
ಕಾರ್ಕಳ: ರೈತರು ತರಬೇತಿ, ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳ ಉಪಯೋಗ ಪಡೆದು ತಮ್ಮ ತೋಟದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದು ಮುಡಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರುತಿ ಡಿ ಅತಿಕಾರಿ ಹೇಳಿದರು.
ತಾಲ್ಲೂಕಿನ ಬಜಗೋಳಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಸೋಮವಾರ ತೋಟಗಾರಿಕೆ ಇಲಾಖೆ, ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ, ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಅಡಿಕೆ ಎಲೆಚುಕ್ಕೆ ರೋಗ ಹಾಗೂ ಅಡಿಕೆ ಬೆಳೆ ಸಮಗ್ರ ನಿರ್ವಹಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮಾಳ - ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಮುಡಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸಹಕಾರ ಸಂಘದ ಉಪಾಧ್ಯಕ್ಷ ನಾಗೇಶ ಭಂಡಾರಿ, ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ, ಮಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಪೂಜಾರಿ, ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಪೂಜಾರಿ, ಕೆರ್ವಾಶೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಪೂಜಾರಿ ಉಪಸ್ಥಿತರಿದ್ದರು.
ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಸಸ್ಯರೋಗ ತಜ್ಞ ವಿನಾಯಕ ಹೆಗಡೆ ಅವರು ಅಡಿಕೆ ಬೆಳೆಗೆ ತಗಲುವ ಎಲೆಚುಕ್ಕೆ ರೋಗ ಹಾಗೂ ವಿವಿಧ ರೋಗಗಳ ಕುರಿತು ಮಾಹಿತಿ ನೀಡಿದರು.
ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ತೋಟಗಾರಿಕೆ ತಜ್ಞ ಚೈತನ್ಯ ಅವರು ಅಡಿಕೆ ಸಮಗ್ರ ನಿರ್ವಹಣೆ ಕುರಿತು ಹಾಗೂ ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್ ಅವರು ಅಡಿಕೆ ಕೀಟಗಳ ಮಾಹಿತಿ ನೀಡಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರಿನಿವಾಸ ಬಿ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿಲ್ ಎಸ್. ಪೂಜಾರಿ ವಂದಿಸಿದರು. ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವೀನ್ ಎಂ. ಸುವರ್ಣ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.