ADVERTISEMENT

ಉಡುಪಿ | ಎಲ್ಲೆಲ್ಲೂ ಫ್ಲೆಕ್ಸ್‌ ಅಬ್ಬರ: ಜನ ತತ್ತರ

ರಸ್ತೆ ವಿಭಜಕಗಳ ಕಂಬಗಳಲ್ಲಿ ರಾರಾಜಿಸುತ್ತಿವೆ ಶುಭಕೋರುವ ಬೋರ್ಡ್‌ಗಳು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 8:09 IST
Last Updated 24 ಫೆಬ್ರುವರಿ 2025, 8:09 IST
ಉಡುಪಿ ನಗರಸಭೆ ಬಳಿಯ ರಸ್ತೆಯೊಂದರ ಪಾದಚಾರಿ ಮಾರ್ಗದಲ್ಲಿ ಫ್ಲೆಕ್ಸ್‌ ಬಿದ್ದಿರುವುದು
ಉಡುಪಿ ನಗರಸಭೆ ಬಳಿಯ ರಸ್ತೆಯೊಂದರ ಪಾದಚಾರಿ ಮಾರ್ಗದಲ್ಲಿ ಫ್ಲೆಕ್ಸ್‌ ಬಿದ್ದಿರುವುದು   

ಉಡುಪಿ: ನಗರದಲ್ಲಿ ಮುಖ್ಯ ರಸ್ತೆ ಬದಿ ಇರಲಿ, ಡಿವೈಡರ್‌, ಸಿಗ್ನಲ್‌ ಕಂಬಗಳಿರಲಿ ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ಫ್ಲೆಕ್ಸ್‌ಗಳೇ ರಾರಾಜಿಸುತ್ತಿವೆ.

ಒಂದೆಡೆ ಅವುಗಳು ನಗರದ ಅಂದಗೆಡಿಸಿದರೆ, ಮತ್ತೊಂದೆಡೆ ವಾಹನ ಸವಾರರಿಗೆ ಅಪಾಯವನ್ನೂ ಆಹ್ವಾನಿಸುತ್ತಿವೆ. ಜಾಹೀರಾತು ಫ್ಲೆಕ್ಸ್‌ಗಳನ್ನು ಸ್ಥಾಪಿಸುವ ಏಜೆನ್ಸಿಗಳು ಯಾವುದೇ ವಿವೇಚನೆ ಇಲ್ಲದೆ ಎಲ್ಲೆಂದರಲ್ಲಿ ಅವುಗಳನ್ನು ಸ್ಥಾಪಿಸುವುದರಿಂದ ಸಾರ್ವಜನಿಕರಿಗೆ ನಾನಾ ತೊಂದರೆಗಳಾಗುತ್ತಿವೆ.

ರಾಜಕಾರಣಿಗಳಿಗೆ ಸ್ವಾಗತ ಕೋರುವ, ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭಕೋರುವ ಬೃಹದಾಕಾರದ ಫ್ಲೆಕ್ಸ್‌ಗಳು ಲೆಕ್ಕವಿಲ್ಲದಷ್ಟು ರಾರಾಜಿಸುತ್ತಿವೆ.

ADVERTISEMENT

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯ ಡಿವೈಡರ್‌ನಲ್ಲಿರುವ ಪ್ರತಿ ಕಂಬಗಳಿಗೂ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಮಿತಿ ಮೀರಿ ಫ್ಲೆಕ್ಸ್‌ಗಳನ್ನು ಅಳವಡಿಸಿರುವುದರಿಂದ ಅಧಿಕೃತ ಯಾವುದು ಅನಧಿಕೃತ ಯಾವುದು ಎಂಬುದನ್ನು ಕಂಡು ಹಿಡಿಯುವುದೇ ಸವಾಲಾಗಿದೆ.

