ADVERTISEMENT

ಬ್ರಹ್ಮಾವರ| ಗೃಹಲಕ್ಷ್ಮಿಯೋಜನೆಯಡಿ ₹150 ಕೋಟಿ ವಿನಿಯೋಗ: ಡಾ. ಸುನೀತಾ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:25 IST
Last Updated 20 ಫೆಬ್ರುವರಿ 2026, 2:25 IST
ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು 
ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು    

ಬ್ರಹ್ಮಾವರ: ತಾಲ್ಲೂಕು ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕು ವ್ಯಾಪ್ತಿಯಲ್ಲಿ ₹150 ಕೋಟಿ ಅನುದಾನ ಫಲಾನುಭವಿಗಳಿಗೆ ಲಭ್ಯವಾಗಿದೆ ಎಂದು ಬ್ರಹ್ಮಾವರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ ಹೇಳಿದರು.

ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗೃಹಜ್ಯೋತಿ ಯೋಜನೆಯೂ ಸೇರಿದಂತೆ ಗ್ಯಾರಂಟಿ ಯೋಜನೆಗಳ ಫಲಾನುಭವಿಯಾಗಲು ಪ್ರತೀ ಹಂತದಲ್ಲೂ ಅವಕಾಶವಿರುವುದರಿಂದ ಮತ್ತು ನೇರ ವರ್ಗಾವಣೆ ವ್ಯವಸ್ಥೆ ಇರುವುದರಿಂದ ನಾಗರಿಕರಿಗೆ ಯಶಸ್ವಿಯಾಗಿ ತಲುಪುತ್ತಿವೆ ಎಂದು ತಿಳಿಸಿದರು.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳ ಸೌಲಭ್ಯ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದ್ದು, ಇನ್ನೂ ಈ ಸೌಲಭ್ಯ ತಲುಪದಿರುವ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಗ್ಯಾರಂಟಿ ಯೋಜನೆಗಳ ಯಶೋಗಾಥೆಗಳನ್ನು ಸಂಕಲಿಸಲಾಗುತ್ತಿದ್ದು, ಸಂಬಂಧಿಸಿದ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಿತಿಯ ಸದಸ್ಯೆ ರೇಖಾ ಸುವರ್ಣ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ತಾಂತ್ರಿಕ ಕಾರಣಗಳಿಂದ ಸೌಲಭ್ಯದಿಂದ ವಂಚಿತವಾಗಿರುವ ಫಲಾನುಭವಿಗಳಿಗೆ ಇಲಾಖಾ ಹಂತದಲ್ಲಿ ಶೀಘ್ರವಾಗಿ ಸ್ಪಂದಿಸುವುದರೊಂದಿಗೆ ವೈಯಕ್ತಿಕ ಆದ್ಯತೆ ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉತ್ತರಿಸಿ, ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡುವುದರೊಂದಿಗೆ ತಂತ್ರಾಂಶದ ಮೂಲಕ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಮಿತಿ ಸದಸ್ಯ ರಮೇಶ ತಿಂಗಳಾಯ ಮಾತನಾಡಿ, ಹೂಡೆ ಭಾಗಕ್ಕೆ ನಿರಂತರ ಅಗ್ರಹದ ಕಾರಣ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯವನ್ನು ಒದಗಿಸಲಾಗಿದ್ದರೂ ಆ ಭಾಗದ ನಾಗರಿಕರಿಗೆ ಸಂಜೆಯ ಅವಧಿಯಲ್ಲಿ ಅನುಕೂಲವಾಗುವ ಸಮಯ ನಿಗದಿಯಾಗದಿರುವ ಕಾರಣ ಮತ್ತೊಮ್ಮೆ ಈ ಕುರಿತು ಆಗ್ರಹಿಸುವ ಸಂದರ್ಭ ಬಂದೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದ್ವನಿಗೂಡಿಸಿದ ಸದಸ್ಯ ಶ್ರೀಕಾಂತ ಆಚಾರ್ಯ, ಸಾರಿಗೆ ಸಂಸ್ಥೆಯ ಸ್ಥಳೀಯ ಬಸ್‌ಗಳು ಈ ಭಾಗದ ನಾಗರಿಕರಿಗೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆಯಲ್ಲಿ ಚಲಿಸುವಂತೆ ಮತ್ತು ನಿಗದಿತ ಸಮಯದಲ್ಲಿ ನಿಯಮಿತ ನಿಲ್ದಾಣಗಳಿಗೆ ಕಡ್ಡಾಯವಾಗಿ ತಲುಪುವಂತೆ ಕ್ರಮ ವಹಿಸಲು ಹಲವು ಸಭೆಗಳಲ್ಲಿ ಮನವಿ ಮಾಡಿದ್ದರೂ ಇನ್ನೂ ಸುಧಾರಣೆ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಹಂತದ ಸಭೆಗಳಲ್ಲಿ ತಾವು ಈಗಾಗಲೇ ಈ ಕುರಿತು ಪ್ರಸ್ತಾಪಿಸಿದ್ದು, ಆದ್ಯತೆ ನೀಡಿ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.

ಯುವನಿಧಿ ಯೋಜನೆ ಅನುಷ್ಠಾನ ಸಂಬಂಧ ತಾಲ್ಲೂಕು ಹಂತದಲ್ಲಿ ಫಲಾನುಭವಿಗಳ ನೋಂದಣಿಯ ಪ್ರಮಾಣ ಕಡಿಮೆಯಿದ್ದು, ಸಂಬಂಧಿಸಿದ ಇಲಾಖೆಯ ಮೂಲಕ ಕಾಲೇಜುಗಳಲ್ಲಿ ಈ ಕುರಿತು ಮಾಹಿತಿ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳುವುದು ಅಗತ್ಯ ಎಂದು ಸಮಿತಿಯ ಸದಸ್ಯರು ಆಗ್ರಹಿಸಿದರು.

ಗ್ಯಾರಂಟಿ ಸಮಿತಿಯ ಸದಸ್ಯರಾದ ಗೋಪಿನಾಯ್ಕ, ರಾಮಕೃಷ್ಣ, ಸುರೇಶ ಪೂಜಾರಿ, ದಿವಾಕರ ಗಾಣಿಗ, ಶ್ರೀನಿವಾಸ ವಡ್ದರ್ಸೆ ಮತ್ತಿತರರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೆಸ್ಕಾಂ, ಆಹಾರ ಇಲಾಖೆ, ಕೌಶಲಾಭಿವೃದ್ಧಿ ಇಲಾಖೆ ಮತ್ತು ಸಾರಿಗೆ ಇಲಾಖೆಗಳ ಅಧಿಕಾರಿಗಳು ಮಾಸಿಕ ಪ್ರಗತಿಯ ವಿವರ ಮಂಡಿಸಿದರು.

ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಇಒ ಎಚ್.ವಿ ಇಬ್ರಾಹಿಂಪುರ, ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್ ಬಾಂಜಿ, ಸಹಾಯಕ ನಿರ್ದೇಶಕ ಮಹೇಶ ಕೆ., ಸುಧಾಕರ ಶೆಟ್ಟಿ, ಯೋಜನಾಧಿಕಾರಿ ಸಂದೇಶ ಶೆಟ್ಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.