ADVERTISEMENT

ಉಡುಪಿಯಲ್ಲಿ 19 ರಿಂದ ಚರಕ ಕೈಮಗ್ಗ ಉತ್ಪನ್ನಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:53 IST
Last Updated 16 ಡಿಸೆಂಬರ್ 2025, 7:53 IST
   

ಉಡುಪಿ: ಸಾಗರದ ಹೆಗ್ಗೋಡು-ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ಇದೇ 19ರಿಂದ 21 ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 7.30 ರವರೆಗೆ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ಕೈಮಗ್ಗದ ಹಾಗೂ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.

19ರಂದು ಬೆಳಿಗ್ಗೆ 11.30ಕ್ಕೆ ಪೂರ್ಣಪ್ರಜ್ಞ ಸೆಂಟರ್‌ ಫಾರ್‌ ರಿಸರ್ಚ್‌ ಅಂಡ್‌ ಡೆವಲಪ್‌ಮೆಂಟ್‌ನ ನಿರ್ದೇಶಕ ಕೃಷ್ಣ ಕೊತ್ತಾಯ ಅವರು ಮೇಳಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಮಾಹೆ ಯ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಮ್ಯೂನಿಕೇಷನ್‌ ನಿರ್ದೇಶಕಿ ಎಚ್‌.ಎಸ್.ಶುಭಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.‌ ಮಂಜುನಾಥ ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮೇಳದಲ್ಲಿ ಒಟ್ಟು 10 ಮಳಿಗೆಗಳು ಇರಲಿವೆ. ಚರಕದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು, ಸಿದ್ಧಉಡುಪುಗಳು ಇರಲಿವೆ. ಗುಳೇದಗುಡ್ಡದ ನೇಕಾರರ ಉತ್ಪನ್ನಗಳು ಸಿಗಲಿವೆ. ಮರಳಿ ಮಣ್ಣಿಗೆ ಯ ಮಣ್ಣಿನ ಮಡಿಕೆ-ಕುಡಿಕೆಗಳು, ಉತ್ತರ ಕರ್ನಾಟಕದ ಭಾಗದ ಅಪರೂಪದ ಸೀರೆಗಳು, ಇತರೆ ಬಟ್ಟೆಗಳು ಇರಲಿವೆ. ಶಿರಸಿಯ ತೇಜಸ್ವಿ ಅವರ ಸಾವಯವ ಉತ್ಪನ್ನಗಳು, ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನಗಳು, ಮಂಗಳೂರು ಹೆಲ್ತಿ ಫೀಸ್ಟ್‌ನ ವಿಶೇಷ ಆಹಾರ ಉತ್ಪನ್ನಗಳು, ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನಗಳು, ಕುಂದಾಪುರದ ಸಖಿ ಸೀರೆಗಳು ಹಾಗೂ ಸೀತಾ ಬುಕ್‌ ಸೆಂಟರ್‌ನ ಪುಸ್ತಕಗಳು ಲಭ್ಯ ಇವೆ ಎಂದೂ ಹೇಳಿದೆ.

20ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1ರವರೆಗೆ ಟೈ ಮತ್ತು ಡೈ ಕಾರ್ಯಾಗಾರ ಹಾಗೂ 21 ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ರವರೆಗೆ ಕಸೂತಿ ಕಾರ್ಯಾಗಾರ ನಡೆಯಲಿದೆ. ಈ ಮೇಳವನ್ನು ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಪವಿತ್ರ ವಸ್ತ್ರ ಯೋಜನೆಯಡಿ ಆಯೋಜಿಸಲಾಗಿದೆ.

ADVERTISEMENT

ಸಂಪರ್ಕಕ್ಕೆ: 63638 85215/ 74111 20862 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.