ರಸ್ತೆಯ ಡಿವೈಡರ್‌ನ ಕಂಬಗಳಿಗೆ ಬೃಹದಾಕಾರದ ಫ್ಲೆಕ್ಸ್‌ಗಳನ್ನು ಅಳವಡಿಸಿರುವುದರಿಂದ ವಾಹನ ಚಾಲಕರಿಗೂ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಅಂಬಲಪಾಡಿ ಬೈಪಾಸ್‌, ಕಿನ್ನಿಮುಲ್ಕಿ, ಕರಾವಳಿ ಬೈಪಾಸ್‌, ಕಡಿಯಾಳಿ, ಕುಂಜಿಬೆಟ್ಟು ಮೊದಲಾದ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್‌ಗಳು ತಲೆ ಎತ್ತಿದ್ದು, ಕೆಲವು ಫ್ಲೆಕ್ಸ್‌ಗಳು ರಸ್ತೆಗಳಿಗೂ ವಾಲಿಕೊಂಡಿರುವುದರಿಂದ ವಾಹನ ಸವಾರರಿಗೆ ಅಡ್ಡರಸ್ತೆಗಳಿಂದ ಬರುವ ವಾಹನಗಳು ಕಾಣಿಸದೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇವೆ ಎನ್ನುತ್ತಾರೆ ಸಾರ್ವಜನಿಕರು.

ಧಾರ್ಮಿಕ ಕಾರ್ಯಕ್ರಮಗಳಿಗೆ ಶುಭಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಿ ಆದರೆ ಅಪಾಯಕಾರಿ ಸ್ಥಳಗಳಲ್ಲಿ ಅಳವಡಿಸುವುದು ಯಾಕೆ ಎಂದು ಪ್ರಶ್ನಿಸುತ್ತಾರೆ ಸಾರ್ವಜನಿಕರು.

ಮಿತಿಮೀರುತ್ತಿರುವ ಫ್ಲೆಕ್ಸ್‌ಗಳು ಪರಿಸರಕ್ಕೂ ಮಾರಕವಾಗಿ ಪರಿಣಮಿಸುತ್ತವೆ. ಕೆಲವೆಡೆ ಕಾರ್ಯಕ್ರಮಗಳು ಮುಗಿದ ಬಳಿಕ ಅವುಗಳಿಗೆ ಸಂಬಂಧಿಸಿದ ಫ್ಲೆಕ್ಸ್‌ಗಳನ್ನೂ ತೆರವುಗೊಳಿಸಲಾಗುತ್ತದೆ. ಆದರೆ, ಕೆಲವು ಫ್ಲೆಕ್ಸ್‌ ಬೋರ್ಡ್‌ಗಳು ಕಾರ್ಯಕ್ರಮ ಮುಗಿದರೂ ತಿಂಗಳುಗಟ್ಟಲೆ ಹಾಗೆಯೇ ಇರುತ್ತವೆ.

ಬಸ್‌ನಿಲ್ದಾಣ, ತಡೆಗೋಡೆ, ಬಹುಮಹಡಿ ಕಟ್ಟಡಗಳಲ್ಲೂ ಫ್ಲೆಕ್ಸ್‌ಗಳನ್ನು ಅಳವಡಿಸಲಾಗುತ್ತಿದೆ. ರಸ್ತೆಯ ಡಿವೈಡರ್‌ಗಳಲ್ಲಿ, ತಿರುವುಗಳಲ್ಲಿ ಫ್ಲೆಕ್ಸ್‌ ಅಳವಡಿಸುವುದರಿಂದ ವಾಹನ ಚಾಲಕರ ಗಮನ ಅದರತ್ತ ಹರಿದು ಅಪಘಾತಗಳು ಸಂಭವಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಫ್ಲೆಕ್ಸ್‌ಗಳನ್ನು ಅಳವಡಿಸುವರಿಗೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಮತ್ತು ಅವುಗಳ ಗಾತ್ರಕ್ಕೂ ಮಿತಿ ಅಳವಡಿಸಬೇಕು ಎಂದು ಆಗ್ರಹಿಸುತ್ತಾರೆ ಸಾರ್ವಜನಿಕರು.

ಉಡುಪಿ ನಗರದಲ್ಲಿ ಮೊದಲೇ ಪಾದಚಾರಿಗಳಿಗೆ ನಡೆದಾಡಲು ಸಮರ್ಪಕ ಮಾರ್ಗಗಳೇ ಇಲ್ಲ. ಇರುವ ಕೆಲವು ಪಾದಚಾರಿ ಮಾರ್ಗಗಳಿಗೂ ಜನರು ನಡೆದಾಡದಂತೆ ಅಡ್ಡಲಾಗಿ ಫ್ಲೆಕ್ಸ್‌ಗಳನ್ನು ಇಡಲಾಗುತ್ತಿದೆ. ಇನ್ನು ಕೆಲವು ಪಾದಚಾರಿ ಮಾರ್ಗದಲ್ಲಿ ಅಡ್ಡಲಾಗಿ ಬಿದ್ದು ಜನರಿಗೆ ನಡೆದಾಡಲೂ ಸಮಸ್ಯೆಯಾಗುತ್ತಿದೆ ಎಂದು ಹೇಳುತ್ತಾರೆ.

