ADVERTISEMENT

ಉಡುಪಿ | ಭಾರಿ ಮಳೆ: ಕೃತಕ ನೆರೆ, ನಾಳೆ ಶಾಲಾ ಕಾಲೇಜುಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 14:07 IST
Last Updated 30 ಜೂನ್ 2022, 14:07 IST
ಉಡುಪಿಯ ಶೆಟ್ಟಿಬೆಟ್ಟುವಿನಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದಿರುವುದು
ಉಡುಪಿಯ ಶೆಟ್ಟಿಬೆಟ್ಟುವಿನಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದಿರುವುದು   

ಉಡುಪಿ: ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಸುರಿದ ಮಳೆ ಅನಾಹುತಗಳನ್ನು ಸೃಷ್ಟಿಸಿದೆ. ಭಾರಿ ಮಳೆಗೆ ಕೃತಕ ನೆರೆ ಬಂದಿದ್ದು ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಉಡುಪಿ ನಗರದ ಶಾರದಾನಗರದಲ್ಲಿ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳ ಜಲಾವೃತಗೊಂಡಿತ್ತು. ಬೈಲಕೆರೆಯಲ್ಲಿ ರಸ್ತೆಗಳು ನೀರಿನಿಂದ ಮುಳುಗಿಹೋಗಿದ್ದವು. ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು. ಹಲವು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಯಿತು.

ಮಳೆಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿ 66ರ ಹಲವು ಕಡೆಗಳಲ್ಲಿ ನೀರು ತುಂಬಿತ್ತು. ಕರಾವಳಿ ಬೈಪಾಸ್‌, ಅಂಬಲಪಾಡಿ ಸಮೀಪದ ಸೇವಾ ರಸ್ತೆಗಳು ಜಲಾವೃತಗೊಂಡು ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

ರಾಷ್ಟ್ರೀಯ ಹೆದ್ದಾರಿ 169 ಎ ವ್ಯಾಪ್ತಿಯ ಮಣಿಪಾಲ–ಉಡುಪಿ ಮುಖ್ಯ ರಸ್ತೆಯಲ್ಲೂ ಮಳೆ ನೀರು ಜಮಾವಣೆಯಾಗಿತ್ತು. ಪರಿಣಾಮ ವಾಹನ ಸವಾರರು ಸಮಸ್ಯೆ ಎದುರಿಸಬೇಕಾಯಿತು.

ಮಳೆಗಾಲಕ್ಕೂ ಮುನ್ನ ನಗರಸಭೆ ಹೂಳು ತೆಗೆಸದ ಪರಿಣಾಮ ನಗರದ ಬಹುತೇಕ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ರಸ್ತೆಗೆ ತ್ಯಾಜ್ಯ ಹರಿಯುತ್ತಿತ್ತು. ಕೃಷ್ಣಮಠದ ರಥಬೀದಿ ಭಾಗಶಃ ಜಲಾವೃತಗೊಂಡಿತ್ತು. ಇಲ್ಲಿನ ಅಂಗಡಿ ಮಳಿಗೆಗಳಿಗೆ ಮಳೆಯ ನೀರು ನುಗ್ಗಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಮಠದ ಪಾರ್ಕಿಂಗ್ ಜಾಗವೂ ಜಲಾವೃತಗೊಂಡಿತ್ತು. ಬಡಗುಪೇಟೆಯಲ್ಲೂ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ.

ಮೂಡನಿಡಂಬೂರು, ಮಠದಬೆಟ್ಟು, ಬೈಲಕೆರೆ ಹಾಗೂ ಗುಂಡಿಬೈಲಿನಲ್ಲಿ ಸಂಪರ್ಕ ರಸ್ತೆಗಳು ಜಲಾವೃತಗೊಂಡು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯ ನಿವಾಸಿಗಳು ಸಮಸ್ಯೆ ಅನುಭವಿಸಿದರು. ಮಣಿಪಾಲದ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡಿತ್ತು.

