ಹೆಬ್ರಿ: ‘ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪನೆಯ ಬೇಡಿಕೆಯನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈಡೇರಿಸಿರುವುದು ಸಂತಸದಾಯಕ. ಸಮುದಾಯ ಅಭಿವೃದ್ಧಿಗೆ ಶ್ರಮಿಸುವ ಪ್ರಬುದ್ಧ ನಾಯಕ ಮುದ್ರಾಡಿ ಮಂಜುನಾಥ ಪೂಜಾರಿ ಅವರಿಗೆ ನಿಗಮದ ಪ್ರಥಮ ಅಧ್ಯಕ್ಷ ಸ್ಥಾನ ನೀಡಿರುವುದು ಅಭಿನಂದನಾರ್ಹ’ ಎಂದು ಶ್ರೀನಾರಾಯಣ ಗುರು ವಿಚಾರ ವೇದಿಕೆ (ಎಸ್‌ಎನ್‌ಜಿವಿ) ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಶ್ರೀನಾರಾಯಣ ಗುರು ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಪೂಜಾರಿ ಮುದ್ರಾಡಿ ಅವರನ್ನು ಶುಕ್ರವಾರ ಶ್ರೀನಾರಾಯಣ ಗುರು ವಿಚಾರ ವೇದಿಕೆ (ರಿ.) ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಇಂದಿಗೂ ಅಭಿವೃದ್ಧಿ ನಿಗಮದ ಸಂಪೂರ್ಣ ರಚನೆಯಾಗಿಲ್ಲ. ಕೇವಲ ಆದೇಶ ಆಗಿದ್ದು, ಇದೀಗ ಅಧ್ಯಕ್ಷರ ನಿಯುಕ್ತಿಯಾಗಿದೆ. ಇನ್ನು ಕಂಪನಿ ಕಾಯ್ದೆಯಡಿ ರಿಜಿಸ್ಟ್ರೇಷನ್ ಆಗಿ ನಂತರ, ಸರ್ಕಾರದಿಂದ ಅನುದಾನ ಬಂದಾಗಲೇ ಅಭಿವೃದ್ಧಿ ನಿಗಮದ ರಚನೆ ಅರ್ಥಪೂರ್ಣವಾಗುತ್ತದೆ ಎಂದ ಅವರು, ಸಮುದಾಯದ ಶ್ರೀಗಳು, ಬ್ರಹ್ಮಾವರ ಮತ್ತು ಶಿವಮೊಗ್ಗದ ಸಮಾವೇಶ ಸೇರಿದಂತೆ ನಿಗಮಕ್ಕಾಗಿ ನಡೆದ ವಿವಿಧ ಹೋರಾಟಗಳ ಬೇಡಿಕೆಯಂತೆ ವರ್ಷಕ್ಕೆ ಕನಿಷ್ಠ ₹500 ಕೋಟಿ ಅನುದಾನವನ್ನು ನಿಗಮಕ್ಕೆ ಒದಗಿಸಬೇಕು. ಹಾಗಾದಲ್ಲಿ ಮಾತ್ರ ಬಿಲ್ಲವ, ಈಡಿಗ, ದಿವಾರು, ನಾಮಧಾರಿ, ದೇವರ ಮಕ್ಕಳು ಸೇರಿದಂತೆ 26 ಪಂಗಡ ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿಯಾಗಲು ಸಾಧ್ಯ ಎಂದರು.
ಸಮೀಕ್ಷೆಯಿಂದ ಹೊರಗುಳಿಯದೆ, ಗೊಂದಲಕ್ಕೆ ಅವಕಾಶ ನೀಡದೆ 26 ಪಂಗಡಗಳೂ ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡು ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಹಂಚಿಕೊಂಡು ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸುವಲ್ಲಿ ಸಹಕರಿಸಬೇಕು ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ ಪೂಜಾರಿ ಮುದ್ರಾಡಿ, ‘ಅನೇಕ ಹೋರಾಟಗಳ ಫಲವಾಗಿ ಇಂದು ನಿಗಮ ರಚನೆಗೊಂಡಿದೆ. ನಿಗಮದ ಬಗ್ಗೆ ನಮ್ಮ ಸಮಾಜದ 26 ಪಂಗಡದವರು ಅನೇಕ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ’ ಎಂದರು.
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಮಾತನಾಡಿ, ‘ಬಿಲ್ಲವ ಸೇರಿದಂತೆ 26 ಪಂಗಡಗಳ ಕನಸು ಇಂದು ಜೀವ ಪಡೆದುಕೊಂಡಿದೆ. ಸಮುದಾಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸದೃಢವಾಗಬೇಕು. ಇದಕ್ಕೆ ಸರ್ಕಾರದ ಶಕ್ತಿ ಅವಶ್ಯ. ಈ ನಿಟ್ಟಿನಲ್ಲಿ ಮಂಜುನಾಥ ಮುದ್ರಾಡಿ ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ಒದಗಿ ಬಂದಿರುವುದು ಶ್ಲಾಘನೀಯ’ ಎಂದರು.
ಶ್ರೀನಾರಾಯಣ ಗುರು ವಿಚಾರ ವೇದಿಕೆಯ ಉಪಾಧ್ಯಕ್ಷ ಅಚ್ಯುತ್ ಕಲ್ಮಾಡಿ, ಉಡುಪಿ ಜಿಲ್ಲಾ ಗೌರವಾಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಜಿಲ್ಲಾಧ್ಯಕ್ಷ ಜಗನ್ನಾಥ ಕೋಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸನಿಲ್, ಉಡುಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಧರ ಅಮೀನ್, ಬ್ರಹ್ಮಾವರ ತಾಲ್ಲೂಕು ಘಟಕದ ಅಧ್ಯಕ್ಷ ಕರುಣಾಕರ ಪೂಜಾರಿ ಹಂದಾಡಿ, ಬ್ರಹ್ಮಾವರ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಮಧುಸೂದನ್ ಹೇರೂರು, ಎಸ್‌ಎನ್‌ಜಿವಿ ರಾಜ್ಯ ಮಾಧ್ಯಮ ಸಾಮಾಜಿಕ ಜಾಲತಾಣ ಪ್ರಮುಖರಾದ ಸಂದೀಪ್ ಪಂಪುವೆಲ್, ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಪ್ರಭಾಕರ ಬಂಗೇರ, ಸತೀಶ್ ಎಸ್. ಬಂಗೇರ, ಜಯಕರ ಕೊಡವೂರು, ಅಶೋಕ್ ಸುವರ್ಣ, ಸುಭಾಶ್ ಸುವರ್ಣ, ರಘುನಾಥ್ ಕೆ.ಎಸ್., ಅಕ್ಷಯ್ ಬಂಗೇರ, ರತ್ನಾಕರ್ ಅಮೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.