ನಗರಸಭೆಯ ಮುಂಭಾಗದ ರಸ್ತೆಯ ಪಾದಚಾರಿ ಮಾರ್ಗಗಳಲ್ಲೂ ಇಂತಹ ಫ್ಲೆಕ್ಸ್‌ಗಳನ್ನು ಕಾಣಬಹುದಾಗಿದೆ.

ಪ್ರಚಾರದ ಗೀಳಿಗೆ ಬಿದ್ದಿರುವ ಕೆಲವರು ತಮ್ಮ ಭಾವಚಿತ್ರಗಳನ್ನು ಮುದ್ರಿಸಿ ಹಬ್ಬ ಹರಿದಿನಗಳಿಗೆ ಶುಭಕೋರುವ ಮೂಲಕ ನಗರದ ಅಂದಗೆಡಿಸುತ್ತಿದ್ದಾರೆ ಎಂಬುದು ಜನರ ಆರೋಪವಾಗಿದೆ.

ನಗರಕ್ಕೆ ಯಾವುದೇ ಪಕ್ಷದ ಪ್ರಮುಖ ರಾಜಕಾರಣಿಗಳು ಬರುವುದಿದ್ದರೂ ಅವರು ಓಡಾಡುವ ರಸ್ತೆಗಳ ಬದಿಗಳಲ್ಲಿ ಆಳೆತ್ತರದ ಫ್ಲೆಕ್ಸ್‌ಗಳು ಎದ್ದು ನಿಲ್ಲುತ್ತವೆ. ಕೆಲವೊಂದು ಸಂಸ್ಥೆಗಳ ಜಾಹೀರಾತಿಗಾಗಿಯೂ ಫ್ಲೆಕ್ಸ್‌ಗಳನ್ನು ಅಳವಡಿಸಲಾಗುತ್ತಿದೆ.

ಫ್ಲೆಕ್ಸ್‌ಗಳನ್ನು ನಿಯಂತ್ರಿಸಲು ನಗರಸಭೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಾರೆ ಸಾರ್ವಜನಿಕರು.

