ADVERTISEMENT

ಉಡುಪಿ: ಕೊರೊನಾ ಸೋಂಕು ತಡೆಗೆ ವಿಭಿನ್ನ ಯತ್ನ, ಕೈತೊಳೆದರಷ್ಟೆ ಆಟೊದೊಳಗೆ ಪ್ರವೇಶ

ಪ್ರಜಾವಾಣಿ ವಿಶೇಷ
Published 24 ಜೂನ್ 2020, 19:30 IST
Last Updated 24 ಜೂನ್ 2020, 19:30 IST
ಕೊರೊನಾ ಸೋಂಕು ಹರಡುವಿಕೆ ತಡೆಗೆ ಆಟೊದಲ್ಲಿ ನಲ್ಲಿ ಹಾಗೂ ಸ್ಯಾನಿಟೈಸರ್ ಅಳವಡಿಸಿರುವ ಚಾಲಕ ಬಶೀರ್ ಅಹಮ್ಮದ್.
ಕೊರೊನಾ ಸೋಂಕು ಹರಡುವಿಕೆ ತಡೆಗೆ ಆಟೊದಲ್ಲಿ ನಲ್ಲಿ ಹಾಗೂ ಸ್ಯಾನಿಟೈಸರ್ ಅಳವಡಿಸಿರುವ ಚಾಲಕ ಬಶೀರ್ ಅಹಮ್ಮದ್.   

ಉಡುಪಿ: ಮಣಿಪಾಲದ ಬಶೀರ್ ಅಹಮ್ಮದ್ ಅವರ ಆಟೊ ಹತ್ತಬೇಕಾದರೆ ಗ್ರಾಹಕರು ಕಡ್ಡಾಯವಾಗಿ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಂಡು ಹತ್ತಬೇಕು. ಹಾಗೆಂದು, ಗ್ರಾಹಕರು ಮನೆಯಿಂದ ಸ್ಯಾನಿಟೈಸರ್, ನೀರು ತರಬೇಕಿಲ್ಲ. ಎಲ್ಲವೂ ಆಟೊದೊಳಗೆ ಲಭ್ಯವಿದೆ. ಕೊರೊನಾ ಸೋಂಕು ಹರಡುವಿಕೆ ತಡೆಗೆ ಬಶೀರ್ ಕಂಡುಕೊಂಡಿರುವ ಉಪಾಯ ಇದು.

ಐದು ತಿಂಗಳ ಹಿಂದೆ ಬಶೀರ್ ಹೊಸ ಆಟೊ ಖರೀದಿಸಿದ್ದರು. ಒಂದೆರಡು ತಿಂಗಳಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ರಿಕ್ಷಾವನ್ನು ಮನೆಯಲ್ಲೇ ನಿಲ್ಲಿಸಬೇಕಾಯಿತು. ಲಾಕ್‌ಡೌನ್ ಬಳಿಕ ಆಟೊ ಓಡಿಸಲು ಅನುಮತಿ ಸಿಕ್ಕರೂ ಕೊರೊನಾ ಸೋಂಕು ಹರಡುವಿಕೆಯ ಭಯ ಅವರನ್ನು ಕಾಡುತ್ತಲೇ ಇತ್ತು.

ಇದಕ್ಕೆ ಪರಿಹಾರವಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಗ್ರಾಹಕರಿಗೆ ಸೋಂಕು ಹರಡದಂತೆ ಆಟೊದಲ್ಲಿ ಕೆಲವು ಬದಲಾವಣೆ ಮಾಡಿಸಿಕೊಂಡಿದ್ದಾರೆ.ಆಟೊ ಪ್ರವೇಶದ್ವಾರದಲ್ಲಿ ನಲ್ಲಿ ಅಳವಡಿಸಿದ್ದಾರೆ. ನಲ್ಲಿಗೆ ಪೈಪ್ ಆಕಾರದಲ್ಲಿ ಐದಾರು ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ ಜೋಡಿಸಲಾಗಿದೆ. ನಲ್ಲಿಯ ಪಕ್ಕದಲ್ಲೇ ಸ್ಯಾನಿಟೈಸರ್ ಕೂಡ ಇಡಲಾಗಿದೆ.

ADVERTISEMENT

ಆಟೊ ಹತ್ತುವ ಮೊದಲು ಗ್ರಾಹಕರು ಸ್ಯಾನಿಟೈಸರ್ ಬಳಸಿ ಕೈತೊಳೆಯಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ನಂತರವಷ್ಟೆ ಆಟೊ ಹತ್ತಲು ಅವಕಾಶ ನೀಡಲಾಗುವುದು ಎಂದರು ಬಶೀರ್ ಅಹಮ್ಮದ್‌ ಮಾಹಿತಿ ನೀಡಿದರು.‌

ಗ್ರಾಹಕರು ಕೆಮ್ಮಿದಾಗ, ಸೀನಿದಾಗ ಸೋಂಕು ಹರಡುವ ಅಪಾಯ ಹೆಚ್ಚಾಗಿರುವುದರಿಂದ ರಿಕ್ಷಾ ಮಧ್ಯೆ ಕರ್ಟನ್ ಅಳವಡಿಸಲಾಗಿದೆ. ಹಣ ಪಡೆಯಲು ಕರ್ಟನ್‌ನ ಒಂದು ಬದಿಯಲ್ಲಿ ರಂಧ್ರ ಮಾಡಲಾಗಿದ್ದು, ಅಲ್ಲಿಂದಲೇ ಪಡೆಯಲಾಗುತ್ತದೆ ಎನ್ನುತ್ತಾರೆ ಬಶೀರ್.

ಆಟೊದೊಳಗೆ ನಲ್ಲಿ, ಸ್ಯಾನಿಟೈಸರ್, ಕರ್ಟನ್‌ ಅಳವಡಿಕೆ ಚಾಲಕರಿಗೆ ದುಬಾರಿ ಎನಿಸಿದರೂ ವೈಯಕ್ತಿಕ ಹಾಗೂ ಸಮುದಾಯದ ಆರೋಗ್ಯದ ದೃಷ್ಟಿಯಿಂದ ಅಗತ್ಯ. ಆಟೊ ಚಾಲಕರು ಸುಲಭವಾಗಿ ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿರುವುದರಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿರುವುದು ಅಗತ್ಯ ಎಂಬುದು ಅವರ ನಿಲುವು.

ಹೊಸ ಪ್ರಯತ್ನಕ್ಕೆ ಗ್ರಾಹಕರು ಕೂಡ ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಬಂದ ಬಳಿಕ ಎಲ್ಲೆಡೆಯಿಂದ ಪ್ರಶಂಸೆ ಬರುತ್ತಿದೆ. ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು ಬಶೀರ್.

ಬಶೀರ್ ಅಹಮ್ಮದ್ 15 ವರ್ಷ ಸೌದಿ ಅರೆಬಿಯಾದಲ್ಲಿ ಕೆಲಸ ಮಾಡಿ ಒಂದೂವರೆ ವರ್ಷದ ಹಿಂದೆ ಉಡುಪಿಗೆ ಬಂದು ಆಟೊ ಓಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.