ADVERTISEMENT

ಉಡುಪಿ | ಸಮುದ್ರದಲ್ಲಿ ಮೀನಿಗೆ ಬರ; ಮತ್ಸ್ಯಕ್ಷಾಮ ಆತಂಕ

ಬಾಲಚಂದ್ರ ಎಚ್.
Published 4 ಮಾರ್ಚ್ 2024, 6:29 IST
Last Updated 4 ಮಾರ್ಚ್ 2024, 6:29 IST
ಮಲ್ಪೆ ಬಂದರು
ಮಲ್ಪೆ ಬಂದರು   

ಉಡುಪಿ: ಏಷ್ಯಾದ ಅತಿದೊಡ್ಡ ಸರ್ವ ಋತು ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆ ಹೊಂದಿರುವ ಮಲ್ಪೆ ಬಂದರು ಕಳಾಹೀನ ಸ್ಥಿತಿಯಲ್ಲಿದೆ. ಮೀನುಗಾರರ ಮೊಗದಲ್ಲಿ ಹರ್ಷ ಕಾಣುತ್ತಿಲ್ಲ. ಮೀನುಗಾರಿಕಾ ಋತುವಿನಲ್ಲೇ ಅರ್ಧದಷ್ಟು ಬೋಟ್‌ಗಳು ಧಕ್ಕೆಯಲ್ಲಿ ಲಂಗರು ಹಾಕಿಕೊಂಡಿವೆ. ಮೀನುಗಾರಿಕೆ ಮುಗಿಸಿ ಬರುತ್ತಿರುವ ಬೋಟ್‌ಗಳಲ್ಲಿ ನಿರೀಕ್ಷಿತ ಪ್ರಮಾಣದ ಮೀನು ಕಾಣಸಿಗುತ್ತಿಲ್ಲ. ಕರಾವಳಿಯ ಮತ್ಸ್ಯೋದ್ಯಮ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು ಮತ್ಸ್ಯಕ್ಷಾಮದ ಆತಂಕ ತಲೆದೋರಿದೆ.

ಸಾಮಾನ್ಯವಾಗಿ ವರ್ಷದ ಮೊದಲ ಮೂರು ತಿಂಗಳು ಅಂದರೆ ಜನವರಿ, ಫೆಬ್ರುವರಿ, ಮಾರ್ಚ್‌ ತಿಂಗಳು ಮೀನಿನ ಸುಗ್ಗಿಯ ಕಾಲ. ಭರ್ಜರಿ ಮೀನಿನ ಇಳುವರಿ ಸಿಗಬೇಕಾಗಿದ್ದ ಈ ಅವಧಿಯಲ್ಲೇ ನಿರೀಕ್ಷಿತ ಪ್ರಮಾಣದ ಮೀನು ಸಿಗುತ್ತಿಲ್ಲ. ಮಲ್ಪೆಯ ಬಂದರಿನಲ್ಲಿ ಅಘೋಷಿತ ಮೀನುಗಾರಿಕಾ ರಜೆಯ ವಾತಾವರಣ ನಿರ್ಮಾಣವಾಗಿದೆ. ನಷ್ಟದ ಭೀತಿಯಿಂದ ಮೀನುಗಾರರು ಸಮುದ್ರಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ.

ಮೀನುಗಾರಿಕೆ ಮಾತ್ರವಲ್ಲ; ಮತ್ಸ್ಯೋದ್ಯಮವನ್ನು ಅವಲಂಬಿಸಿರುವ ಉದ್ಯಮವೂ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಮಲ್ಪೆ ಬಂದರಿನಿಂದ ಪ್ರತಿದಿನ ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ಮೀನು ಸಾಗಾಟ ಮಾಡುವ ನೂರಾರು ವಾಹನಗಳು ಬಾಡಿಗೆ ಇಲ್ಲದೆ ನಿಂತಿವೆ.

ADVERTISEMENT

ಬಂದರಿನ ಸುತ್ತಮುತ್ತ ಸದಾ ಸದ್ದು ಮಾಡುತ್ತಿದ್ದ ಐಸ್‌ ಪ್ಲಾಂಟ್‌ಗಳು ನಿರೀಕ್ಷಿತ ವ್ಯಾಪಾರ ಇಲ್ಲದೆ ಸೊರಗಿವೆ. ಒಂದೆಡೆ ವಿದ್ಯುತ್ ದರ ಹೆಚ್ಚಳ, ಮತ್ತೊಂದೆಡೆ ವ್ಯಾಪಾರ ಇಲ್ಲದೆ ಐಸ್‌ ತಯಾರಿಕಾ ಘಟಕಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಬೋಟ್‌ ರಿಪೇರಿ ಮಾಡುವ ಗ್ಯಾರೇಜ್‌ಗಳಿಗೂ ಬಿಸಿ ತಟ್ಟಿದೆ.