ಪರ್ಕಳದಲ್ಲಿ ಮೀನು ಮಾರುಕಟ್ಟೆಯ ಎದುರಿರುವ ಆಶಾ ಜನರಲ್ ಸ್ಟೋರ್ ಮುಂಭಾಗ ರಸ್ತೆಯ ಅಂಚಿನಲ್ಲಿದ್ದ ಬಾದಾಮಿ ಮರ ಬುಡ ಸಮೇತವಾಗಿ ಅಂಗಡಿಯ ಮೇಲೆ ಬಿದ್ದಿದೆ. ಯಾರಿಗೂ ಅಪಾಯವಾಗಿಲ್ಲ. ಪರ್ಕಳ ಪೇಟೆಯಲ್ಲಿ ಉದ್ಯಮಿ ಗೋಪಾಲ್ ಆಚಾರ್ಯ ಅವರ ಅಂಗಳದಲ್ಲಿದ್ದ ತೆಂಗಿನ ಮರ ಗಾಳಿ ಮಳೆಗೆ ಬುಡ ಸಮೇತ ಪಕ್ಕದ ಅಂಚೆ ಕಚೇರಿಯ ಕಟ್ಟಡದ ಮೇಲೆರಗಿದೆ.

ಪರ್ಕಳದ ಶೆಟ್ಟಿಬೆಟ್ಟುವಿನ ಚಂದು ಪೂಜಾರಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಅಶೋಕ್ ನಾಯಕ್ ಅವರ ಮನೆಯ ತಗಡಿನ ಮೇಲೂ ತೆಂಗಿನ ಮರ ಬಿದ್ದಿದೆ.

ಶಾಲಾ ಮಕ್ಕಳಿಗೆ ತೊಂದರೆ:ಬುಧವಾರ ತಡ ರಾತ್ರಿ ಆರಂಭವಾದ ಮಳೆ ಗುರುವಾರವೂ ಮುಂದುವರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡು ಮಕ್ಕಳಿಗೆ ಶಾಲೆಗಳಿಗೆ ಹೋಗಲು ಸಮಸ್ಯೆಯಾಯಿತು. ಮಕ್ಕಳು ಆತಂಕದಲ್ಲಿಯೇ ಮಳೆ ನೀರಿಯನಲ್ಲಿ ಶಾಲೆಗಳತ್ತ ಹೆಜ್ಜೆ ಹಾಕಿದರು. ಕಚೇರಿಗಳಿಗೆ ಹೋಗುವವರು, ನಿತ್ಯದ ಕೆಲಸ ಕಾರ್ಯಗಳಿಗೆ ಮಾರುಕಟ್ಟೆಗೆ ಬಂದವರು ಕೂಡ ಸಮಸ್ಯೆ ಎದುರಿಸಿದರು.

ಎಲ್ಲಿ ಎಷ್ಟು ಮಳೆ:ಕಳೆದ 24 ಗಂಟೆಗಳಲ್ಲಿ ಉಡುಪಿಯಲ್ಲಿ 32.2 ಬ್ರಹ್ಮಾವರದಲ್ಲಿ 33.1, ಕಾಪುವಿನಲ್ಲಿ 40.1, ಕುಂದಾಪುರದಲ್ಲಿ 51.5, ಬೈಂದೂರಿನಲ್ಲಿ 39.0, ಕಾರ್ಕಳದಲ್ಲಿ 30.1, ಹೆಬ್ರಿಯಲ್ಲಿ 53 ಮಿ.ಮೀ ಮಳೆ ಬಿದ್ದಿದ್ದು, ಜಿಲ್ಲೆಯಲ್ಲಿ ಸರಾಸರಿ 40.9 ಮಿ.ಮೀ ಮಳೆಯಾಗಿದೆ.

