ADVERTISEMENT

ಡಿಸೆಂಬರ್‌ ಒಳಗೆ ನೌಕರರ ವೇತನ ಪರಿಷ್ಕರಣೆ: ಸಿ.ಎಸ್.ಷಡಕ್ಷರಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 12:29 IST
Last Updated 26 ಜೂನ್ 2022, 12:29 IST
ಸಿ.ಎಸ್. ಷಡಕ್ಷರಿ
ಸಿ.ಎಸ್. ಷಡಕ್ಷರಿ   

ಉಡುಪಿ: ಡಿಸೆಂಬರ್ ಒಳಗೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು ದೊರಕಿಸಿಕೊಡಲು ರಾಜ್ಯ ಸರ್ಕಾರಿ ನೌಕರರ ಸಂಘ ಬದ್ದವಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಭರವಸೆ ನೀಡಿದರು.

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ವಾರ್ಷಿಕ ಸಮಾವೇಶ ಹಾಗೂ ಸೇವಾ ನಿವೃತ್ತಿಗೊಳ್ಳುತ್ತಿರುವ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

7ನೇ ವೇತನ ಆಯೋಗದ ರಚನೆ ಸಂಬಂಧ ತಿಂಗಳೊಳಗೆ ಸಮಿತಿ ರಚನೆಯಾಗಲಿದ್ದು ವರ್ಷಾಂತ್ಯದೊಳಗೆ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ‘ಡಿ’ ದರ್ಜೆ ನೌಕರರಿಗೆ ₹ 10,000, ‘ಸಿ’ ದರ್ಜೆ ನೌಕರರರಿಗೆ ₹20,000, ‘ಬಿ’ ದರ್ಜೆ ಅಧಿಕಾರಿಗಳಿಗೆ ₹ 30,000 ಹಾಗೂ ‘ಎ’ ದರ್ಜೆ ಅಧಿಕಾರಿಗಳಿಗೆ ₹ 40,000ದವರೆಗೂ ವೇತನ ಹೆಚ್ಚಳವಾಗಲಿದೆ ಎಂದು ತಿಳಿಸಿದರು.

ADVERTISEMENT

ರಾಜ್ಯದ ಸರ್ಕಾರಿ ನೌಕರರಿಗೆ ಶೇ 100ರಷ್ಟು ನಗದು ರಹಿತ ಉಚಿತ ಆರೋಗ್ಯ ಚಿಕಿತ್ಸೆ ನೀಡುವ ಯೋಜನೆ ಶೀಘ್ರ ಜಾರಿಯಾಗಲಿದೆ. ನೌಕರರು ಹಾಗೂ ಅವಲಂಬಿತರಿಗೆ ₹ 1 ಲಕ್ಷದಿಂದ ₹ 1 ಕೋಟಿವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದ 6 ಲಕ್ಷ ನೌಕರರ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಪ್ರತಿಭಟನೆ, ಮುಷ್ಕರಗಳಿಲ್ಲದೆ ಹಂತಹಂತವಾಗಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ನಿವೃತ್ತ ನೌಕರರು ನಿವೃತ್ತಿಯಾದ ದಿನವೇ ಪಿಂಚಣಿ ಪಡೆಯವಂತೆ ಯೋಜನೆ ರೂಪಿಸಲಾಗುತ್ತಿದೆ.

ಕೆಜಿಐಡಿ ಸೌಲಭ್ಯಕ್ಕೆ ಆನ್‌‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ವಾರದೊಳಗೆ ಸಾಲದ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗುವ ವ್ಯವಸ್ಥೆ ತಿಂಗಳೊಳಗೆ ಜಾರಿಗೆ ತರುವ ಚಿಂತನೆಯಿದೆ. 2019ರಿಂದ ಬಾಕಿ ಇರುವ ಕೆಜಿಐಡಿ ಬೋನಸ್ ಮೊತ್ತ ₹ 488 ಕೋಟಿ ವಾರದೊಳಗೆ ಬಿಡುಗಡೆ ಆಗಲಿದೆ. ಎನ್‌ಪಿಎಸ್ ಬದಲು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ ಎಂದು ಷಡಕ್ಷರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.