ADVERTISEMENT

‘ರೈತರನ್ನು ಯಾಚಕರಾಗಿಸಿದ ಸರ್ಕಾರ’

ಜಿಲ್ಲಾ ರೈತ ಸಂಘದಿಂದ ರಾಷ್ಟ್ರೀಯ ರೈತ ದಿನಾಚರಣೆ, ಸಾಧಕ ರೈತರಿಗೆ ಸಮ್ಮಾನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:56 IST
Last Updated 24 ಡಿಸೆಂಬರ್ 2025, 6:56 IST
ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಾಧಕ ರೈತರಿಗೆ ಸಮ್ಮಾನ ಕಾರ್ಯಕ್ರಮ ಜರುಗಿತು
ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಾಧಕ ರೈತರಿಗೆ ಸಮ್ಮಾನ ಕಾರ್ಯಕ್ರಮ ಜರುಗಿತು   

ಉಡುಪಿ: ದೇಶದ ಪ್ರಭುತ್ವ, ಸರ್ಕಾರಗಳು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಪರಾವಲಂಬಿಯಾಗಿಸಿ, ನಿತ್ರಾಣಗೊಳಿಸಲು ಪ್ರಯತ್ನಿಸುತ್ತಿವೆ. ನಮ್ಮನ್ನು ದುರ್ಬಲರಾಗಿಸಿದರೆ ನಾವು ದೀನರಾಗುತ್ತೇವೆ. ಇಡೀ ದೇಶದ ರೈತರನ್ನು ಸರ್ಕಾರವು ಇಂದು ಯಾಚಕರ ವರ್ಗಕ್ಕೆ ತಂದು ನಿಲ್ಲಿಸಿದೆ ಎಂದು ಚಿಂತಕ ಸುರೇಶ್ ಕಂಜರ್ಪಣೆ ಹೇಳಿದರು.

ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಾಧಕ ರೈತರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಗಳು ಮೂರು ದಶಕಗಳಿಂದ ಕೃಷಿ ಕ್ಷೇತ್ರವನ್ನು ಕಳಚಿ ಹಾಕುವ ಕೆಲಸ ಮಾಡುತ್ತಾ ಬಂದಿದೆ. ಈ ಪ್ರಕ್ರಿಯೆ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವಾಗ ನಿಧಾನಗತಿಯಲ್ಲಿತ್ತು. ಈಗ ವೇಗ ಪಡೆದುಕೊಂಡಿದೆ. ರೈತರ ಆಶೋತ್ತರಗಳ ಅಭಿವ್ಯಕ್ತಿಯಾಗಿ ನಾಯಕರು ಕೆಲಸ ಮಾಡಿದರೆ ಮಾತ್ರ ರೈತರ ಬಲ ಹೊರ ಬರುತ್ತದೆ ಎಂದರು.

ADVERTISEMENT

ಸರ್ಕಾರವು ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯ ಖಚಿತತೆಯನ್ನು ಕೊಡುವುದಿಲ್ಲ. ಬದಲಾಗಿ ವಿಜ್ಞಾನಿಗಳು ಶಿಫಾರಸು ಮಾಡಿದ ತಳಿಗಳನ್ನು ಬೆಳೆಯಿರಿ ಎಂದು ಹೇಳುತ್ತದೆ. ಇದರಿಂದ ಇಳುವರಿ ಅಧಿಕವಾಗಿ ಬೇಡಿಕೆ ಇಲ್ಲದೆ ಕೃಷಿ ಉತ್ಪನ್ನಗಳನ್ನು ರಸ್ತೆಗೆ ಸುರಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ಬೆಳೆ ಯಾವಾಗ ಕಟಾವಿಗೆ ಬರುತ್ತದೆ ಎಂಬ ಮಾಹಿತಿ ಕೃಷಿ ಇಲಾಖೆಗೆ ಇದ್ದರೂ ಕನಿಷ್ಠ ಬೆಂಬಲ ಬೆಲೆ ಘೋಷಣೆ ವಿಳಂಬವಾಗುತ್ತಿದೆ. ಇದರಿಂದಾಗಿ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದರು.

ಇಂದು ಅತಿಯಾದ ರಾಸಾಯನಿಕಗಳನ್ನು ಬಳಸುವ ಮೂಲಕ ರೈತರು ಮಣ್ಣನ್ನು ಹಾಳು ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಿ ಯಶಸ್ಸು ಸಾಧಿಸಿದವರಿಂದ ರೈತರಿಗೆ ಮಾರ್ಗದರ್ಶನ ಕೊಡಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕು. ಮಾರುಕಟ್ಟೆ ಸಮಸ್ಯೆ ಸೇರಿದಂತೆ ರೈತರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿರಣ್ ತೋಳಾರ್, ರೋಹಿತ್ ಕುಮಾರ್ ಶೆಟ್ಟಿ, ಕಿದೂರು ಸದಾನಂದ ಶೆಟ್ಟಿ, ಕೃಷ್ಣದೇವಾ ಕಾರಂತ, ವಸಂತ ಹೆಗ್ಡೆ, ಸಂಜೀವ ಶೆಟ್ಟಿ, ಶರತ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಕೃಷ್ಣರಾಜ ಶೆಟ್ಟಿ ಚೋರಾಡಿ, ಅಶೋಕ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲೆಯ ಸಾಧಕ ರೈತರಾದ ಕೆ. ಸತೀಶ್ ಕುಮಾರ್ ಶೆಟ್ಟಿ ಯಡ್ತಾಡಿ, ಸೋಮಯ್ಯ ಕಾಂಚನ್ ಕಾಪು, ಕೂಡ್ಲಿ ಶ್ರೀನಿವಾಸ ಉಡುಪ, ಮಂಜುನಾಥ ನಾಯಕ್, ರಾಜು ದೇವಾಡಿಗ, ಯಶೋದಾ ಬಿ. ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.

ಸತೀಶ್ ಕಿಣಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.