ವಿವಿಧ ಪ್ರಕಾರಗಳ ಬಲೆ, ಹಗ್ಗ, ಪ್ಲಾಸ್ಟಿಕ್ ಕ್ರೇಟ್ ಸೇರಿದಂತೆ ಮೀನುಗಾರಿಕೆಗೆ ಬಳಸುವ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳು ವ್ಯಾಪಾರ ಇಲ್ಲದೆ ಭಣಗುಡುತ್ತಿವೆ. ಫಿಶ್‌ ಮೀಲ್ ಘಟಕಗಳು, ಶೈತ್ಯಾಗಾರಗಳ ವಹಿವಾಟು ಕುಂಠಿತವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ ಮತ್ಸ್ಯಕ್ಷಾಮ ಎನ್ನುತ್ತಾರೆ ಮೀನುಗಾರರು.

ಮತ್ಸ್ಯಕ್ಷಾಮಕ್ಕೆ ಕಾರಣ: ಸಮುದ್ರದಲ್ಲಿ ಮೀನಿನ ಕೊರತೆಗೆ ಪ್ರಮುಖ ಕಾರಣ ಅವೈಜ್ಞಾನಿಕ ಮೀನುಗಾರಿಕೆ. ಮೀನಿನ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸಿ ನಿಷೇಧೀತ ಮೀನುಗಾರಿಕೆಯ ಮೂಲಕ ಮಿತಿಮೀರಿ ಮತ್ಸ್ಯ ಸಂಪತ್ತನ್ನು ದೋಚುತ್ತಿರುವುದರಿಂದ ಮತ್ಸ್ಯಕ್ಷಾಮ ಎದುರಾಗಿದೆ ಎನ್ನುತ್ತಾರೆ ಮೀನುಗಾರರು.

ಮೀನಿನ ಸಂತತಿ ಉಳಿವಿಗೆ ಸರ್ಕಾರ ಲೈಟ್‌ ಫಿಶಿಂಗ್ ಹಾಗೂ ಬುಲ್‌ ಟ್ರೋಲಿಂಗ್ ಪದ್ಧತಿಯನ್ನು ನಿಷೇಧಿಸಿದ್ದರೂ ಇಂದಿಗೂ ಅವ್ಯಾಹತವಾಗಿ ನಡೆಯುತ್ತಿದೆ.

ಬುಲ್‌ ಟ್ರಾಲಿಂಗ್, ಲೈಟ್ ಫಿಶಿಂಗ್ ಅಂದ್ರೆ: ಎರಡು ಬೋಟ್‌ಗಳನ್ನು ಪರಸ್ಪರ ನಿರ್ಧಿಷ್ಟ ದೂರದಲ್ಲಿರಿಸಿ ಬೋಟ್‌ಗಳಿಗೆ 150 ಮೀಟರ್‌ಗೂ ದೊಡ್ಡಬಲೆ ಕಟ್ಟಿ ಸಮುದ್ರದಾಳದಿಂದ ಮೀನನ್ನು ಗೋರುವ ವಿಧಾನವನ್ನು ಬುಲ್‌ ಟ್ರೋಲಿಂಗ್ ಫಿಶಿಂಗ್ ಎಂದು ಕರೆಯಲಾಗುತ್ತದೆ. ಈ ವಿಧಾನದಲ್ಲಿ ಸಣ್ಣ ಕಣ್ಣಿನ ಬಲೆ ಬಳಸುವುದರಿಂದ ಮರಿ ಮೀನುಗಳು ಸಹ ಬಲೆಗೆ ಸಿಲುಕಿ ಸಾಯುತ್ತವೆ.

