ADVERTISEMENT

ರಜೆಯ ಮೋಜು| ಬೀಚ್‌ಗಳಿಗೆ ಪ್ರವಾಸಿಗರ ದಾಂಗುಡಿ: ಬೋಟಿಂಗ್‌, ಜಲ ಕ್ರೀಡೆಗಳು ಚುರುಕು

ನವೀನ್‌ಕುಮಾರ್‌ ಜಿ.
Published 28 ಏಪ್ರಿಲ್ 2025, 7:19 IST
Last Updated 28 ಏಪ್ರಿಲ್ 2025, 7:19 IST
ಮಲ್ಪೆ ಬೀಚ್‌ನಿಂದ ಸೇಂಟ್‌ ಮೇರಿಸ್‌ ದ್ವೀಪಕ್ಕೆ ತೆರಳಲು ಬೋಟ್‌ ಹತ್ತಿದ ಪ್ರವಾಸಿಗರು
– ಪ್ರಜಾವಾಣಿ ಚಿತ್ರಗಳು
ಮಲ್ಪೆ ಬೀಚ್‌ನಿಂದ ಸೇಂಟ್‌ ಮೇರಿಸ್‌ ದ್ವೀಪಕ್ಕೆ ತೆರಳಲು ಬೋಟ್‌ ಹತ್ತಿದ ಪ್ರವಾಸಿಗರು – ಪ್ರಜಾವಾಣಿ ಚಿತ್ರಗಳು   

ಉಡುಪಿ: ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿರುವುದರಿಂದ ಜಿಲ್ಲೆಯ ಕಡಲ ತೀರಗಳಿಗೆ ಪ್ರವಾಸಿಗರ ದಂಡು ದಾಂಗುಡಿ ಇಡುತ್ತಿದೆ.

ಜಿಲ್ಲೆಯ ಪ್ರಮುಖ ಬೀಚ್‌ಗಳಾದ ಮಲ್ಪೆ, ಕಾಪು ಬ್ಲ್ಯೂಫ್ಯಾಗ್‌ ಬೀಚ್‌, ಮರವಂತೆ, ತ್ರಾಸಿ, ಸೋಮೇಶ್ವರವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕರಾವಳಿಯಲ್ಲಿ ಬಿರು ಬಿಸಿಲಿನ ವಾತಾವರಣವಿದ್ದರೂ ಪ್ರವಾಸಿಗರು ನಿರುತ್ಸಾಹಗೊಳ್ಳದೆ ಹಗಲಿಡೀ ಕಡಲ ತೀರಕ್ಕೆ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಅಧಿಕವಿರುತ್ತದೆ.

ಪ್ರತಿ ವರ್ಷವೂ ಏಪ್ರಿಲ್‌, ಮೇ ತಿಂಗಳಲ್ಲಿ ಜಿಲ್ಲೆಯ ಹಾಗೂ ರಾಜ್ಯದ ವಿವಿಧೆಡೆಯ ಪ್ರವಾಸಿಗರು ಬೀಚ್‌ಗಳಿಗೆ ಭೇಟಿ ನೀಡುತ್ತಾರೆ. ಈ ಬಾರಿಯೂ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಬೀಚ್‌ಗಳಲ್ಲಿರುವ ಸ್ಕೈಡೈನಿಂಗ್‌, ಪ್ಯಾರಾ ಸೈಲಿಂಗ್‌ ಹಾಗೂ ಜಲಕ್ರೀಡೆಗಳು ಬರುವಂತಹ ಪ್ರವಾಸಿಗರಿಗೆ ಮುದ ನೀಡುತ್ತವೆ. ಹಿನ್ನೀರು ಪ್ರದೇಶಗಳಿಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ತೆಪ್ಪ ಸವಾರಿ, ಬೋಟಿಂಗ್‌ಗಳ ಮೋಜು ಸವಿಯುತ್ತಿದ್ದಾರೆ.

ಮಳೆಗಾಲ ಸಮೀಪಿಸುತ್ತಿದ್ದು, ಮುಂಗಾರು ಆರಂಭವಾಗಿ ಕಡಲಬ್ಬರ ಹೆಚ್ಚುತ್ತಿರುವಂತೆ ಬೀಚ್‌ಗಳಿಗೆ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗುತ್ತದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸಮುದ್ರದ ತೀರಕ್ಕೆ ಬೇಲಿ ಕೂಡ ಹಾಕಲಾಗುತ್ತದೆ. ಅನಂತರ ಕೆಲ ತಿಂಗಳು ಬೀಚ್‌ಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಬ್ದವಾಗುತ್ತವೆ. ಆದ್ದರಿಂದಲೇ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕಡಲ ತೀರಕ್ಕೆ ಹೆಚ್ಚಿನ ಜನರು ಭೇಟಿ ನೀಡುತ್ತಾರೆ.

