ADVERTISEMENT

ಫಿಶ್‌ ಫ್ರೈ ಸ್ಪೆಷಲಿಸ್ಟ್ ಹೋಟೆಲ್‌ ತಿಮ್ಮಪ್ಪ

ಉಡುಪಿ ಮಲ್ಪೆ ರಸ್ತೆಯಲ್ಲಿರುವ ಹೋಟೆಲ್‌

ಬಾಲಚಂದ್ರ ಎಚ್.
Published 29 ಅಕ್ಟೋಬರ್ 2018, 14:15 IST
Last Updated 29 ಅಕ್ಟೋಬರ್ 2018, 14:15 IST
ಹೋಟೆಲ್‌ ತಿಮ್ಮಪ್ಪ ಹೊರಾಂಗಣ
ಹೋಟೆಲ್‌ ತಿಮ್ಮಪ್ಪ ಹೊರಾಂಗಣ   

ಉಡುಪಿಯಿಂದ ಮಲ್ಪೆಗೆ ಸಾಗುವ ದಾರಿಯಲ್ಲಿ ಕರಾವಳಿ ಜಂಕ್ಷನ್‌ ದಾಟಿದ ಕೂಡಲೇ ಮೀನಿನ ಖಾದ್ಯಗಳ ಘಮಲು ಮೂಗಿಗೆ ಬಡಿಯುತ್ತದೆ. ಆ ವಾಸನೆಯ ಜಾಡು ಹಿಡಿದು ಸಾಗಿದರೆ, ರಸ್ತೆಯ ಎಡಬದಿಯಲ್ಲೊಂದು ಹೋಟೆಲ್‌ ಕಣ್ಣಿಗೆ ಬೀಳುತ್ತದೆ. ಅದು ತಿಮ್ಮಪ್ಪ ಹೋಟೆಲ್‌.‌

ಮೀನಿನ ಖಾದ್ಯಗಳಿಗೆ ಉಡುಪಿಯಲ್ಲಿಯೇ ಪ್ರಸಿದ್ಧವಾದ ಹೋಟೆಲ್‌ ಇದು. ಸರಿ ಸುಮಾರು 5 ದಶಕಗಳ ಇತಿಹಾಸವಿರುವ ತಿಮ್ಮಪ್ಪ ಹೋಟೆಲ್‌, ನಾನ್‌ವೆಜ್‌ ಪ್ರಿಯರ ನಾಲಗೆ ರುಚಿಯನ್ನು ತಣಿಸುತ್ತಾ ಬಂದಿದೆ. ಉಡುಪಿ ಪ್ರವಾಸಕ್ಕೆ ಬರುವ ಬಹುತೇಕರು ಈ ಹೋಟೆಲ್‌ನಲ್ಲಿ ಸಿಗುವ ಮೀನಿನ ರುಚಿ ಸವಿಯದೆ ಹಿಂದಿರುಗುವುದಿಲ್ಲ.

ಅಂಜಲ್‌, ಪಾಂಪ್ಲೆಟ್‌, ಡಿಸ್ಕೊ, ಬಂಗುಡೆ, ಹೀಗೆ ತರಹೇವಾರಿ ಮೀನುಗಳು ತವಾ ಹಾಗೂ ಫ್ರೈ ಮಾದರಿಯಲ್ಲಿ ಲಭ್ಯವಿದೆ. ದರವೂ ಗ್ರಾಹಕರ ಕೈಗೆಟುಕುವಂತಿರುತ್ತದೆ. ಮಾರುಕಟ್ಟೆಯಿಂದ ತಾಜಾ ಮೀನುಗಳನ್ನು ಖರೀದಿಸಿ ಖಾದ್ಯಗಳನ್ನು ಸಿದ್ಧಪಡಿಸುವುದರಿಂದ ಇತರ ಹೋಟೆಲ್‌ಗಳಿಗಿಂತ ಇಲ್ಲಿ ರುಚಿ ಭಿನ್ನವಾಗಿರುತ್ತದೆ ಎನ್ನುತ್ತಾರೆ ಮಾಲೀಕರಾದ ಸತೀಶ್‌.

ADVERTISEMENT

ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಹೋಟೆಲ್‌ ತೆರೆದಿರುತ್ತದೆ. ತಾಸುಗಟ್ಟಲೆ ಕಾಯ್ದು ಊಟ ಮಾಡುವ ಗ್ರಾಹಕರಿದ್ದಾರೆ. ಸುಮಾರು 50 ಮಂದಿ ಒಟ್ಟಾಗಿ ಕುಳಿತು ಊಟ ಮಾಡುವ ವ್ಯವಸ್ಥೆ ಇದೆ. ಮಧ್ಯಾಹ್ನ 12ಕ್ಕೆ ಆರಂಭವಾಗಿ 4ರವರೆಗೂ ರಾತ್ರಿ 7ರಿಂದ 10.30ರವರೆಗೂ ಹೋಟೆಲ್‌ ಗ್ರಾಹಕರಿಗೆ ಮುಕ್ತವಾಗಿರುತ್ತದೆ ಎನ್ನುತ್ತಾರೆ ಸತೀಶ್‌.

