ADVERTISEMENT

ಕಾರ್ಕಳ: ಹುಟ್ಟೂರಿನಲ್ಲಿ ಸನ್ಮಾನ ಸ್ವೀಕರಿಸಿದ ನೂತನ ಸಚಿವ ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:56 IST
Last Updated 7 ಆಗಸ್ಟ್ 2021, 2:56 IST
ಕಾರ್ಕಳದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವ ಸುನಿಲ್ ಕುಮಾರ್ ಮಾತನಾಡಿದರು.
ಕಾರ್ಕಳದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವ ಸುನಿಲ್ ಕುಮಾರ್ ಮಾತನಾಡಿದರು.   

ಕಾರ್ಕಳ: ‘ಸಚಿವ ಸ್ಥಾನ ಎನ್ನುವುದು ಅಧಿಕಾರದಿಂದ ಮೆರೆಯುವುದಕ್ಕಲ್ಲ, ಸಚಿವನಾಗಿ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವೆ’ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ನೂತನ ಸಚಿವರಾಗಿ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿದ ವಿ.ಸುನಿಲ್ ಕುಮಾರ್ ಅವರಿಗೆ ಕಾರ್ಕಳದ ಸಮಸ್ತ ನಾಗರಿಕರ ಪರವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಹಿಂದೂ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಹಿರಿಯರ ಮಾರ್ಗದರ್ಶನದಿಂದ ಬೆಳೆದು ಬಂದ ನನಗೆ ಕಾರ್ಕಳದ
ಜನತೆ ಅವಕಾಶ ನೀಡಿ, ಈ ಮಟ್ಟಕ್ಕೆ ಬೆಳೆಸಿದ್ದಾರೆ. 3 ಬಾರಿ ಶಾಸಕನಾಗಿ ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ. ಸಚಿವ ಸ್ಥಾನಕ್ಕೆ ನ್ಯಾಯ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ’ ಎಂದರು.
ಮಂಗಳೂರು ಉತ್ತರ ಕ್ಷೇತ್ರ ಶಾಸಕ ಭರತ್ ಶೆಟ್ಟಿ ಮಾತನಾಡಿ, ‘ಹಿಂದುತ್ವ ವಿಚಾರದಲ್ಲಿ ಸುನಿಲ್ ಅವರದ್ದು ಹೊಂದಾಣಿಕೆ ಇಲ್ಲ. ಸಾವಿರಾರು ಹಿಂದೂ ಯುವಕರಿಗೆ ಅವರು ಮಾರ್ಗದರ್ಶಕರು’ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಡಾ. ಸುಧಾಕರ ಶೆಟ್ಟಿ ನೂತನ ಸಚಿವರನ್ನು ಅಭಿನಂದಿಸಿದರು.

ADVERTISEMENT

ಉದ್ಯಮಿ ಮಹೇಶ ಶೆಟ್ಟಿ ಕುಡುಪುಲಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಬೋಳ ಪ್ರಭಾಕರ ಕಾಮತ್, ವಕೀಲ ಎಂ.ಕೆ ವಿಜಯ ಕುಮಾರ್ ಸಚಿವರನ್ನು ಸನ್ಮಾನಿಸಿ ಮಾತನಾಡಿದರು. ಶಾಸಕರಾದ ಉಮಾನಾಥ ಕೋಟ್ಯಾನ್, ಲಾಲಾಜಿ ಮೆಂಡನ್, ಸುಕುಮಾರ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಉದ್ಯಮಿ ಕುಮಾರ್ ಶೆಟ್ಟಿ, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ವೆಂಕಟರಮಣ ದೇವಸ್ಥಾನದ ಒಂದನೇ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಇದ್ದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಸ್ವಾಗತಿಸಿದರು. ರೇಷ್ಮಾ ಉದಯ್ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.