ADVERTISEMENT

ಶ್ರೀಕೃಷ್ಣನಿಗೆ ಹೊರೆ ಕಾಣಿಕೆ ಸಮರ್ಪಣೆ

ಜೋಡುಕಟ್ಟೆಯಿಂದ ರಥಬೀದಿವರೆಗೆ ಸಾಗಿದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 15:13 IST
Last Updated 4 ಜೂನ್ 2019, 15:13 IST
ಸುವರ್ಣ ಗೋಪುರ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಶ್ರೀಕೃಷ್ಣನಿಗೆ ಹಸಿರು ಹೊರೆಕಾಣಿಕೆ ಸಲ್ಲಿಸಲಾಯಿತು.
ಸುವರ್ಣ ಗೋಪುರ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಶ್ರೀಕೃಷ್ಣನಿಗೆ ಹಸಿರು ಹೊರೆಕಾಣಿಕೆ ಸಲ್ಲಿಸಲಾಯಿತು.   

ಉಡುಪಿ: ಅಕ್ಕಿ, ಬೆಲ್ಲ, ಬೇಳೆ, ಬಾಳೆಹಣ್ಣು, ಬೂದಗುಂಬಳ, ತೆಂಗಿನ ಕಾಯಿ, ಹೀಗೆ ರಾಶಿ ರಾಶಿ ಆಹಾರ ಪದಾರ್ಥಗಳನ್ನು ಹೊತ್ತ ವಾಹನಗಳು ಉಡುಪಿಯ ರಥಬೀದಿಯಲ್ಲಿ ಸಾಗುತ್ತಿದ್ದರೆ, ಭಕ್ತರು ಶ್ರೀಕೃಷ್ಣನ ಸ್ಮರಣೆ ಮಾಡಿದರು.

ಸುವರ್ಣ ಗೋಪುರ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಶ್ರೀಕೃಷ್ಣನಿಗೆ ಹಸಿರು ಹೊರೆಕಾಣಿಕೆ ಸಲ್ಲಿಸಲಾಯಿತು. ಜೋಡುಕಟ್ಟೆಯಿಂದ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಸಂಘಸಂಸ್ಥೆಗಳು ಭಾಗವಹಿಸಿ ಶ್ರೀಕಷ್ಣನಿಗೆ ಹೊರೆ ಕಾಣಿಕೆ ಸಲ್ಲಿಸಿದರು.

ಜೋಡಿ ಗೋವುಗಳ ಸಾರಥ್ಯದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಆನೆ, ತಟ್ಟಿರಾಯನ ನೃತ್ಯ, ಮಹಿಳೆಯರ ಚಂಡೆವಾದನ, ಭಜನಾ ತಂಡಗಳ ಭಜನೆ, ಸಿಡಿಮದ್ದು ಪ್ರದರ್ಶನ, ವಾದಿರಾಜರ ಹಾಗೂ ಕಡೆಗೋಲು ಕೃಷ್ಣನ ಸ್ತಬ್ಧಚಿತ್ರ ಕಣ್ಮನ ಸೆಳೆದವು.

ADVERTISEMENT

ನಾಸಿಕ್‌ ತಂಡದ ಪ್ರದರ್ಶನ ಮೆರವಣಿಗೆಯ ಕಳೆಗಟ್ಟಿಸಿತು. ಹೊರಕಾಣಿಕೆಯನ್ನು ಹೊತ್ತ ವಾಹನಗಳು ಒಂದಾದ ಮೇಲೋಂದರಂತೆ ಸಾಗುತ್ತಾ ಕಣ್ಣಿಗೆ ಹಬ್ಬವನ್ನುಂಟು ಮಾಡಿದವು. ಚಕ್ಕಡಿ ಪ್ರದರ್ಶನ ದೇಸಿ ಸಂಸ್ಕೃತಿಯನ್ನು ಬಿಂಬಿಸುತ್ತಿತ್ತು. ಕರಾವಳಿಯ ಪ್ರಸಿದ್ಧ ಮಟ್ಟುಗುಳ್ಳ (ಬದನೆ) ತುಂಬಿದ್ದ ಪಲ್ಲಕ್ಕಿ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

ಜೋಡುಕಟ್ಟೆಯಿಂದ ರಥಬೀದಿ ತಲುಪಿದೆ ಹೊರೆ ಕಾಣಿಕೆ ಮೆರವಣಿಗೆ ಸಮಾಪನಗೊಂಡಿತು. ದೈವಜ್ಞ ಬ್ರಾಹ್ಮಣ ಸಂಘ, ವಿಶ್ವ ಬ್ರಾಹ್ಮಣ ಯುವ ಸಂಘಟನೆ, ರಥಬೀದಿ ವ್ಯಾಪಾರಿಗಳ ಸಂಘ, ರಿಕ್ಷಾ ಚಾಲಕರ ಚಂಘ, ವಿಷ್ಣುಮೂರ್ತಿ ದೇವಸ್ಥಾನ ಸಮಿತಿ, ಕಡಿಯಾಳಿ ದೇವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನ, ಕನ್ನಾರ್ಪಾಡಿ ಜಯದುರ್ಗೆ ದೇವಸ್ಥಾನ ಸೇರಿದಂತೆ ಜಿಲ್ಲೆಯ ಹಲವು ದೇವಸ್ಥಾನಗಳಿಂದ ಹೊರೆಕಾಣಿಕೆ ಸಲ್ಲಿಸಲಾಯಿತು.

ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಉಚಿತ ಕುಡಿಯುವ ನೀರು ಸರಬರಾಜು ಮಾಡಲಾಯಿತು. ಹಲವು ಉದ್ಯಮಿಗಳು, ಭಕ್ತರು ಪ್ರತ್ಯೇಕವಾಗಿ ಹೊರೆ ಕಾಣಿಕೆ ಸಲ್ಲಿಸಿದರು.

ನಂತರ ಕನಕ ಮಂಟಪದಲ್ಲಿ ಪರ್ಯಾಯ ವಿದ್ಯಾಧೀಶತೀರ್ಥರು ಅನುಗ್ರಹ ಸಂದೇಶ ನೀಡಿದರು. ಪಲಿಮಾರು ಕಿರಿಯ ಮಠಾಧೀಶ ವಿದ್ಯಾರಾಜೇಶ್ವರತೀರ್ಥರು, ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಕ್ಷೇತ್ರದ ಯೋಗಾನಂದ ಸರಸ್ವತಿ ಸ್ವಾಮೀಜಿ, ಶಾಸಕ ರಘುಪತಿ ಭಟ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.