ಲೈಟ್‌ ಫಿಶಿಂಗ್‌ನಲ್ಲಿ ಪ್ರಖರವಾದ ಬೆಳಕನ್ನು ಸಮುದ್ರಕ್ಕೆ ಹಾಯಿಸಲಾಗುತ್ತದೆ. ಬೆಳಕಿಗೆ ಆಕರ್ಷಿತಗೊಂಡು ಬರುವ ಮೀನುಗಳನ್ನು ದೊಡ್ಡ ಬಲೆಗಳನ್ನು ಬಳಸಿ ಹಿಡಿಯಲಾಗುತ್ತದೆ. ಎರಡೂ ವಿಧಾನಗಳಲ್ಲಿ ಯತೇಚ್ಛವಾಗಿ ಮೀನಿನ ಮರಿಗಳನ್ನು ಹಿಡಿಯುವುದರಿಂದ ಮೀನಿನ ಸಂತತಿ ವಿನಾಶದತ್ತ ಸಾಗಿದೆ.

ಮೀನುಗಾರಿಕೆಗೆ ಇಂತಿಷ್ಟೆ ಗಾತ್ರದ ಹಾಗೂ ಕಣ್ಣಿನ ಬಲೆ ಬಳಸಬೇಕು ಎಂಬ ನಿಯಮವಿದೆ. ಆದರೆ ಕೆಲವರು ಲಾಭದಾಸೆಗೆ ಸೊಳ್ಳೆಪರದೆ ಕಣ್ಣಿನ ಬಲೆಗಳನ್ನು ಬಳಸುತ್ತಿದ್ದು ಮತ್ಸ್ಯ ಸಂಪತ್ತು ನಾಶವಾಗುತ್ತಿದೆ. ಅವೈಜ್ಞಾನಿಕ ಮೀನುಗಾರಿಕೆಗೆ ಕಡಿವಾಣ ಹಾಕಿದರಷ್ಟೆ ಮತ್ಸ್ಯೋದ್ಯಮ ಉಳಿಯುತ್ತದೆ ಎನ್ನುತ್ತಾರೆ ಮೀನುಗಾರರು.

ಬದಲಾದ ಮೀನುಗಾರಿಕೆ ಸ್ವರೂಪ: ಜಾಗತಿಕವಾಗಿ ಮತ್ಸ್ಯೋದ್ಯಮ ವಾಣಿಜ್ಯ ಸ್ವರೂಪ ಪಡೆದುಕೊಂಡಿದ್ದು ಮೀನುಗಾರರ ಜಾಗದಲ್ಲಿ ಬಲಾಢ್ಯ ಖಾಸಗಿ ಕಂಪೆನಿಗಳು ಬಂದು ಕುಳಿತಿವೆ. ಜಾಗತಿಕ ಮಟ್ಟದಲ್ಲಿ ಮೀನಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಲಾಭ ಪಡೆಯಲು ನಿಯಮಗಳನ್ನು ಮೀರಿ ಸಮುದ್ರಕ್ಕೆ ಜಾಲರಿ ಹಾಕಿ ಮತ್ಸ್ಯಸಂಪತ್ತನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ವಿನಾಶಕಾರಿ ಮೀನುಗಾರಿಕೆಗೆ ದೊರೆಯುತ್ತಿರುವ ಪ್ರೋತ್ಸಾಹ ಮತ್ಸ್ಯೋದ್ಯಮಕ್ಕೆ ಗಂಡಾಂತರ ತಂದೊಡ್ಡಿದೆ ಎನ್ನುತ್ತಾರೆ ತಜ್ಞರು.

ಬದಲಾದ ವಾತಾವರಣ: ಇತ್ತೀಚಿನ ವರ್ಷಗಳಲ್ಲಿ ಬದಲಾಗುತ್ತಿರುವ ಹವಾಮಾನ ಮೀನುಗಾರಿಕೆಗೆ ಪೂರಕವಾಗಿಲ್ಲ. ಪ್ರತಿ ಮಳೆಗಾಲದಲ್ಲಿ ದಟ್ಟ ಅರಣ್ಯಗಳ ನಡುವೆ ಹರಿಯುವ ನೂರಾರು ನದಿ–ತೊರೆಗಳು ಸಮುದ್ರ ಸೇರುವಾಗ ಅಗಾಧ ಪ್ರಮಾಣದ ಪೋಷಕಾಂಶಗಳನ್ನು ಸಮುದ್ರದ ಒಡಲಿಗೆ ತುಂಬಿಸುತ್ತವೆ. ಈ ಪೋಷಕಾಂಶಗಳು ಮೀನುಗಳಿಗೆ ಪ್ರಮುಖ ಆಹಾರವಾಗಿ ಬಳಕೆಯಾಗುತ್ತದೆ. ಆದರೆ, ಕಳೆದ ಎರಡು ವರ್ಷಗಳಿಂದ ನಿರೀಕ್ಷಿತ ಪ್ರಮಾಣದ ಮಳೆಯಾಗದಿರುವುದರಿಂದ ಮೀನುಗಳಿಗೆ ಆಹಾರದ ಕೊರತೆ ಎದುರಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ.

