ADVERTISEMENT

ಮಳೆ ಬಿರುಸು: ನೆರೆಗೆ ಜನಜೀವನ ಅಸ್ತವ್ಯಸ್ತ

ಕಡಲು ಪ್ರಕ್ಷುಬ್ಧ: ಹಲವೆಡೆ ಕಡಲ್ಕೊರೆತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 12:59 IST
Last Updated 5 ಜುಲೈ 2022, 12:59 IST
ಉಡುಪಿಯ ಮೂಡನಿಡಂಬೂರು ಪ್ರದೇಶದಲ್ಲಿ ಮನೆಗೆ ಮಳೆಯ ನೀರು ನುಗ್ಗಿರುವುದು.
ಉಡುಪಿಯ ಮೂಡನಿಡಂಬೂರು ಪ್ರದೇಶದಲ್ಲಿ ಮನೆಗೆ ಮಳೆಯ ನೀರು ನುಗ್ಗಿರುವುದು.   

ಉಡುಪಿ: ಜಿಲ್ಲೆಯಾದ್ಯಂತ ಮಂಗಳವಾರವೂ ಭಾರಿ ಮಳೆಯಾಗಿದ್ದು ಹೆಬ್ರಿ, ಬ್ರಹ್ಮಾವರ, ಉಡುಪಿ, ಬೈಂದೂರು ಹಾಗೂ ಕುಂದಾಪುರ ತಾಲ್ಲೂಕುಗಳಲ್ಲಿ ಕೃತಕ ನೆರೆಯಿಂದಾಗಿ ಗ್ರಾಮಗಳು ಜಲಾವೃತಗೊಂಡಿದ್ದವು. ಬಿರುಸಿನ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು.

ಜಿಲ್ಲೆಯಾದ್ಯಂತ ಭತ್ತದ ನಾಟಿ ಕಾರ್ಯ ಬಿರುಸಾಗಿದ್ದು ಬಾರಿ ಮಳೆ ಸುರಿದ ಪರಿಣಾಮ ಗದ್ದೆಗಳಲ್ಲಿ ಮಳೆಯ ನೀರು ತುಂಬಿಕೊಂಡಿದೆ. ಮಳೆ ಕಡಿಮೆಯಾಗದಿದ್ದರೆ ಭತ್ತದ ನೇಜಿ ನಾಶವಾಗುವ ಆತಂಕ ಎದುರಾಗಿದ್ದು ರೈತರಿಗೆ ಭಾರಿ ನಷ್ಟವಾಗಲಿದೆ. ಸ್ವರ್ಣ, ಸೀತಾ, ಸೌಪರ್ಣಿಕ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಪ‍ಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆ ಜೋರಾಗಿರುವುದರಿಂದ ಜಿಲ್ಲೆಯಲ್ಲಿ ಹರಿಯುವ ನದಿಗಳು ಮೈದುಂಬಿಕೊಂಡಿವೆ. ಮಳೆಯ ಪ್ರಮಾಣ ಹೆಚ್ಚಾದರೆ ನದಿಯಂಚಿನ ಗ್ರಾಮಗಳು ಜಲಾವೃತವಾಗುವ ಆತಂಕ ಎದುರಾಗಿದ್ದು, ಗ್ರಾಮಸ್ಥರು ಭೀತಿಯಲ್ಲಿದ್ದಾರೆ.

ADVERTISEMENT

ಉಡುಪಿಯ ಮೂಡನಿಡಂಬೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇಲ್ಲಿನ ಬ್ರಹ್ಮ ಬೈದರ್ಕಳ ಗರಡಿ ಜಲ ದಿಗ್ಭಂಧನಕ್ಕೆ ಸಿಲುಕಿದೆ. ಮಠದಬೆಟ್ಟು ಬಳಿ ಹರಿಯುವ ಕಲ್ಸಂಕ ತೋಡು ತುಂಬಿ ಹರಿಯುವ ಭೀತಿ ಎದುರಾಗಿದೆ. ಬೈಲೂರಿನಲ್ಲೂ ಕೃತಕ ನೆರೆ ಸೃಷ್ಟಿಯಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಜಲಾವೃತಗೊಂಡಿತ್ತು.

ಬೈಂದೂರು ತಾಲ್ಲೂಕಿನ ಶಿರೂರು ಹಾಗೂ ನಾಡ ಗ್ರಾಮದಲ್ಲಿ ಮನೆಗಳ ಮೇಲೆ ಮರಬಿದ್ದು ಹಾನಿಯಾಗಿದೆ. ಮಳೆಯ ಆರ್ಭಟಕ್ಕೆ ಕಡಲ್ಕೊರೆತ ಉಂಟಾಗಿದೆ. ಕರಾವಳಿ ಭಾಗಗಳಾದ ಶಿರೂರು, ಪಡುವರಿ, ತಾರಾಪತಿ, ಕೊಡೇರಿ, ಮರವಂತೆಯ ಸಮುದ್ರತೀರಗಳಲ್ಲಿ ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿದ್ದು ‌ಕಡಲ್ಕೊರೆತ ಉಂಟಾಗಿದೆ. ತೀರ ಪ್ರದೇಶಗಳಲ್ಲಿ ವಾಸಮಾಡುತ್ತಿರುವ ಜನರಲ್ಲಿ ಆತಂಕ ಶುರುವಾಗಿದೆ.