ಪಿಯುಸಿ, ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ ಇತ್ತು. ಪರೀಕ್ಷೆಗಳು ಮುಗಿದ ಬಳಿಕ ಪ್ರವಾಸಿಗರ ಸಂಖ್ಯೆಯೂ ಜಾಸ್ತಿಯಾಗಿದೆ. ಶಾಲಾ ಮಕ್ಕಳಿಗೆ ಎರಡು ತಿಂಗಳು ರಜೆ ಇರುವುದರಿಂದ ಹೆಚ್ಚಿನ ಪೋಷಕರು ಮಕ್ಕಳೊಂದಿಗೆ ಪ್ರವಾಸ ತೆರಳುತ್ತಾರೆ. ಹೀಗೆ ತೆರಳುವವರು ಬೀಚ್‌ಗಳಿಗೂ ಭೇಟಿ ನೀಡುತ್ತಾರೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು.

ಬೇಸಿಗೆ ಕಾಲದಲ್ಲಿ ಸಮುದ್ರದಲ್ಲಿ ತೆರೆಗಳ ಅಬ್ಬರ ಇರುವುದಿಲ್ಲ. ಆದರೂ ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮಕೈಗೊಂಡಿದ್ದೇವೆ. ಜೀವ ರಕ್ಷಕ ಸಿಬ್ಬಂದಿ ಕಡಲಿಗಿಳಿಯುವ ಪ್ರವಾಸಿಗರ ಮೇಲೆ ನಿಗಾ ಇರಿಸುತ್ತಾರೆ. ಹೆಚ್ಚು ಆಳಕ್ಕೆ ತೆರಳದಂತೆ ಎಚ್ಚರಿಕೆಯನ್ನೂ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಪ್ರಸಿದ್ಧ ದ್ವೀಪವಾದ ಸೇಂಟ್‌ ಮೇರಿಸ್‌ ದ್ವೀಪಕ್ಕೂ ಪ್ರವಾಸಿಗರು ತೆರಳುತ್ತಿದ್ದಾರೆ. ಮಲ್ಪೆ ಬೀಚ್‌ನಿಂದ ಬೋಟ್‌ ಮೂಲಕ ಸೇಂಟ್‌ ಮೇರಿಸ್‌ಗೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ದ್ವೀಪದಲ್ಲಿ ಒಂದು ಗಂಟೆಯಷ್ಟೆ ಪ್ರವಾಸಿಗರಿಗೆ ಇರಲು ಸಮಯಾವಕಾಶ ನೀಡಲಾಗುತ್ತಿದೆ.

ಮಲ್ಪೆ ಬೀಚ್‌ನಲ್ಲಿ ಭಾನುವಾರ ಜಲ ಕ್ರೀಡೆಯಲ್ಲಿ ತೊಡಗಿದ್ದ ಪ್ರವಾಸಿಗರು

ಸಾಕಷ್ಟು ಬೋಟ್‌ಗಳು ಮಲ್ಪೆ ಬೀಚ್‌ನಿಂದ ಮತ್ತು ಸೀವಾಕ್‌ ಪ್ರದೇಶದಿಂದ ಪ್ರವಾಸಿಗರನ್ನು ಸೇಂಟ್‌ ಮೇರಿಸ್‌ಗೆ ಕರೆದೊಯ್ಯುತ್ತವೆ.

ಜಿಲ್ಲೆಯ ದೇವಾಲಯಗಳು ಹಾಗೂ ಇತರ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡುವವರು ಊರಿಗೆ ಮರಳುವುದಕ್ಕೂ ಮೊದಲು ಮಲ್ಪೆ, ಮರವಂತೆ ಮೊದಲಾದ ಬೀಚ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಮಲ್ಪೆ ಬೀಚ್‌ಗೆ ಭೇಟಿ ನೀಡುತ್ತಿದ್ದಾರೆ.

ಪೂರಕ ಮಾಹಿತಿ: ಹಮೀದ್‌ ಪಡುಬಿದ್ರಿ

ಮಲ್ಪೆ ಬೀಚ್‌ಗೆ ಭಾನುವಾರ ಭೇಟಿ ನೀಡಿದ್ದ ಪ್ರವಾಸಿಗರು
ಮಲ್ಪೆ ಬೀಚ್‌ನಲ್ಲಿ ಬೋಟಿಂಗ್‌ ನಿರತ ಪ್ರವಾಸಿಗರು
ಮಕ್ಕಳಿಗೆ ಶಾಲೆ ಶುರುವಾದರೆ ಪ್ರವಾಸಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಈಗ ಅವರಿಗೆ ರಜೆ ಇರುವುದರಿಂದ ಕೃಷ್ಣಮಠ ಕೊಲ್ಲೂರು ದೇವಾಲಯಗಳಿಗೆ ಪ್ರವಾಸ ಬಂದಿದ್ದೇವೆ. ಊರಿಗೆ ಮರಳುವುದಕ್ಕೂ ಮುನ್ನ ಮಲ್ಪೆ ಬೀಚ್‌ಗೆ ಭೇಟಿ ನೀಡಿದ್ದೇವೆ
ಮಂಜುಳಾ ರಾಯಚೂರು
ಕುಟುಂಬ ಸಮೇತ ಕರಾವಳಿ ಭಾಗಕ್ಕೆ ಪ್ರವಾಸ ಬಂದಿದ್ದೇವೆ. ಬೀಚ್‌ ಮಕ್ಕಳಿಗೆ ಸಾಕಷ್ಟು ಮುದ ನೀಡುವುದರಿಂದ ಮಲ್ಪೆ ಬೀಚ್‌ಗೆ ಬಂದಿದ್ದೇವೆ
ರಮೇಶ್‌ ಪ್ರವಾಸಿಗ ಬಳ್ಳಾರಿ

