ಉಡುಪಿ: ಮಳೆಗಾಲದ ಮೀನುಗಾರಿಕಾ ಋತುವಿನ ರಜೆಯಿಂದಾಗಿ ಬೋಟ್‌ಗಳು ಕಡಲಿಗಿಳಿಯದ ಪರಿಣಾಮ ಮೀನಿನ ದರ ಗಗನಕ್ಕೇರಿದೆ. ಪರಿಣಾಮ ಜೋರು ಮಳೆಯ ನಡುವೆ ಮೀನಿನ ಖಾದ್ಯ ಸವಿಯುವ ಮತ್ಸ್ಯಪ್ರಿಯರ ಆಸೆಗೆ ಬೆಲೆ ಏರಿಕೆಯ ಬಿಸಿ ಅಡ್ಡಿಯಾಗಿದೆ.
ಸಾಮಾನ್ಯವಾಗಿ ಕರಾವಳಿಯಲ್ಲಿ ಜೂನ್ ಜುಲೈ ತಿಂಗಳಲ್ಲಿ ಮೀನುಗಾರಿಕೆಗೆ ರಜೆ ಇರುತ್ತದೆ. ಈ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆ ಇರುವುದಿಲ್ಲ. ಪರಿಣಾಮ ಬೇಡಿಕೆಯಷ್ಟು ಮೀನು ಪೂರೈಕೆಯಾಗದೆ ದರ ಗಗನಕ್ಕೇರುತ್ತದೆ. ಈ ವರ್ಷವೂ ಮೀನಿನ ದರ ಏರಿಕೆಯಾಗಿದ್ದು ಮತ್ಸ್ಯಪ್ರಿಯರಲ್ಲಿ ಬೇಸರ ಮೂಡಿಸಿದೆ.
2 ತಿಂಗಳು ಆಳಸಮುದ್ರ ಮೀನುಗಾರಿಕೆ ಸ್ಥಗಿತವಾದರೂ ನಾಡದೋಣಿ ಮೀನುಗಾರಿಕೆ ನಡೆಯುತ್ತದೆ. ಆದರೆ, ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ನಾಡದೋನಿ ಮೀನುಗಾರಿಕೆಯೂ ನಿಂತುಹೋಗಿದ್ದು ಮಾರುಕಟ್ಟೆಯಲ್ಲಿ ಮೀನಿನ ದರ ದುಪ್ಪಟ್ಟಾಗಿದೆ.
ಮೀನುಗಾರಿಕೆ ನಡೆಯುವಾಗ ಮಾರುಕಟ್ಟೆಯಲ್ಲಿ ಪಾಂಪ್ಲೆಟ್ ಮೀನು ಕೆ.ಜಿಗೆ ₹ 300 ರಿಂದ ₹ 400 ದರ ಇರುತ್ತದೆ. ಸದ್ಯ ₹ 500 ರಿಂದ ₹ 600 ದರ ಇದೆ. ಕಲ್ಲೂರು ₹ 200 ರಿಂದ ₹ 350ಕ್ಕೆ ಏರಿಕೆಯಾಗಿದೆ. ಭೂತಾಯಿ ₹ 100ರಿಂದ ₹ 200ಕ್ಕೆ ಹೆಚ್ಚಾಗಿದೆ. ಕಾಣೆ ₹ 400ರಿಂದ ₹ 700ಕ್ಕೆ ಏರಿಕೆಯಾಗಿದೆ.
ಅಂಜಲ್ ಮೀನು ಕೆಜಿಗೆ ಸಾವಿರದ ಗಡಿ ದಾಟಿದೆ. ಹಿಂದೆ, ಅಂಜಲ್ ₹ 500ಕ್ಕೆ ಸಿಗುತ್ತಿತ್ತು. ಬಂಗುಡೆ ₹ 200ಕ್ಕೆ 10 ಮೀನು ಸಿಗುತ್ತಿತ್ತು. ಈಗ 4 ರಿಂದ 5 ಮೀನು ಮಾತ್ರ ಎನ್ನುತ್ತಾರೆ ಉಡುಪಿ ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಜತೆ ಕಾರ್ಯದರ್ಶಿ ಜಯಂತಿ ಗುರುದಾಸ ಬಂಗೇರ.
ಪ್ರಾನ್ಸ್ ₹ 300ರಿಂದ ₹ 450ಕ್ಕೆ, ಬೊಲೆಂಜರ್ ₹ 200ರಿಂದ ₹ 400ಕ್ಕೆ, ನಂಗ್ ಮೀನು ₹ 250ರಿಂದ ₹ 400ಕ್ಕೆ ಹೆಚ್ಚಾಗಿದೆ. ಸಮುದ್ರದಲ್ಲಿ ತೂಫಾನ್ ಕಡಿಮೆಯಾಗಿ ಮೀನುಗಾರಿಕೆ ಆರಂಭವಾದರೆ ಸಹಜವಾಗಿ ದರ ಇಳಿಕೆಯಾಗಲಿದೆ ಎನ್ನುತ್ತಾರೆ ಅವರು.
ಮಾರುಕಟ್ಟೆಗೆ ಶೀಥಲೀಕರಣ ಘಟಕದಲ್ಲಿ ಸಂಗ್ರಹಿಸಿಟ್ಟಿದ್ದ ಮೀನುಗಳು ಹೆಚ್ಚಾಗಿ ಬರುತ್ತಿವೆ. ಆದರೆ, ಎಲ್ಲ ಮೀನುಗಳೂ ಶೈಥ್ಯಾಗಾರಗಳಿಂದ ಬರುವುದಿಲ್ಲ. ನಾಡದೋಣಿ ಮೀನುಗಾರಿಕೆಯಿಂದ ತಾಜಾ ಮೀನುಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ, ಗ್ರಾಹಕರು ಮಾತ್ರ ಮೀನು ತಾಜಾ ಇಲ್ಲ ಎಂಬ ಕಾರಣಕ್ಕೆ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎನ್ನುತ್ತಾರೆ ಮೀನು ಮಾರಾಟ ಮಾಡುವ ಮಹಿಳೆಯೊಬ್ಬರು.
ದರ ಹೆಚ್ಚಾಗಿರುವ ಕಾರಣಕ್ಕೆ ಎರಡ್ಮೂರು ಕೆ.ಜಿ ಖರೀದಿಸುತ್ತಿದ್ದ ಗ್ರಾಹಕರು ಈಗ ಅರ್ಧ, ಹೆಚ್ಚೆಂದರೆ ಒಂದು ಕೆ.ಜಿ ಖರೀದಿಸುತ್ತಾರೆ. ವ್ಯಾಪಾರ ಸಂಪೂರ್ಣ ಕಡಿಮೆಯಾಗಿದೆ. ಕೆಲವೊಮ್ಮೆ ಸಗಟು ರೂಪದಲ್ಲಿ ಖರೀದಿಸಿದ ಮೀನು ಮಾರಾಟವಾಗದೆ ನಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.