪುಣ್ಯ ಕ್ಷೇತ್ರವನ್ನು ಸರ್ಕಾರದ ವಶಕ್ಕೆ ಒಪ್ಪಿಸುವ ಷಡ್ಯಂತ್ರಕ್ಕೆ ಅಮಾಯಕ ಹೆಣ್ಣು ಮಗಳ ಕೊಲೆ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಹಿಂದೂ ಸಮಾಜದ ಹಣವನ್ನು ಸಾರಾಸಗಟಾಗಿ ಎತ್ತಿಕೊಂಡು ಹೋಗುತ್ತಿರುವ ದರೋಡೆಕೋರರಿಗೆ ಈ ಪವಿತ್ರವಾದ ಧರ್ಮಸ್ಥಳವನ್ನು ಹಸ್ತಾಂತರಿಸುವ ಕಾರ್ಯವನ್ನು ಎಂದಿಗೂ ಹಿಂದೂ ಸಮಾಜ ಒಪ್ಪಿಕೊಳ್ಳುವುದಿಲ್ಲ. ಸಮಸ್ತ ಹಿಂದೂ ಸಮಾಜ ಒಗ್ಗೂಡಿ ಧರ್ಮಸ್ಥಳದ ಮೇಲೆ ಆಗಬಹುದಾದ ಬೌದ್ಧಿಕ ಹಾಗೂ ಶ್ರದ್ಧಾ ಆಕ್ರಮಣಗಳನ್ನು ತಡೆಯುತ್ತೇವೆ’ ಎಂದರು.

ಜಿಲ್ಲಾ ಕಸಪಾ ಸ್ಥಾಪಕಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್, ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೆಬ್ರಿ, ಧಾರ್ಮಿಕ ಮುಂದಾಳು ಮಲ್ಯಾಡಿ ಶಿವರಾಮ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಯಕ್ಷಗಾನ ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್ ಮಾತನಾಡಿದರು.

ಪುರಸಭೆಯ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ಮಾಧ್ಯಮ ಅಕಾಡೆಮಿ ಸದಸ್ಯ ಯು.ಎಸ್.ಶೆಣೈ, ರಥಶಿಲ್ಪಿ ರಾಜಗೋಪಾಲಾಚಾರ್ಯ, ಡಾ.ಅತುಲ್ ಕುಮಾರ್ ಶೆಟ್ಟಿ, ವಕೀಲ ಉಮೇಶ್ ಶೆಟ್ಟಿ ಶಾನ್ಕಟ್ಟು, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪ್ರಮುಖರಾದ ಅಶೋಕ್ ಕುಮಾರ್ ಕೊಡ್ಗಿ, ಸುಬ್ರಹ್ಮಣ್ಯ ಶೆಟ್ಟಿ, ಅಶೋಕ್ ಕೆರೆಕಟ್ಟೆ, ಮಂಜು ಬಿಲ್ಲವ, ಪ್ರದೀಪ್ ಶೆಟ್ಟಿ, ಬಶೀರ್ ಸಾಹೇಬ್ ಪ್ಲೆಸೆಂಟ್, ಸುರೇಶ್ ಶೆಟ್ಟಿ ಗೋಪಾಡಿ ಭಾಗವಹಿಸಿದ್ದರು.

ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಜಯರಾಮ್ ಗೌಡ, ನಗರ ಠಾಣೆಯ ಪಿಎಸ್‌ಐ ನಂಜಾ ನಾಯ್ಕ್, ಸಂಚಾರ ಠಾಣೆಯ ಪಿಎಸ್‌ಐ ಸುದರ್ಶನ್ ಹಾಗೂ ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.

ಖಾವಂದರು ಎಂದರೆ ನಡೆದಾಡುವ ದೇವರು. ಕಷ್ಟ ಬಂದಾಗಲೆಲ್ಲಾ ನಾವು ಧರ್ಮಸ್ಥಳದ ಮಂಜುನಾಥನನ್ನು ನೆನೆಯುವ ನಮ್ಮ ನಂಬಿಕೆಗಳಿಗೆ ಧಕ್ಕೆಯಾಗುತ್ತಿದೆ
ಶಂಕರ್ ಅಂಕದಕಟ್ಟೆ ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.