
ಕಾರ್ಕಳ: ನಗರಾಡಳಿತ ವ್ಯವಸ್ಥೆಯಲ್ಲಿ ಪೌರಕಾರ್ಮಿಕರ ಸೇವೆಯನ್ನು ಕಡೆಗಣಿಸುವಂತಿಲ್ಲ. ಪೌರಕಾರ್ಮಿಕರ ಸನ್ಮಾನ ಪವಿತ್ರ ಕಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ಇಲ್ಲಿನ ಪುರಸಭೆಯ ಸದಸ್ಯ ಶುಭದ್ ರಾವ್ ತಮ್ಮ ಸದಸ್ಯತ್ವದ ಮೂರು ಅವಧಿಯ ಪೂರ್ಣಗೊಳಿಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಪುರಸಭೆಯ ಎಲ್ಲ 48 ಪೌರ ಕಾರ್ಮಿಕರು, ಪೌರ ನೌಕರರು, ಹಾಗೂ ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಕೀಯ ನೇತಾರರಿಗೆ ನಿವೃತ್ತಿ ಎಂಬುದಿಲ್ಲ. ಸಹಾಯ ಕೇಳಿಬಂದ ಎಲ್ಲ ಪಕ್ಷದವರ ಕೆಲಸವನ್ನು ಮಾಡಿಕೊಡುವ ರಾಜಕೀಯ ನಾಯಕರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದರು.
ಕಾರ್ಕಳ ಪುರಸಭೆಯ ಮೂರು ಅವಧಿಯ ಎಲ್ಲ ಪುರಸಭೆಯ ಸದಸ್ಯರನ್ನು, ಎಲ್ಲ ಕಾಯಂ ಮತ್ತು ತಾತ್ಕಾಲಿಕ ನೌಕರರನ್ನು ಸನ್ಮಾನಿಸಲಾಯಿತು.
ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಭಾರತದ ತಂಡದ ವಾಲಿಬಾಲ್ ಕ್ಯಾಪ್ಟನ್ ಆಗಿ ಚೀನಾದಲ್ಲಿ ಆಡಿದ ಶಗುನ್ ವರ್ಮಾ ಎಸ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಶುಭದ್ ರಾವ್ ಅವರು ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಪಕ್ಷವನ್ನು ಬೆಳೆಸುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮುಖಂಡ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪುರಸಭೆಯ ಸದಸ್ಯರಾಗಿ ಶುಭದ್ ಅವರು ಪಕ್ಷಾತೀತವಾಗಿ ಮಾಡಿದ ಸೇವೆ ಅತ್ಯುತ್ತಮ ಮಾದರಿ ಎಂದರು.
ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಮಂಜುನಾಥ್ ಕೋಟ್ಯಾನ್, ಕೊಲ್ಲೂರು ದೇವಸ್ಥಾನದ ಟ್ರಸ್ಟಿ ಸುರೇಂದ್ರ ಶೆಟ್ಟಿ ಮತ್ತು ಕಾರ್ಕಳ ಜ್ಞಾನಸುಧಾ ಕಾಲೇಜಿನ ಸ್ಥಾಪಕ ಸುಧಾಕರ್ ಶೆಟ್ಟಿ ಅಭಿನಂದಿಸಿದರು. ಪುರಸಭೆಯ ಸದಸ್ಯರ ಪರವಾಗಿ ಅಷ್ಪಾಕ್ ಅಹಮದ್ ಮಾತನಾಡಿದರು.
ಶುಭದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎಸ್‌ವಿಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಮಿತ್ರಪ್ರಭಾ ಹೆಗ್ಡೆ, ಉದ್ಯಮಿ ಜಾನ್ ಡಿಸಿಲ್ವ, ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಶಿಲ್ಪಿ ರಾಮಚಂದ್ರ ಆಚಾರ್ಯ, ಶುಭದ್ ಅವರ ಪತ್ನಿ ದಿವ್ಯಾ ರಾವ್, ಸಿವಿಲ್ ಎಂಜಿನಿಯರ್ ನವೀನ್ ರಾವ್ ಉಪಸ್ಥಿತರಿದ್ದರು. ರಾಜೇಂದ್ರ ಭಟ್ ಕೆ ನಿರೂಪಿಸಿ, ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.