ಕೆಎಂಸಿಯಲ್ಲಿ ಎಚ್‌ಎಲ್‌ಎ ಪರೀಕ್ಷಾ ಶಿಬಿರ ಜರುಗಿತು
ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಒನ್ ಗುಡ್ ಸ್ಟೆಪ್ ಫೌಂಡೇಷನ್ ಸಹಯೋಗದೊಂದಿಗೆ, ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಬೆಂಬಲ ನೀಡಲು ಎಚ್‌ಎಲ್‌ಎ (ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್) ಪರೀಕ್ಷಾ ಶಿಬಿರವನ್ನು ಬುಧವಾರ ಆಯೋಜಿಸಿತ್ತು.
ಶಿಬಿರವು ಥಲಸ್ಸೆಮಿಯಾ ರೋಗದ ಏಕೈಕ ಚಿಕಿತ್ಸಕ ಆಯ್ಕೆಯಾದ ಮೂಳೆ ಮಜ್ಜೆಯ ಕಸಿಗೆ ಸಂಭಾವ್ಯ ದಾನಿಗಳನ್ನು ಗುರುತಿಸುವ ಗುರಿಯನ್ನು ಹೊಂದಿತ್ತು.
ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸ್ವಾತಿ ಪಿ.ಎಂ. ಮಾತನಾಡಿ, ಮೂಳೆ ಮಜ್ಜೆಯ ಕಸಿಗೆ ಸಂಭಾವ್ಯ ದಾನಿಗಳನ್ನು ಗುರುತಿಸುವಲ್ಲಿ ಎಚ್ಎಲ್ಎ ಟೈಪಿಂಗ್ ಪರೀಕ್ಷೆ ಮೊದಲ ಹೆಜ್ಜೆಯಾಗಿದೆ ಎಂದರು.
ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ. ಮಾತನಾಡಿ, ಮಕ್ಕಳ ಚಿಕಿತ್ಸೆಗಾಗಿ ಮೂಳೆ ಮಜ್ಜೆಯ ಕಸಿ ಮಾಡಿಸಿಕೊಳ್ಳಲು ಬಯಸುವ 12 ಕುಟುಂಬಗಳಿಂದ 30ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಎಚ್ಎಲ್‌ಎ ಟೈಪಿಂಗ್ ದುಬಾರಿ ಪರೀಕ್ಷೆಯಾಗಿದ್ದು, ಅದರ ವೆಚ್ಚವನ್ನು ಬೆಂಗಳೂರು ಮೂಲದ ಅಮಿತಾ ಪೈ ಸ್ಥಾಪಿಸಿದ ಒನ್ ಗುಡ್ ಸ್ಟೆಪ್ ಫೌಂಡೇಷನ್ ಭರಿಸಿದೆ ಎಂದು ಹೇಳಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಎಮಿನ್ ಎ. ರಹಿಮಾನ್, ಸಹ ಪ್ರಾಧ್ಯಾಪಕಿ ಡಾ. ಅರ್ಚನಾ ಎಂ.ವಿ. ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.