
ಕುಂದಾಪುರ: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದುಡಿಯುತ್ತಿರುವ ದೇಶದ ಶಿಕ್ಷಣ ಸಂಸ್ಥೆಗಳ ಸೇವೆ ಅನನ್ಯವಾದುದು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ಇಲ್ಲಿನ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಬಿಎಂಎಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕುಂದಾಪುರ ಎಜುಕೇಷನ್ ಸೊಸೈಟಿಯ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಪ್ರಗತಿಯಲ್ಲಿ ಶಿಕ್ಷಣದ ಅಭಿವೃದ್ಧಿ ಉಲ್ಲೇಖನೀಯ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಕಲ್ಪ ಹಾಗೂ ಮೌಲ್ಯಯುತ ಶಿಕ್ಷಣದ ಪ್ರತಿಬಿಂಬ, ಸಾಮಾಜಿಕ ಕಾಳಜಿ ಇಲ್ಲಿನ ವಿದ್ಯಾ ಸಂಸ್ಥೆಗಳಲ್ಲಿ ಕಾಣುತ್ತಿದೆ. ಶಿಕ್ಷಣ ಹಾಗೂ ನೈತಿಕ ಶಿಕ್ಷಣದಿಂದ ಭಾರತ ಈ ಹಿಂದೆ ವಿಶ್ವಗುರುವಾಗಿತ್ತು. ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆಗಾಗಿ ಭಾರತ ವಿಶ್ವಮಾನ್ಯವಾಗಿತ್ತು. ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಸನಗಳು ದೇಶದ ಬೆಳವಣಿಗೆಗೆ ಪೂರಕವಾಗಿರುತ್ತದವೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಕ್ಕಳ ಕೊರತೆ ಕಾರಣಕ್ಕಾಗಿ ರಾಜ್ಯದ 7 ಸಾವಿರ ಶಾಲೆಗಳು ಮುಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವೈವಿಧ್ಯ ಸಂಸ್ಕೃತಿಯ ಭಾರತವನ್ನು ಬಿಟ್ಟು ಹೋಗುವಾಗ ಬ್ರಿಟಿಷ್ ಅಧಿಕಾರಿಗಳಿಗೂ ಬೇಸರವಿತ್ತು. ವಿಶ್ವದ ಬೇರೆ ದೇಶಗಳಿಗೆ ಸಾಲ ಕೊಡುವಷ್ಟು ಭಾರತದಲ್ಲಿ ಆರ್ಥಿಕ ಶಕ್ತಿಯ ಕ್ರೋಡೀಕರಣವಾಗಿದೆ. ಸ್ವಾತಂತ್ರ್ಯ ನಂತರ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಅಭಿವೃದ್ಧಿ ಸಾಧಿಸುತ್ತಿದೆ ಎಂದರು.
ಅಧ್ಯಾತ್ಮ ಚಿಂತಕ ಬಾಲಕೃಷ್ಣ ಗುರೂಜಿ ತಿರುಪತಿ ಅವರು, ಕರಾವಳಿ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿವೆ. ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಸ್ಥಳದಾನ ಮಾಡಿರುವವರ ಕೊಡುಗೆಯೂ ದೊಡ್ಡದು. ಧರ್ಮ ಹಾಗೂ ಜಾತಿ ಬೇರೆಯಾದರೂ ಕಲಿಯುವ ವಿದ್ಯೆ ಒಂದೇ ಆಗಿರುತ್ತದೆ. ಅನ್ನದಾನ ಪುಣ್ಯ ಕಾರ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಂದಾಪುರ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ ಅವರು, ಸಮಾಜದ ಎಲ್ಲರಿಗೂ ಯೋಗ್ಯ ಹಾಗೂ ಅಗತ್ಯ ಶಿಕ್ಷಣ ದೊರಕಬೇಕು ಎನ್ನುವ ಶಿಕ್ಷಣ ಯಜ್ಞದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಂತೃಪ್ತಿ ಇದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ ಎಂದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅರ್ಚಕ ಮೂರ್ತಿ ಕಾಳಿದಾಸ್ ಭಟ್, ಕುಂದಾಪುರ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ಎಚ್‌ಎಂಎಂ ಹಾಗೂ ವಿಕೆಆರ್ ಆಚಾರ್ಯ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಚಿಂತನಾ ರಾಜೇಶ್ ಇದ್ದರು.
ಪ್ರಾಂಶುಪಾಲ ಉಮೇಶ್ ಶೆಟ್ಟಿ ಕೊತ್ತಾಡಿ ಅವರು ಕುಂದಾಪುರ ಎಜುಕೇಷನ್ ಸೊಸೈಟಿ ಬೆಳೆದು ಬಂದ ಬಗೆ ವಿವರಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಸ್ವಾಗತಿಸಿದರು. ಉಪನ್ಯಾಸಕ ರಕ್ಷಿತ್ ರಾವ್ ಗುಜ್ಜಾಡಿ ಪರಿಚಯಿಸಿದರು. ಉಪನ್ಯಾಸಕಿ ಪೃಥ್ವಿಶ್ರೀ ಶೆಟ್ಟಿ ನಿರೂಪಿಸಿದರು. ಉಪನ್ಯಾಸಕ ಗಿರಿರಾಜ್ ವಂದಿಸಿದರು.
- ‘ವಿದ್ಯಾಸಂಸ್ಥೆಗಳಿಗೆ ಕಿರುಕುಳ ಸಲ್ಲದು’
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಅವರು ಶಿಕ್ಷಣ ಮತ್ತು ಆರೋಗ್ಯ ಸಂವಿಧಾನ ನೀಡಿರುವ ಹಕ್ಕು. ಆದರೆ ಈ ಎರಡು ಕ್ಷೇತ್ರಗಳು ಉಳ್ಳವರ ಪಾಲಾಗಿದೆ. ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ ಹಿರಿಯರು ನಿತ್ಯ ಸ್ಮರಣೀಯರಾಗಬೇಕು. ಕಾನೂನು ಹಾಗೂ ಕಾಯ್ದೆ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಕಿರುಕುಳ ನೀಡುವುದು ನಿಲ್ಲಬೇಕು. ಶಿಕ್ಷಕರ ಕೊರತೆ ಇದ್ದಾಗ ಮಕ್ಕಳಿಗೆ ಹೇಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.