ಧರೆಗುರುಳಿದ 80 ವಿದ್ಯುತ್ ಕಂಬಗಳು
ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯಾದ್ಯಂತ 80 ವಿದ್ಯುತ್ ಕಂಬಗಳು ಧರೆಗುರುಳಿವೆ. ಉಡುಪಿ ವಿಭಾಗದಲ್ಲಿ 30 ವಿದ್ಯುತ್ ಕಂಬಗಳು ಬಿದ್ದಿದ್ದು, 3 ಟ್ರಾನ್ಸ್‌ಫರಂಗಳು ಸುಟ್ಟುಹೋಗಿವೆ. 850 ಮೀಟರ್ ವಿದ್ಯುತ್ ಪೂರೈಸುವ ವೈರ್‌ ತುಂಡಾಗಿದ್ದು ₹ 8.2 ಲಕ್ಷ ಹಾನಿಯಾಗಿದೆ. ಕುಂದಾಪುರ ವಿಭಾಗದಲ್ಲಿ 38 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 4 ಟ್ರಾನ್ಸ್‌ಫರಂ, 1.5 ಕಿ.ಮೀ ಉದ್ದದ ವಿದ್ಯುತ್ ಪೂರೈಕೆ ವೈರ್ ಹಾಳಾಗಿದ್ದು, ₹12 ಲಕ್ಷ ಹಾನಿ ಸಂಭವಿಸಿದೆ. ಕಾರ್ಕಳ ವಿಭಾಗದಲ್ಲಿ 8 ವಿದ್ಯುತ್ ಕಂಬಗಳು ಬಿದ್ದು,200 ಮೀಟರ್ ವಿದ್ಯುತ್ ವೈರ್‌ ಹಾಳಾಗಿದ್ದು, ₹ 1 ಲಕ್ಷ ಹಾನಿ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 1ರಂದು ಶಾಲಾ ಕಾಲೇಜುಗಳಿಗೆ ರಜೆ
ಉಡುಪಿ
: ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಮುಂದಿನ 2 ದಿನಗಳ ಕಾಲ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಮುಂಜಾಗೃತಾ ಕ್ರಮವಾಗಿ ಜುಲೈ 1ರಂದು ಶಾಲಾ ಕಾಲೇಜು ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

‘ನೆರೆ ರಕ್ಷಣಾ ಕಾರ್ಯಕ್ಕೆ ಸಿದ್ಧತೆ’
ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ನೆರೆ ಬಂದರೆ ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಕಾರ್ಯಕ್ಕೆ ಬೋಟ್‌ಗಳ ವ್ಯವಸ್ಥೆ ಮಾಡಲಾಗಿದೆ. ನೆರೆ ರಕ್ಷಣಾ ಕಾರ್ಯಾಚರಣೆಗೆ ಸಿಬ್ಬಂದಿ ಹಾಗೂ ಸ್ವಯಂಸೇವಕರ ತಂಡ ಸಜ್ಜಾಗಿದ್ದು, ಅಗತ್ಯ ತರಬೇತಿ ನೀಡಲಾಗಿದೆ. ನಗರದ ತಗ್ಗು ಪ್ರದೇಶಗಳಿಗೆ, ತೋಡುಗಳು ಹರಿಯುವ ಪ್ರದೇಶಗಳಿಗೆ ಭೇಟಿನೀಡಿ ಪರಿಸ್ಥಿತಿ ಅವಲೋಕಿಸಲಾಗಿದೆ. ಸ್ಥಳೀಯರಿಂದ ಅಹವಾಲು ಆಲಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಹಾಯವಾಣಿ ಆರಂಭಿಸಲಾಗಿದೆ. ಮೆಸ್ಕಾಂ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಪ್ರತ್ಯೇಕ ಹೆಲ್ಪ್‌ಲೈನ್ ತೆರೆಯಲಾಗಿದೆ. ಮಳೆ ಹೆಚ್ಚಾದರೆ ಶಾಲೆಗಳ ಮುಖ್ಯೋಪಾದ್ಯರಿಗೆ ರಜೆ ನೀಡುವ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.

ಪರ್ಕಳದಲ್ಲಿ ಅಂಗಡಿ ಮಳಿಗೆ ಮೇಲೆ ಬಾದಾಮಿ ಮರ ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.