ADVERTISEMENT

‘ಕ್ಯಾನ್ಸರ್‌ ರೋಗಿಗಳಿಗೆ ಕೇಶದಾನ ಮಾಡಿ’

ಫೆ.21ರಂದು ಕಾರ್ಕಳದ ರೋಟರಿ ಬಾಲಭವನದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 16:14 IST
Last Updated 8 ಫೆಬ್ರುವರಿ 2021, 16:14 IST

ಉಡುಪಿ: ಕ್ಯಾನ್ಸರ್‌ನಿಂದ ತಲೆಕೂದಲು ಕಳೆದುಕೊಂಡಿರುವವರ ಮುಖದಲ್ಲಿ ಮಂದಹಾಸ ಮೂಡಿಸುವ ಉದ್ದೇಶದಿಂದ ಫೆ.21ರಂದು ಕಾರ್ಕಳದ ರೋಟರಿ ಬಾಲಭವನದಲ್ಲಿ ‘ಕೇಶದಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಕಳ ರೋಟರಿ ಆನ್ಸ್‌ ಕ್ಲಬ್‌ ಅಧ್ಯಕ್ಷೆ ನಮಿತಾ ಶೈಲೇಂದ್ರ ರಾವ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ರೋಟರಿ ಆನ್ಸ್ ಕ್ಲಬ್, ಉಡುಪಿ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಹಾಗೂ ಯುವವಾಹಿನಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ 9 ರಿಂದ 12ರವರೆಗೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಶದಾನ ಯಶಸ್ವಿಯಾಗಿ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎಂದರು.

ಒಬ್ಬರು ಕ್ಯಾನ್ಸರ್‌ ರೋಗಿಗೆ ವಿಗ್ ತಯಾರಿಸಲು ಮೂವರ ಕೂದಲು ಅಗತ್ಯವಿರುತ್ತದೆ. ಕೂದಲು ತೆಳುವಾಗಿದ್ದರೆ 10 ಜನರ ಕೂದಲು ಬೇಕಾಗಬಹುದು. ಕೂದಲು ಕತ್ತರಿಸಿದರೆ ಮತ್ತೆ ಬೆಳೆಯುವುದರಿಂದ ಆತಂಕ ಬೇಡ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೇಶದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಜೋಡಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಕೇಶದಾನ ಮಾಡಲು ಆಸಕ್ತಿ ಇರುವವರು ಹೆಸರು ನೋಂದಾಯಿಸಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಬಂದು ಕೂದಲು ಕೊಡಲು ಇಷ್ಟವಿಲ್ಲದವರು ಮನೆಯಿಂದಲೇ ಕೊರಿಯರ್ ಮೂಲಕ ಕಳುಹಿಸಬಹುದು. ನಮಿತಾ ಶೈಲೇಂದ್ರ ರಾವ್‌, ರೋಟರಿ ಆನ್ಸ್‌ ಕ್ಲಬ್ ಕಾರ್ಕಳ ವಿಳಾಸಕ್ಕೆ ಕಳುಹಿಸಬಹುದು. ಕೂದಲು ಕನಿಷ್ಠ 15 ಇಂಚು ಇರಲಿ ಎಂದು ಮನವಿ ಮಾಡಿದರು.

ಕಾರ್ಕಳದಲ್ಲಿ ಈಗಾಗಲೇ ಮೂವರು ಕೂದಲು ಕಳುಹಿಸಿದ್ದಾರೆ. ಅಭಿಯಾನ ಆರಂಭವಾದ ಮೂರು ದಿನಗಳಲ್ಲಿ 15 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕ್ಯಾನ್ಸರ್ ರೋಗಿಗಳ ಮುಖದಲ್ಲಿ ನಗುವಿಗೆ ಕಾರಣರಾಗಬೇಕು ಎಂದು ನಮಿತಾ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮರಿಯಾ ಮೋಲಿ, ವೇದಾ ಸುವರ್ಣ, ತಾರಾನಾಥ್ ಕೋಟ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.