ADVERTISEMENT

ಮಾದಕ ವಸ್ತು: ದೇಶದ ಗಂಭೀರ ಸಮಸ್ಯೆ– ರಾಘವೇಂದ್ರ ಭಟ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:32 IST
Last Updated 4 ಫೆಬ್ರುವರಿ 2026, 2:32 IST
<div class="paragraphs"><p>ರೋಟರಿ ಮಿಡ್‌ಟೌನ್‌ ಅಧ್ಯಕ್ಷ ರಾಘವೇಂದ್ರ ಭಟ್ ಮಾಹಿತಿ ಶಿಬಿರ ಉದ್ಘಾಟಿಸಿದರು</p></div>

ರೋಟರಿ ಮಿಡ್‌ಟೌನ್‌ ಅಧ್ಯಕ್ಷ ರಾಘವೇಂದ್ರ ಭಟ್ ಮಾಹಿತಿ ಶಿಬಿರ ಉದ್ಘಾಟಿಸಿದರು

   

ಬ್ರಹ್ಮಾವರ: ಮಾದಕ ವಸ್ತುಗಳ ಸೇವನೆ ವಿರಾಡ್ರೂಪ ತಾಳಿ ವಿಶ್ವವ್ಯಾಪಿಯಾಗಿದೆ. ಅಮಲು ಪದಾರ್ಥಗಳ ಸೇವನೆ ಸಾಮಾಜಿಕ, ಆರೋಗ್ಯ ಸಮಸ್ಯೆ ಮಾತ್ರವಲ್ಲದೆ ದೇಶದ ಯುವಜನರು ಎದುರಿಸುತ್ತಿರುವ ಭೀಕರ ಸಮಸ್ಯೆ. ಕೆಲವು ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯನ್ನು ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದು, ಅವರಿಗೆ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದು ರೋಟರಿ ಮಿಡ್‌ಟೌನ್‌ ಅಧ್ಯಕ್ಷ ರಾಘವೇಂದ್ರ ಭಟ್ ಹೇಳಿದರು.

ಬಾಳ್ಕುದ್ರು ಹಂಗಾರಕಟ್ಟೆಯ ಅಭಿವೃದ್ಧಿ ಸಂಸ್ಥೆ, ಕುಕ್ಕೆಹಳ್ಳಿ ಗ್ರಾಮ ಪಂಚಾಯಿತಿ, ರೋಟರಿ ಕ್ಲಬ್‌ ಉಡುಪಿ ಮಿಡ್‌ಟೌನ್, ಕುಕ್ಕೆಹಳ್ಳಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಆಶ್ರಯದಲ್ಲಿ ನಡೆದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಕುಕ್ಕೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರಂದರ ಕೋಟ್ಯಾನ್ ಮಾತನಾಡಿ, ವ್ಯಕ್ತಿಗಳ ನಡುವಿನ ಮನಸ್ತಾಪ, ನೋವು– ನಿರಾಶೆ, ಹಣಕಾಸಿನ ಮುಗ್ಗಟ್ಟು, ಉದ್ಯೋಗದಲ್ಲಿನ ಸಮಸ್ಯೆ, ಲೈಂಗಿಕ ಸಮಸ್ಯೆ, ಮಾನಸಿಕ ಒತ್ತಡದಿಂದ ವಿಮುಖರಾಗಲು ಮಾದಕ ವಸ್ತುಗಳ ಸೇವನೆ ಮಾಡುತ್ತಾ ಅದನ್ನೇ ಚಟವಾಗಿ ಬೆಳೆಸಿಕೊಂಡು ದಾಸರಾಗುತ್ತಾರೆ. ಅದನ್ನು ತಡೆಗಟ್ಟಲು ಇಂತಹ ಮಾಹಿತಿ ಕಾರ‌ರಯಕ್ರಮಗಳಿಂದ ವಿದ್ಯಾರ್ಥಿ ದೆಸೆಯಿಂದಲೇ ಎಚ್ಚರಿಸಿದಾಗ ದುಶ್ಚಟಕ್ಕೆ ಬಲಿಯಾಗದೆ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಅನಿತಾ ನರೇಂದ್ರ ಕುಮಾರ್ ಮಾತನಾಡಿ ಮಾದಕ ವಸ್ತುಗಳು, ದುಶ್ಚಟಕ್ಕೆ ಬಲಿಯಾದವರು ಸಾಮಾಜಿಕ, ನೈತಿಕ, ಧಾರ್ಮಿಕ ಮೌಲ್ಯಗಳನ್ನು ತಿರಸ್ಕರಿಸಿ ಸಮಾಜಕ್ಕೆ ಕಂಟಕಪ್ರಾಯರಾಗಿ ಬದುಕುತ್ತಾರೆ ಎಂಬುದನ್ನು ಕಥೆ, ವಿವಿಧ ಚಟುವಟಿಕೆಯ ಮೂಲಕ ಮನವರಿಕೆ ಮಾಡಿಕೊಟ್ಟರು. 

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ವಿಶ್ವನಾಥ ಬೆಳಂಪಳ್ಳಿ, ರೋಟರಿ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆ.ಎಲ್, ದೈಹಿಕ ಶಿಕ್ಷಣ ಶಿಕ್ಷಕ ಗಣೇಶ ಭಾಗವಹಿಸಿದ್ದರು. ಮುಖ್ಯಶಿಕ್ಷಕಿ ಸರಸ್ವತಿ ಸ್ವಾಗತಿಸಿದರು. ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತಾಡಿದರು. ದಿವ್ಯಾ ಉಡುಪಿ ನಿರೂಪಿಸಿದರು. ಸುಧಾ ಭಟ್ ಅಮಾಸೆಬೈಲು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.