ಉಡುಪಿಯ ಸಿಟಿ ಬಸ್‌ ನಿಲ್ದಾಣದ ಬಳಿ ಫ್ಲೆಕ್ಸ್‌ ಅಳವಡಿಸಿರುವುದು
ನಗರದ ರಸ್ತೆಯೊಂದರಲ್ಲಿ ಅಳವಡಿಸಿರುವ ಫ್ಲೆಕ್ಸ್‌ಗಳು
ಅಪಾಯಕಾರಿ ಸ್ಥಳಗಳಲ್ಲಿ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ಕೂಡಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು
ಪ್ರಭಾಕರ ಪೂಜಾರಿ ನಗರಸಭೆ ಅಧ್ಯಕ್ಷ
‘ಅಪಾಯಕಾರಿ ಸ್ಥಳಗಳಿಂದ ತೆರವುಗೊಳಿಸಿ’
ಅಪಾಯಕಾರಿ ಸ್ಥಳಗಳಲ್ಲಿ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ಸಂಬಂಧಪಟ್ಟವರು ಕೂಡಲೇ ತೆರವುಗೊಳಿಸಬೇಕು. ಕೆಲವೆಡೆ ಪಾದಚಾರಿಗಳಿಗೂ ತೊಂದರೆ ಉಂಟಾಗುವ ರೀತಿಯಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಅವುಗಳನ್ನೂ ತೆಗೆಯಬೇಕು. ಫ್ಲೆಕ್ಸ್‌ಗಳನ್ನು ಅಳವಡಿಸುವವರೂ ವಿವೇಚನೆಯಿಂದ ಅಳವಡಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು.
‘ನಗರದ ಸೌಂದರ್ಯತೆ ಮುಚ್ಚಿದೆ’
ಮೊದಲು ಜನಪ್ರತಿನಿಧಿಗಳ ಫ್ಲೆಕ್ಸ್‌ಗಳ ಮೇಲೆ ನಿಯಂತ್ರಣ ಹೇರಬೇಕು. ಫ್ಲೆಕ್ಸ್‌ಗಳಿಂದಾಗಿ ರಸ್ತೆಯಲ್ಲಿನ ಸಂಚಾರಕ್ಕೂ ತೊಂದರೆ ಮಾತ್ರವಲ್ಲ ಪಾದಚಾರಿಗಳು ರಸ್ತೆಯ ಬದಿಯಲ್ಲಿ ತಿರುಗಾಡಲು ಕಷ್ಟದ ಪರಿಸ್ಥಿತಿ ಇದೆ. ಇವುಗಳ ಹಾವಳಿಯಿಂದಾಗಿ ಇಡೀ ನಗರದ ಸೌಂದರ್ಯತೆಯೇ ಮುಚ್ಚಿ ಹೇೂಗಿದೆ ಎನ್ನುತ್ತಾರೆ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ. ಎಂಜಿಎಂ ಕಾಲೇಜಿನ ಹತ್ತಿರದಲ್ಲಂತೂ ಫ್ಲೆಕ್ಸ್‌ನಿಂದಾಗಿ ಕಾಲೇಜು ಎಲ್ಲಿದೆ ಎಂದು ಭೂತಕನ್ನಡಿ ಹಿಡಿದು ಹುಡುಕಬೇಕಾದ ಪರಿಸ್ಥಿತಿ ಬಂದಿದೆ. ಇವುಗಳಿಗೆ ನಗರಸಭೆ ಕಡಿವಾಣ ಹಾಕಲೇ ಬೇಕು. ಆಯ್ದ ಸ್ಥಳಗಳಲ್ಲಿ ಮಾತ್ರ ಫ್ಲೆಕ್ಸ್ ಹಾಕಬೇಕು. ಕಾರ್ಯಕ್ರಮ ಮುಗಿದ ತಕ್ಷಣವೇ ಅದನ್ನು ತೆರವುಗೊಳಿಸುವ ಜವಾಬ್ದಾರಿ ಕೂಡ ಫ್ಲೆಕ್ಸ್ ಹಾಕಿದವರಿಗೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ನಗರಸಭೆಯವರು ಸೂಚನೆ ನೀಡಬೇಕು’
ಫ್ಲೆಕ್ಸ್‌ಗಳನ್ನು ಯಾವ ಜಾಗಗಳಲ್ಲಿ ಅಳವಡಿಸಬೇಕು ಎಂಬುದರ ಬಗ್ಗೆ ನಗರಸಭೆಯವರು ಸೂಚನೆ ನೀಡಬೇಕು. ವಾಹನ ಸವಾರರಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ಫ್ಲೆಕ್ಸ್‌ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಪರಿಶೀಲನೆ ನಡೆಸಬೇಕು. ಒಂದು ಕಾರ್ಯಕ್ರಮಕ್ಕೆ ಇಂತಿಷ್ಟೇ ಫ್ಲೆಕ್ಸ್‌ಗಳನ್ನು ಅಳವಡಿಸಬೇಕು ಎಂಬ ಮಿತಿ ಹಾಕಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್‌ ಸರಳೆಬೆಟ್ಟು.
‘ವಾರಕ್ಕೆರಡು ಬಾರಿ ಕಾರ್ಯಾಚರಣೆ’
ಹೆಚ್ಚಿನವರು ನಗರಸಭೆಯ ಅನುಮತಿ ಪಡೆದೇ ಫ್ಲೆಕ್ಸ್‌ ಅಳವಡಿಸುತ್ತಿದ್ದಾರೆ. ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ವಾರಕ್ಕೊಮ್ಮೆ ಮಾಡುತ್ತಿದ್ದೇವೆ. ಇನ್ನು ವಾರಕ್ಕೆರಡು ಬಾರಿ ತೆರವು ಕಾರ್ಯಾಚರಣೆ ನಡೆಸುತ್ತೇವೆ ಎಂದು ನಗರಸಭೆಯ ಹೆಚ್ಚುವರಿ ಪ್ರಭಾರ ಪೌರಾಯುಕ್ತ ಉದಯ್‌ ಕುಮಾರ್ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.