ಮಲೆನಾಡು ಪ್ರದೇಶದಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೊಲ್ಲೂರು, ಗೋಳಿಹೊಳೆ,
ಗಂಗಾನಾಡು, ಕಾಲ್ತೋಡು, ಹೇರೂರು, ಬಡಾಕೆರೆ ಸೇರಿದಂತೆ ಹಲವೆಡೆ ಕೃತಕ ನೆರೆ ಬಂದಿದೆ. ಭತ್ತದ ಗದ್ದೆಗಳು ನೀರಿನಿಂದ ಆವೃತವಾಗಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.

ಉಡುಪಿ ತಾಲ್ಲೂಕಿನಲ್ಲಿ 58.9 ಮಿ.ಮೀ, ಬ್ರಹ್ಮಾವರದಲ್ಲಿ 85.9, ಕಾಪುವಿನಲ್ಲಿ 50.6, ಕುಂದಾಪುರದಲ್ಲಿ 78.8 ಮಿ.ಮೀ, ಬೈಂದೂರಿನಲ್ಲಿ 67.3, ಕಾರ್ಕಳದಲ್ಲಿ 75.6, ಹೆಬ್ರಿಯಲ್ಲಿ 141.8 ಮಿ.ಮೀ. ಮಳೆಯಾಗಿದೆ.

ವಿದ್ಯುತ್ ಕಂಬಗಳು ಧರೆಗೆ

ಭಾರಿ ಗಾಳಿ ಮಳೆಗೆ ಮರಗಳು ಧರೆಗುರುಳಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮಂಗಳವಾರ ಉಡುಪಿ ವಿಭಾಗದಲ್ಲಿ 18, ಕುಂದಾಪುರ ವಿಭಾಗದಲ್ಲಿ 28 ಹಾಗೂ ಕಾರ್ಕಳ ವಿಭಾಗದಲ್ಲಿ 11 ವಿದ್ಯುತ್ ಕಂಬಗಳ ಬಿದ್ದಿವೆ. ಉಡುಪಿ ವಿಭಾಗದಲ್ಲಿ 6 ಟ್ರಾನ್ಸ್‌ಫರಂಗಳು ಸುಟ್ಟುಹೋಗಿದ್ದು 0.94 ಕಿ.ಮೀ ವಿದ್ಯುತ್ ಪೂರೈಕೆ ಮಾರ್ಗಕ್ಕೆ ಹಾನಿಯಾಗಿದೆ. ₹ 16.28 ಲಕ್ಷ ಹಾನಿಯಾಗಿದೆ. ಜುಲೈ 1ರಿಂದ ಇಲ್ಲಿಯವರೆಗೂ ಸುರಿದ ಮಳೆಗೆ ಜಿಲ್ಲೆಯಲ್ಲಿ 191 ವಿದ್ಯುತ್ ಕಂಬಗಳು, 18 ಪರಿವರ್ತಕಗಳು, 5.4 ಕಿ.ಮೀ ವಿದ್ಯುತ್ ಪೂರೈಕೆ ಮಾಡುವ ವೈರ್‌ಗಳಿಗೆ ಹಾನಿಯಾಗಿದೆ. 52.41 ಲಕ್ಷ ಹಾನಿ ಅಂದಾಜಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಜೆ ಘೋಷಣೆ ವಿಳಂಬ: ಗೊಂದಲ

ಜಿಲ್ಲಾಡಳಿತ ಮಂಗಳವಾರ ರಜೆ ಘೋಷಣೆ ಮಾಡಲು ವಿಳಂಬ ಮಾಡಿದ ಪರಿಣಾಮ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ರಜೆ ಘೋಷಣೆಯ ಆದೇಶ ಶಾಲೆಗಳಿಗೆ ತಲುಪಿ ಪೋಷಕರನ್ನು ಮುಟ್ಟುವ ಹೊತ್ತಿಗೆ ಶಾಲೆಗೆ ಹೊರಡುವ ಸಮಯವಾಗಿದ್ದರಿಂದ, ಮಕ್ಕಳು ಶಾಲಾ ವಾಹನಗಳನ್ನು ಹತ್ತಿಯಾಗಿತ್ತು. ರಜೆಯ ವಿಷಯ ತಿಳಿದ ಕೆಲವು ಶಾಲಾ ವಾಹನಗಳ ಚಾಲಕರು ಮರಳಿ ಮಕ್ಕಳನ್ನು ಮನೆಗೆ ಕರೆತಂದು ಬಿಟ್ಟರು. ಕೆಲವು ಮಕ್ಕಳು ಶಾಲೆಯ ಬಳಿ ಪೋಷಕರಿಗೆ ಕಾಯುತ್ತಿದ್ದ ದೃಶ್ಯ ಕಂಡುಬಂತು. ಸೋಮವಾರ ಸಂಜೆ ವಾಟ್ಸ್‌ಆ್ಯಪ್‌ನಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಿರುವ ಆದೇಶದ ಪ್ರತಿ ವೈರಲ್ ಆಗಿ ಪೋಷಕರು ಗೊಂದಲಕ್ಕೆ ಸಿಲುಕಿದ್ದರು. ರಜೆ ಘೋಷಣೆ ಸುಳ್ಳು ಸುದ್ದಿ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿ ಗೊಂದಲ ಪರಿಹರಿಸಿದ್ದರು. ಮಂಗಳವಾರ ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡಿದರೂ ಬಹುತೇಕರು ನಂಬುವ ಸ್ಥಿತಿಯಲ್ಲಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.