ಹೆಚ್ಚಾದ ಸಾಲದ ಹೊರೆ

ಸಾಮಾನ್ಯವಾಗಿ ವರ್ಷದ ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆಯುತ್ತದೆ. ಆದರೆ ಈ ವರ್ಷ ಮೀನುಗಾರಿಕೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಸಮುದ್ರದಲ್ಲಿ ಮೀನು ಸಿಗುತ್ತಿಲ್ಲ. ಹಾಕಿದ ಬಂಡವಾಳವೂ ಕೈಸೇರದೆ ಮೀನುಗಾರರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಾಲದ ಹೊರೆ ಹೆಚ್ಚಾಗಿದೆ ಎಂದು ಬೋಟ್‌ ಮಾಲೀಕ ಲೋಕನಾಥ್‌ ತಿಳಿಸಿದರು.

ಸಮುದ್ರಕ್ಕಿಳಿಯದಿರಲು ನಿರ್ಧಾರ

ಲೈಲಾಂಡ್‌ ಬೋಟ್‌ನಲ್ಲಿ ಮೀನುಗಾರಿಕೆ ಮಾಡಲು ದಿನಕ್ಕೆ ₹50 ಸಾವಿರ ಖರ್ಚು ಬರುತ್ತದೆ. ಕನಿಷ್ಠ 10 ರಿಂದ 12 ದಿನಗಳ ಮೀನುಗಾರಿಕೆಗೆ ಐದಾರು ಲಕ್ಷ ವ್ಯಯವಾಗುತ್ತದೆ. ₹7 ಲಕ್ಷ ಮೌಲ್ಯದ ಮೀನು ಸಿಕ್ಕರೆ ಮಾತ್ರ ಸ್ವಲ್ಪ ಲಾಭ ನೋಡಬಹುದು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ₹4 ಲಕ್ಷ ಮೌಲ್ಯದ ಮೀನೂ ದೊರೆಯುತ್ತಿಲ್ಲ. ಹಾಗಾಗಿ ಸಮುದ್ರಕ್ಕಿಳಿಯುವುದು ಬೇಡ ಎಂದು ಹೆಚ್ಚಿನ ಬೋಟ್‌ ಮಾಲೀಕರು ನಿರ್ಧರಿಸಿದ್ದಾರೆ ಎಂದು ಮೀನುಗಾರ ವಿಶ್ವನಾಥ್ ಮೆಂಡನ್‌ ತಿಳಿಸಿದರು.

ಕಳೆದ ವರ್ಷ ಮಳೆ ಕೊರತೆಯಿಂದ ಸಮುದ್ರದಾಳದಲ್ಲಿ ಪೋಷಕಾಂಶಗಳ ಕೊರತೆಯಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಜತೆಗೆ ಹವಾಮಾನ ವೈಪರೀತ್ಯವೂ ಮೀನಿನ ಇಳುವರಿ ಕುಸಿತಕ್ಕೆ ಕಾರಣ ಎಂದು ಹೇಳಬಹುದು.
ಆರ್‌. ವಿವೇಕ್‌, ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ
ಮಲ್ಪೆ ಬಂದರಿನಲ್ಲಿ ಅರ್ಧದಷ್ಟು ಬೋಟ್‌ಗಳು ನಿಂತಿವೆ. ಸಮುದ್ರಕ್ಕಿಳಿದರೆ ಹಾಕಿದ ಬಂಡವಾಳ ಕೈಸೇರುತ್ತದೆ ಎಂಬ ಗ್ಯಾರಂಟಿ ಇಲ್ಲದಂತಾಗಿದೆ. ಬೋಟ್ ಇಳಿಸಿ ನಷ್ಟ ಅನುಭವಿಸುವ ಬದಲು ಸ್ವಲ್ಪದಿನ ಕೈಕಟ್ಟಿ ಕೂರುವುದು ಒಳಿತು ಎಂಬ ನಿರ್ಧಾರಕ್ಕೆ ಮೀನುಗಾರರು ಬಂದಿದ್ದಾರೆ.
ವಿಶ್ವನಾಥ್, ಮೀನುಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.