ADVERTISEMENT

ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿ: ಶಾಸಕ ಗುರುರಾಜ್ ಗಂಟಿಹೊಳೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 2:51 IST
Last Updated 27 ಸೆಪ್ಟೆಂಬರ್ 2025, 2:51 IST
ಹಾಸ್ಟೆಲ್ ಸಮಸ್ಯೆಗಳ ಕುರಿತು ಶಾಸಕ ಗುರುರಾಜ್ ಗಂಟಿಹೊಳೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಹಾಸ್ಟೆಲ್ ಸಮಸ್ಯೆಗಳ ಕುರಿತು ಶಾಸಕ ಗುರುರಾಜ್ ಗಂಟಿಹೊಳೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.   

ಬೈಂದೂರು: ಇಲ್ಲಿನ ತಾಲ್ಲೂಕು ಆಡಳಿತ ಸೌಧದಲ್ಲಿರುವ ಶಾಸಕರ ಕಚೇರಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ– ಪಂಗಡ, ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಸ್ಟೆಲ್ ಸಮಸ್ಯೆ ಕುರಿತು ಶಾಸಕ ಗುರುರಾಜ್ ಗಂಟಿಹೊಳೆ ಅವರು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯ, ವಸತಿ ಶಾಲೆಗಳಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಆದರೆ ಕುಂದಾಪುರ, ಉಡುಪಿ ಭಾಗಗಳಲ್ಲಿನ ಹಾಸ್ಟೆಲ್‌ಗಳಲ್ಲಿ ಅರ್ಜಿ ಹಾಕಿರುವ ಗ್ರಾಮೀಣ ಭಾಗದ ಬಡ ಕುಟುಂಬಗಳ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.  ವಿದ್ಯಾರ್ಥಿಗಳು ಹಾಸ್ಟೆಲ್ ವಂಚಿತರಾಗುತ್ತಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ನಿರಂತರ ತರುವ ವ್ಯವಸ್ಥೆಗಳಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸ ಹಾಸ್ಟೆಲ್‌ಗಳ ಪ್ರಸ್ತಾವನೆ, ಉನ್ನತೀಕರಣ, ನಿರ್ವಹಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಪ್ರಸ್ತಾವನೆಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸುವುದು. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಹಾಸ್ಟೆಲ್ ಬೇಡಿಕೆ, ವಿವಿಧ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ADVERTISEMENT

ಹಾಸ್ಟೆಲ್ ವಾರ್ಡನ್‌ಗಳು, ವಸತಿ ಶಾಲೆಗಳ ಪ್ರಾಂಶುಪಾಲರು ಪ್ರತಿ ವಿದ್ಯಾರ್ಥಿಯ ಬಗ್ಗೆ ಗಮನ ಹರಿಸಿ ಗುಣಮಟ್ಟದ ಸೌಲಭ್ಯ ಒದಗಿಸುವುದರ ಜೊತೆಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವುದರ ಕಡೆಗೆ ಗಮನ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ, ವಿವಿಧ ವಸತಿ ಶಾಲೆಗಳ ಪ್ರಾಂಶುಪಾಲರು, ಹಾಸ್ಟೆಲ್ ವಾರ್ಡನ್‌ಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.