ADVERTISEMENT

ಕೊಕ್ಕರ್ಣೆ| ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಲಿ: ಅಶ್ವಿನಿ ನಾಯಕ್‌ ಸಲಹೆ

ಕೊಕ್ಕರ್ಣೆ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಅಶ್ವಿನಿ ನಾಯಕ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:47 IST
Last Updated 9 ಫೆಬ್ರುವರಿ 2026, 7:47 IST
ಕೊಕ್ಕರ್ಣೆ ಗಣೇಶ ಕಲಾ ಮಂದಿರದಲ್ಲಿ ಶನಿವಾರ ಹಿಂದೂ ರಾಷ್ಟ್ರ ಜಾಗೃತಿ ಸಭೆ ನಡೆಯಿತು 
ಕೊಕ್ಕರ್ಣೆ ಗಣೇಶ ಕಲಾ ಮಂದಿರದಲ್ಲಿ ಶನಿವಾರ ಹಿಂದೂ ರಾಷ್ಟ್ರ ಜಾಗೃತಿ ಸಭೆ ನಡೆಯಿತು    

ಕೊಕ್ಕರ್ಣೆ: ಎಲ್ಲಿ ಧರ್ಮವಿರುತ್ತದೆಯೋ, ಅಲ್ಲಿ ಜಯವಿರುತ್ತದೆ. ಜನ್ಮದಿಂದ ಹಿಂದೂ ಎಂದು ಕರೆಸಿಕೊಳ್ಳುವುದರಲ್ಲಿ ಸಾರ್ಥಕತೆಯಿಲ್ಲ. ಕರ್ಮ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು ಎಂದು ಸನಾತನ ಸಂಸ್ಥೆಯ ಆಶ್ವಿನಿ ನಾಯಕ್ ಹೇಳಿದರು.

ಕೊಕ್ಕರ್ಣೆ ಗಣೇಶ ಕಲಾ ಮಂದಿರದಲ್ಲಿ ಶನಿವಾರ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಭವ್ಯ ಪರಂಪರೆಯನ್ನೇ ಮರೆಯುತ್ತಿದ್ದೇವೆ. ನಮ್ಮ ಪ್ರತಿಯೊಂದು ಹಬ್ಬ, ಸಂಪ್ರದಾಯ ಮತ್ತು ಉತ್ಸವಗಳ ಹಿಂದೆ ವೈಜ್ಞಾನಿಕವಾದ ಧರ್ಮಶಾಸ್ತ್ರ ಅಡಗಿದೆ. ಈ ಶಾಸ್ತ್ರಗಳನ್ನು ಅರಿತು, ಶ್ರದ್ಧೆಯಿಂದ ಆಚರಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಮತ್ತು ಬೆಳಗಲು ಸಾಧ್ಯ ಎಂದರು.

ಸಂಸ್ಕೃತಿಯನ್ನು ಮರೆತ ಸಮಾಜಕ್ಕೆ ಭವಿಷ್ಯವಿಲ್ಲ; ಆದ್ದರಿಂದ ಸಂಪ್ರದಾಯದ ಹಿಂದಿನ ಸತ್ಯವನ್ನು ತಿಳಿಯೋಣ, ಕರ್ಮನಿಷ್ಠ ಹಿಂದೂಗಳಾಗೋಣ. ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯಿಂದ ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳೂಣ ಎಂದು ಹೇಳಿದರು.

ADVERTISEMENT

ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕ ಪ್ರಣವ್ ಮಲ್ಯ ಮಾತನಾಡಿ ಲವ್ ಜಿಹಾದ್, ಮತಾಂತರ, ದ್ವೇಷ ಭಾಷಣ ಕಾಯ್ದೆ, ಹಿಂದೂಗಳ ಬಂಧನ, ಜನಸಂಖ್ಯಾ ಸ್ಫೋಟ ಮತ್ತು ವಕ್ಫ್ ಕಾಯ್ದೆಯಂತಹ ಗಂಭೀರ ಸವಾಲುಗಳನ್ನು ಎದುರಿಸಲು ಭಾರತವನ್ನು ಸಂವಿಧಾನಬದ್ಧ ‘ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವುದು ಅನಿವಾರ್ಯವಾಗಿದೆ ಎಂದರು.

ಕೊಕ್ಕರ್ಣೆಯ ಖ್ಯಾತ ಲೆಕ್ಕ ಪರಿಶೋಧಕ ರಘುರಾಮ ಮಾತನಾಡುತ್ತಾ, ಎದುರಾಳಿ ಎಷ್ಟೇ ಬಲಿಷ್ಠನಾಗಿದ್ದರೂ ಅವನು ಅಧರ್ಮದ ದಾರಿಯಲ್ಲಿದ್ದರೆ ಧೈರ್ಯದಿಂದ ವಿರೋಧಿಸಬೇಕು ಎಂದರು. ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಬಾಲಕೃಷ್ಣ ನಾಯಕ್ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಚೇತನಾ ಪ್ರಭು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.