‘ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ’

ಜಿಲ್ಲೆಯ ಬೀಚ್‌ಗಳು ಸೇರಿದಂತೆ ಪ್ರವಾಸಿ ತಾಣಗಳ ಬಗ್ಗೆ ಇನ್‌ಸ್ಟಾಗ್ರಾಂ ಎಕ್ಸ್‌ ವೇದಿಕೆಗಳಲ್ಲಿ ಹಾಗೂ ಇಲಾಖೆಯ ಹೊಸ ವೆಬ್‌ಸೈಟ್‌ ಮೂಲಕವೂ ಪ್ರಚಾರ ನಡೆಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಸಿ.ಯು. ತಿಳಿಸಿದರು. ಶಾಲೆಗಳಿಗೆ ರಜೆ ಸಿಕ್ಕಿದ ಬಳಿಕ ಎಲ್ಲಾ ಬೀಚ್‌ಗಳಿಗೂ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮಲ್ಪೆ ಬೀಚ್‌ನಲ್ಲಿ ವಾಟರ್‌ ಸ್ಪೋರ್ಟ್ಸ್‌ ಚಟುವಟಿಕೆಗಳು ಸಕ್ರಿಯವಾಗಿವೆ. ಹಿನ್ನೀರು ಪ್ರದೇಶಗಳಲ್ಲಿ ಕಯಾಕಿಂಗ್‌ನಲ್ಲೂ ಪ್ರವಾಸಿಗರು ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು. ಮಳೆಗಾಲ ಆರಂಭವಾದ ಬಳಿಕ ಹವಾಮಾನ ಇಲಾಖೆಯ ವರದಿ ಆಧರಿಸಿ ಬೀಚ್‌ಗಳಿಗೆ ಪ್ರವಾಸಿಗರನ್ನು ನಿರ್ಬಂಧಿಸಲಾಗುತ್ತದೆ ಎಂದರು.

ಕಾಪು ಬೀಚ್‌ನಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಕಾಪು: ರಜಾ ದಿನ ಕಳೆಯಲು ಇದೀಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿಗೆ ಬರುತ್ತಿದ್ದಾರೆ. ಇಲ್ಲಿನ ಸಮುದ್ರ ತೀರದ ವಿಹಾರಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಬರುತ್ತಿದ್ದಾರೆ. ಕಾಪು ಬೀಚ್ ಲೈಟ್‌ಹೌಸ್ ಪಡುಬಿದ್ರಿಯಲ್ಲಿರುವ ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಬ್ಲೂಫ್ಲ್ಯಾಗ್ ಬೀಚ್‌ಗೆ ಈಗ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಒಂದೆಡೆ ಸಮುದ್ರ ತೀರವಿದ್ದರೆ ಪಕ್ಕದಲ್ಲಿಯೇ ನದಿ ಉದ್ಯಾನ ಇರುವುದರಿಂದ ಹಲವಾರು ಪ್ರವಾಸಿಗರು ಬರುತ್ತಾರೆ. ಬ್ಲೂಫ್ಲ್ಯಾಗ್ ಬೀಚ್‌ನ ಪಕ್ಕದಲ್ಲಿರುವ ಕಾಮಿನಿ ನದಿಯಲ್ಲಿ ದೋಣಿ ವಿಹಾರ ತೆಪ್ಪದಲ್ಲಿ ಸವಾರಿ ಸೇರಿ ಜಲಸಾಹಸ ಕ್ರೀಡೆಗಳಲ್ಲಿ ಪ್ರವಾಸಿಗರು ಭಾಗವಹಿಸುತ್ತಿದ್ದಾರೆ. ಕಾಪು ಬೀಚ್‌ನಲ್ಲಿ 125 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ದೊಡ್ಡ ಗಾತ್ರದ ಕರಿ ಬಂಡೆಗಳ ಮೇಲಿನ ಕಪ್ಪು ಬಿಳುಪು ಬಣ್ಣದ ದೀಪಸ್ಥಂಭವನ್ನು ನೋಡಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಮುಖ್ಯವಾಗಿ ಬಂಡೆಗಳನ್ನು ನೋಡುವುದು. ಅದರ ಮೇಲೆ ಇರುವ ದೀಪಸ್ಥಂಭ ನೋಡುವುದೇ ಆನಂದ. ಟಿಕೆಟ್ ಪಡೆದು ದೀಪಸ್ಥಂಭದ ಮೇಲೇರಿ ಸುತ್ತಲ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.