ADVERTISEMENT

ಗಾಳಿ ಮಳೆ: ಕುಸಿದ ಮನೆ, ಧರೆಗುರುಳಿದ ವಿದ್ಯುತ್ ಕಂಬಗಳು

15 ಮನೆಗಳಿಗೆ ಭಾಗಶಃ ಹಾನಿ, ಮೆಸ್ಕಾಂಗೆ 36 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 16:31 IST
Last Updated 13 ಜೂನ್ 2021, 16:31 IST
ಉಡುಪಿಯಲ್ಲಿ ಗಾಳಿ ಮಳೆಗೆ ಮುರಿದು ಬಿದ್ದಿರುವ ವಿದ್ಯುತ್ ಕಂಬ
ಉಡುಪಿಯಲ್ಲಿ ಗಾಳಿ ಮಳೆಗೆ ಮುರಿದು ಬಿದ್ದಿರುವ ವಿದ್ಯುತ್ ಕಂಬ   

ಉಡುಪಿ: ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿದ್ದು, ಗಾಳಿ ಮಳೆಯ ಅಬ್ಬರಕ್ಕೆ ಹಲವು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ನೂರಾರು ವಿದ್ಯುತ್ ಕಂಬಗಳು, ಮರಗಳು ಧರೆಗುಳಿದಿವೆ.

15 ಮನೆಗಳಿಗೆ ಹಾನಿ: ಮಳೆಯ ಅಬ್ಬರಕ್ಕೆ ಮರಗಳು ಮನೆಗಳ ಮೇಲೆ ಬಿದ್ದು 15 ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮದ ಬೋರ್ಗಲ್ ಗುಡ್ಡೆ ಬಾಳೆ ಹಿತ್ತಲಿನಲ್ಲಿ, ಕಸಬಾ ಗ್ರಾಮದ ಕಾಳಿಕಾಂಬಾ ದೇವಸ್ಥಾನ ಬಳಿ ಮನೆಗಳ ಮೇಲೆ ಮರಬಿದ್ದು ಹಾನಿಯಾಗಿದೆ.

ನಿಟ್ಟೆ ಗ್ರಾಮದ ಕೊಟ್ರಬೆಟ್ಟುವಿನಲ್ಲಿ ಶೇಖರ ಶೆಟ್ಟಿ ಅವರ ಮನೆ, ಮಿಯಾರು ಗ್ರಾಮದ ಮುಲಡ್ಕದಲ್ಲಿ, ಮಿಯಾರು ಗ್ರಾಮದ ಬೋರಕಟ್ಟೆ, ನಿಟ್ಟೆ ಗ್ರಾಮದ ಮದನಾಡು, ಕಾಂತಾವರ ಗ್ರಾಮ, ಮಿಯಾರು ಗ್ರಾಮದ ಬೋರಕಟ್ಟೆ, ಮಾಳದಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ADVERTISEMENT

ಕಾಪು ತಾಲ್ಲೂಕಿನ ನಂದಿಕೂರು, ಪಡು, ಮಲ್ಲಾರು, ತೆಂಕ, ನಡ್ಸಾಲುವಿನಲ್ಲಿ ಮರಬಿದ್ದು ಮನೆ ಕುಸಿದಿದೆ. ಬಂಗ್ಲೆಗುಡ್ಡೆ ಮಸೀದಿ ಕಟ್ಟಡದ ಮೇಲೆ ತೆಂಗಿನ ಮರ ಬಿದ್ದಿದೆ. ರಸ್ತೆ ಬದಿಯ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಒಟ್ಟು ₹ 3.77 ಲಕ್ಷ ನಷ್ಟವಾಗಿದೆ. ಉಡುಪಿ ತಾಲ್ಲೂಕಿನ ಹಿರೇಬೆಟ್ಟು, ಕಡೆಕಾರು ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.

ಧರೆಗುರುಳಿದ ವಿದ್ಯುತ್ ಕಂಬಗಳು: ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಉಡುಪಿಯ ಪ್ರಸಾದ್ ನೇತ್ರಾಲಯದ ಎದುರು ವಿದ್ಯುತ್ ಕಂಬ ಮುರಿದುಬಿದ್ದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೋಟೇಶ್ವರದ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಎದುರಿನ ಪುರಾತನ ಅಶ್ವತ್ಥ ಮರ ಬುಡ ಮೇಲಾಗಿತ್ತು. ಒಟ್ಟು ಜಿಲ್ಲೆಯಲ್ಲಿ 106 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 23 ಟ್ರಾನ್ಸ್‌ಫಾರಂಗಳು ಸುಟ್ಟುಹೋಗಿವೆ. ₹ 36 ಲಕ್ಷ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.