ಉಡುಪಿ: ಬೆಳಕಿನ ಹಬ್ಬ ದೀಪಾವಳಿ ಪೂರ್ವಭಾವಿಯಾಗಿ ಭಾನುವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ತರಕಾರಿ, ಹಣ್ಣು ಹಂಪಲು, ಬಟ್ಟೆ, ಸಿಹಿತಿಂಡಿಗಳ ಅಂಗಡಿಯಗಳಲ್ಲಿ ಗ್ರಾಹಕರು ಕಿಕ್ಕಿರಿತು ತುಂಬಿದ್ದರು.
ರಥಬೀದಿ, ಸರ್ವೀಸ್ ಬಸ್ ನಿಲ್ದಾಣದ ಬಳಿ, ಬ್ರಹ್ಮಗಿರಿ, ಮಣಿಪಾಲ ಮೊದಲಾದ ಕಡೆಗಳಲ್ಲಿ ರಸ್ತೆ ಬದಿ ಹೂವಿನ ಮಾರಾಟ ಗರಿಗೆದರಿತ್ತು.
ಹಾಸನ, ಮಂಡ್ಯ, ಹಾವೇರಿ ಮೊದಲಾದೆಡೆಳ ಹೂವಿನ ವ್ಯಾಪಾರಿಗಳು ಈ ಬಾರಿಯೂ ಹೂವು ಮಾರಾಟಕ್ಕೆ ಬಂದಿದ್ದರು. ಪ್ರತಿ ಹಬ್ಬಗಳ ಸಂದರ್ಭಗಳಲ್ಲೂ ಇವರು ನಗರದಲ್ಲಿ ಹೂವಿನ ಮಾರಾಟ ನಡೆಸುತ್ತಾರೆ.
ಚೆಂಡು ಹೂವು, ಸೇವಂತಿಗೆ, ಕಾಕಡ ಮೊದಲಾದವುಗಳ ದರ ಮಾರಿಗೆ ₹100 ಇತ್ತು. ಈ ಬಾರಿ ಹೂವು ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿದ ಕಾರಣ ಹೂವಿನ ಬೆಳೆನಷ್ಟವಾಗಿತ್ತು ಎಂದು ಬಹುತೇಕ ವ್ಯಾಪಾರಿಗಳು ಅಳಲು ತೋಡಿಕೊಂಡರು.
ಬಟ್ಟೆ ಅಂಗಡಿಗಳಲ್ಲೂ ಹಬ್ಬದ ಖರೀದಿ ಜೋರಾಗಿತ್ತು. ರಥಬೀದಿ ಮೊದಲಾದೆಡೆ ಗ್ರಾಹಕರು ಪೂಜಾ ಸಾಮಗ್ರಿಗಳನ್ನೂ ಖರೀದಿಸಿದರು.
ಹಣತೆಗೆ ಹೆಚ್ಚಿದ ಬೇಡಿಕೆ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆವೆ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಬೇಡಿಕೆ ಕುದುರಿದೆ. ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಹಣತೆ ಮಾರಾಟ ಜೋರಾಗಿತ್ತು.
₹5 ರಿಂದ ಹಿಡಿದು ₹50ರ ವರೆಗಿನ ವಿವಿಧ ಗಾತ್ರದ ಹಣತೆಗಳನ್ನು ಮಾರಾಟಕ್ಕಿಡಲಾಗಿತ್ತು. ಪಟಾಕಿ ಅಂಗಡಿಗಳಲ್ಲಿ ವಿವಿಧ ಬಗೆಯ ಕ್ಯಾಂಡಲ್‌ಗಳು ಮಾರಾಟಕ್ಕಿದ್ದರೂ ಹಣತೆ ಖರೀದಿಸುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ.
ಫ್ಯಾನ್ಸಿ ಅಂಗಡಿಗಳಲ್ಲಿ ವಿವಿಧ ಗಾತ್ರದ, ಬಣ್ಣ ಬಣ್ಣದ ಆಕರ್ಷಕ ಗೂಡುದೀಪಗಳನ್ನು ಮಾರಾಟಕ್ಕಿರಿಸಿದ್ದು, ಖರೀದಿ ಭರಾಟೆ ಜೋರಾಗಿತ್ತು. ಮಣಿಪಾಲ, ಬೀಡಿನಗುಡ್ಡೆ ಮೊದಲಾದೆಡೆ ಪಟಾಕಿ ಅಂಗಡಿಗಳಲ್ಲೂ ಜನರು ಕಿಕ್ಕಿರಿದು ತುಂಬಿದ್ದರು.
ನವರಾತ್ರಿ ಹಬ್ಬದ ನಂತರ ತುಸು ಇಳಿಕೆಯಾಗಿದ್ದ ತರಕಾರಿ ಹಣ್ಣಿನ ದರ ದೀಪಾವಳಿ ಹಬ್ಬದ ವೇಳೆ ಮತ್ತೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಬರೆ ಎಳೆದಿದೆ. ಮಂಗಳೂರು ಸೌತೆಕಾಯಿ ಕೆ.ಜಿ.ಗೆ ₹35 ಬೆಂಡೆಕಾಯಿ ಕೆ.ಜಿ.ಗೆ ₹48 ಬೀನ್ಸ್ ದರ ಕೆ.ಜಿ.ಗೆ ₹70 ಆಗಿದ್ದು ಬಹುತೇಕ ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ಹೆಚ್ಚಾಗಿದೆ. ಏಲಕ್ಕಿ ಬಾಳೆ ಹಣ್ಣಿನ ದರವು ಕೆ.ಜಿ.ಗೆ ₹ 100ರ ಗಡಿ ದಾಟಿದೆ . ಪೂಜೆಯ ಸಂದರ್ಭದಲ್ಲೂ ಏಲಕ್ಕಿ ಬಾಳೆ ಹಣ್ಣನ್ನು ಬಳಸುವ ಕಾರಣ ಬೇಡಿಕೆಯೂ ಹೆಚ್ಚಾಗಿದೆ.
‘ಜೀವನದಲ್ಲಿ ಹೊಸ ಸಂಚಲನ ಮೂಡಬೇಕಾದರೆ ಹಬ್ಬಗಳು ಅತ್ಯಗತ್ಯ. ಮತ್ತೆ ಹೊಸ ಆಶಾಕಿರಣದೊಂದಿಗೆ ಜಗತ್ತಿಗೆ ಬೆಳಕನ್ನು ಕೊಡುವ ದೀಪಾವಳಿ ಹಬ್ಬ ಬಂದಿದೆ. ಈ ಹಬ್ಬವನ್ನು ವ್ಯಾಪಕವಾಗಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕೇವಲ ದೀಪವಷ್ಟೇ ಬೆಳಗಿದರೆ ಸಾಲದು ನಮ್ಮೆಲ್ಲರ ಜ್ಞಾನ ದೀಪವೂ ಬೆಳಗಬೇಕು. ಈ ಕಾರಣಕ್ಕೆ ಆಧ್ಯಾತ್ಮಿಕ ಬೆಳಕನ್ನು ನೀಡುವ ಭಗವದ್ಗೀತೆಯನ್ನು ನಾವು ಹೃದಯದಲ್ಲಿರಿಸಬೇಕು. ಗೀತೆಯ ಬೆಳಕು ಯಾವಾಗಲೂ ನಮಗೆ ಮಾರ್ಗದರ್ಶನ ನೀಡುತ್ತಿದೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ದೀಪಾವಳಿ ಸಂದೇಶದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.