ರುಚಿ ಹಾಗೂ ಶುಚಿಯ ಸೇವೆಯೇ ಉದ್ಯಮದ ಯಶಸ್ಸಿನ ಗುಟ್ಟು. ವಿಶೇಷ ಎಂದರೆ, ಮೀನಿಗೆ ಹಾಕುವ ಮಸಾಲೆಗೆ ರೆಡಿಮೆಡ್‌ ಪುಡಿಗಳನ್ನು ಬಳಸುವುದಿಲ್ಲ. ರುಚಿ ಹೆಚ್ಚಿಸಲು ರಾಸಾಯನಿಕಗಳನ್ನು ಹಾಕುವುದಿಲ್ಲ. ತಾಯಿ ಗುಲಾಬಿ ಅವರು ಸ್ವತಃ ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸಿಕೊಡುತ್ತಾರೆ. ಅದನ್ನು ಹೋಟೆಲ್‌ನಲ್ಲಿ ರುಬ್ಬಿ ತಯಾರಿಸಲಾಗುತ್ತದೆ. ಹಾಗಾಗಿಯೇ ತಿಮ್ಮಪ್ಪ ಹೋಟೆಲ್‌ನ ಮೀನಿನ ರುಚಿ ವಿಶಿಷ್ಟವಾಗಿರುತ್ತದೆ ಎನ್ನುತ್ತಾರೆ ಅವರು.

ಕರಾವಳಿಯ ಸಂಪ್ರದಾಯದಂತೆ ಬಾಳೆ ಎಲೆಯ ಮೇಲೆ ಊಟ ಬಡಿಸಲಾಗುವುದು. ಪಲ್ಯ, ಉಪ್ಪಿನಕಾಯಿ, ಕುಚಲಕ್ಕಿ (ಬಾಯ್ಲಡ್‌), ವೈಟ್‌ ರೈಸ್‌, ಮೀನಿನ ಸಾರು ಹಾಗೂ ಬೇಳೆಯ ಸಾರೂ ಲಭ್ಯವಿದೆ. ಗ್ರಾಹಕರಿಗೆ ಬೇಕಾದ ಮೀನುಗಳನ್ನು ಬಿಸಿಬಿಸಿಯಾಗಿ ಬಡಿಸಲಾಗುವುದು ಎನ್ನುತ್ತಾರೆ ಅವರು.

1969ರಲ್ಲಿ ತಂದೆ ತಿಮ್ಮಪ್ಪ ಹಾಗೂ ತಾಯಿ ಗುಲಾಬಿ ಅವರು ಹೋಟೆಲ್‌ ಆರಂಭಿಸಿದರು. ತಂದೆಯ ಬಳಿಕ ಸಹೋದರ ಕೃಷ್ಣ ಅವರ ಜತೆಗೂಡಿ ಹೋಟೆಲ್‌ ಮುನ್ನಡೆಸಿಕೊಂಡು ಬರುತ್ತಿದ್ದೇನೆ. 40 ವರ್ಷಗಳಿಂದ ಹೋಟೆಲ್‌ಗೆ ಬರುತ್ತಿರುವ ಗ್ರಾಹಕರು ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಸತೀಶ್‌.

ಮೀನುಗಾರಿಕೆ ನಿಷೇಧವಾದಾಗ ಖಾದ್ಯಗಳ ಬೆಲೆ ಅಲ್ಪ ಏರಿಕೆಯಾಗುತ್ತದೆ. ಇಲ್ಲವಾದರೆ, ದರ ಸಾಮಾನ್ಯವಾಗಿತ್ತದೆ. ಕೂಲಿ ಮಾಡುವರದಿಂದ ಹಿಡಿದು, ದೊಡ್ಡ ರಾಜಕಾರಣಿಗಳು, ಸಿನಿಮಾ ನಟರು, ಗಣ್ಯ ವ್ಯಕ್ತಿಗಳು ಹೋಟೆಲ್‌ಗೆ ಭೇಟಿ ನೀಡುತ್ತಾರೆ. ಪ್ರತಿಯೊಬ್ಬರೂ ಹೋಗುವಾಗ ರುಚಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಎನ್ನುತ್ತಾರೆ ಸಿಬ್ಬಂದಿ ಮಂಜುನಾಥ್, ಶ್ರೀನಿವಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.