ಉಡುಪಿ: ‘ಕಾರ್ಕಳ ತಾಲ್ಲೂಕಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪರಶುರಾಮ ಮೂರ್ತಿ ನಿರ್ಮಾಣದಲ್ಲಿ ವಂಚಿಸಲಾಗಿದೆ’ ಎಂದು ಆರೋಪಿಸಿ ನೀಡಿದ್ದ ದೂರಿನ ಕುರಿತು ತನಿಖೆ ನಡೆಸಿರುವ ಪೊಲೀಸರು, ಕಾರ್ಕಳದ ಕೋರ್ಟ್‌ಗೆ 1,231 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಶಿಲ್ಪಿ ಕೃಷ್ಣನಾಯ್ಕ ಅವರು ಕಂಚಿನಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡದೇ, ಹಿತ್ತಾಳೆ ಲೋಹದಿಂದ ನಿರ್ಮಿಸಿರುವುದು ತಜ್ಞರ ಪರಿಶೀಲನಾ ವರದಿಯಿಂದ ಹಾಗೂ ತನಿಖೆಯಿಂದ ಸಾಬೀತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ ಕುಮಾರ್ ಹಾಗೂ ಎಂಜಿನಿಯರ್ ಸಚಿನ್ ವೈ. ಕುಮಾರ್ ಅವರು ಒಳಸಂಚು, ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ.
ಅರುಣ ಕುಮಾರ್ ಹಾಗೂ ಸಚಿನ್ ವೈ. ಕುಮಾರ್ ಅವರು ಕಾರ್ಯಾದೇಶದ ಷರತ್ತುಗಳನ್ನು ಪಾಲಿಸಿಲ್ಲ. 2023ರ ಅಕ್ಟೋಬರ್ 12 ರಂದು ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಉಮಿಕಲ್ ಬೆಟ್ಟದಿಂದ ಒಯ್ದು ಉಡುಪಿ ತಾಲ್ಲೂಕಿನ ಅಲೆವೂರು ಗ್ರಾಮದ ಪ್ರಗತಿ ನಗರದ ನಿರ್ಮಿತಿ ಕೇಂದ್ರದ ಶೆಡ್‌ನಲ್ಲಿ 2024ರ ಫೆಬ್ರುವರಿ 25ರ ವರೆಗೆ ಇರಿಸಿಕೊಂಡಿದ್ದಾರೆ. ಮೂರ್ತಿಯ ಸೊಂಟದಿಂದ ಮೇಲ್ಬಾಗವನ್ನು ಶಿಲ್ಪಿ ಕೃಷ್ಣ ನಾಯ್ಕ ಅವರಿಗೆ ಹಸ್ತಾಂತರ ಮಾಡಿದ್ದು, ಕೃಷ್ಣ ನಾಯ್ಕ ಅವರು ಅದನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ತಪ್ಪುಮಾಹಿತಿಯನ್ನು ನೀಡಿದ್ದಾರೆ ಎಂದೂ ಹೇಳಲಾಗಿದೆ.
ನಿರ್ಮಿತಿ ಕೇಂದ್ರದಿಂದ ಹಣ ಪಡೆದು ನಕಲಿ ಮೂರ್ತಿ ನಿರ್ಮಿಸಿ ಸರ್ಕಾರಕ್ಕೆ ವಂಚಿಸಲಾಗಿದೆ ಎಂದು ಆರೋಪಿಸಿ 2024 ಜೂನ್ 21 ರಂದು ಕೃಷ್ಣ ಶೆಟ್ಟಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.