ADVERTISEMENT

ಇಂದ್ರಾಳಿ ರೈಲು ನಿಲ್ದಾಣ: ಸೌಕರ್ಯ ಮರೀಚಿಕೆ

ಪ್ರಯಾಣಿಕರ ಅನುಕೂಲಕ್ಕೆ ಬೇಕಿದೆ ಸುಸಜ್ಜಿತ ನಿಲ್ದಾಣ: ಅಗತ್ಯವಿದೆ ಸಂಪರ್ಕ ರಸ್ತೆ, ಬಸ್‌ ಸಂಚಾರ

​ಪ್ರಜಾವಾಣಿ ವಾರ್ತೆ
Published 12 ಮೇ 2025, 7:27 IST
Last Updated 12 ಮೇ 2025, 7:27 IST
<div class="paragraphs"><p>ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿರುವ ಚಾವಣಿ ಇಲ್ಲದ ಮೇಲ್ಸೇತುವೆ –ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ</p></div>

ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿರುವ ಚಾವಣಿ ಇಲ್ಲದ ಮೇಲ್ಸೇತುವೆ –ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ

   

ಉಡುಪಿ: ತುಂಬಿ ತುಳುಕುವ ಕಸದ ತೊಟ್ಟಿ, ಮಳೆ ಬಂದರೆ ಕೆರೆಯಂತಾಗುವ ವಾಹನ ಪಾರ್ಕಿಂಗ್‌ ಪ್ರದೇಶ, ಬಿಸಿಲು, ಮಳೆಗೆ ಮೈಯೊಡ್ಡಿಕೊಂಡೇ ಓವರ್‌ ಬ್ರಿಡ್ಜ್‌ನಲ್ಲಿ ಸಾಗುವ ಕಷ್ಟ...

ಇದು ನಗರದ ಇಂದ್ರಾಳಿ ರೈಲು ನಿಲ್ದಾಣದ ಅವ್ಯವಸ್ಥೆ. ಕೊಂಕಣ ರೈಲ್ವೆ ಅಧೀನದಲ್ಲಿರುವ ಈ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ.

ADVERTISEMENT

ಇಂದ್ರಾಳಿ ರೈಲು ನಿಲ್ದಾಣ ಮಾತ್ರವಲ್ಲ ಜಿಲ್ಲೆಯ ಬಹುತೇಕ ರೈಲು ನಿಲ್ದಾಣಗಳು ಮೂಲ ಸೌಕರ್ಯ ಇಲ್ಲದೆ ನಲುಗುತ್ತಿವೆ. ಇದರಿಂದ ರೈಲು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಿದೆ.

ಜಿಲ್ಲೆಯ ಕೆಲವು ರೈಲು ನಿಲ್ದಾಣಗಳಲ್ಲಿ ಎರಡು ಪ್ಲಾಟ್‌ಫಾರಂಗಳೇ ಇಲ್ಲ. ಕೊಂಕಣ ರೈಲನ್ನು ಭಾರತೀಯ ರೈಲಿನೊಂದಿಗೆ ವಿಲೀನ ಮಾಡಬೇಕೆಂಬ ಕೂಗು ಗಟ್ಟಿಯಾಗುತ್ತಿದ್ದು, ಅದು ಸಾಕಾರವಾದರೆ ರೈಲು ನಿಲ್ದಾಣಗಳು ಅಭಿವೃದ್ಧಿ ಹೊಂದಬಹುದೆಂಬ ಆಶಾಭಾವನೆಯಲ್ಲಿದ್ದಾರೆ ಪ್ರಯಾಣಿಕರು.

ಪ್ರತಿದಿನ ನೂರಾರು ಪ್ರಯಾಣಿಕರು ಓಡಾಡುವ ಇಂದ್ರಾಳಿ ರೈಲು ನಿಲ್ದಾಣದ ಆಸುಪಾಸು ಕಾಡು ಬೆಳೆದಿದೆ. ರಾತ್ರಿ ವೇಳೆ ಒಬ್ಬರೇ ಓಡಾಡಲು ಭಯಪಡುವಂತಹ ಪರಿಸ್ಥಿತಿ ಇದೆ.

ಇನ್ನು ರೈಲಿನಲ್ಲಿ ಬಂದು ಇಳಿಯುವ ಪ್ರಯಾಣಿಕರು ನಗರಕ್ಕೆ ಬರಬೇಕಾದರೆ ರಿಕ್ಷಾಗಳನ್ನೇ ಅವಲಂಬಿಸಬೇಕಾಗಿದೆ. ರಾತ್ರಿ ವೇಳೆ ಆಟೊ ಚಾಲಕರು ದುಬಾರಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಆದರೂ ರೈಲು ನಿಲ್ದಾಣಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟವರು ಮುತುವರ್ಜಿ ತೋರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಪ್ರಯಾಣಿಕರು.

‘ವಿಲೀನವಾದರೆ ಹೆಚ್ಚು ಅಭಿವೃದ್ಧಿ’

ಕೊಂಕಣ ರೈಲು ನಾಲ್ಕು ರಾಜ್ಯಗಳಲ್ಲಿ ಹಾದು ಹೋಗು ತ್ತಿದ್ದು, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆ ವಿಲೀನ ಮಾಡಲು ಕೇರಳ ಮತ್ತು ಗೋವಾ ಸರ್ಕಾರ ಈಗಾಗಲೇ ಅನುಮೋದನೆ ನೀಡಿವೆ. ಮಹಾರಾಷ್ಟ್ರದವರು ತಮ್ಮ ‘ಕೊಂಕಣ’ ಹೆಸರನ್ನು ಉಳಿಸಿ ಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಅದಕ್ಕೆ ನಮ್ಮೆಲ್ಲರ ಸಹಮತವಿದೆ. ನಾನು ಮತ್ತು ಜಿಲ್ಲೆಯ ಐವರು ಶಾಸಕರು ಮುಖ್ಯಮಂತ್ರಿ, ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ಅನುಮೋದನೆ ನೀಡುವಂತೆ ಕೋರಿದ್ದೇವೆ. ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಳ್ಳುತ್ತೇನೆ ಎಂದು ಎಂ.ಬಿ. ಪಾಟೀಲರು ಭರವಸೆ ನೀಡಿದ್ದಾರೆ. ಕೊಂಕಣ ರೈಲ್ವೆ ಮಂಡಳಿಯಿಂದಲೂ ಸಮ್ಮತಿ ಸಿಗಬೇಕಿದೆ. ಕೊಂಕಣ ರೈಲ್ವೆಯ ಭಾರತೀಯ ರೈಲ್ವೆಯ ಜೊತೆ ವಿಲೀನವಾದರೆ ಹೆಚ್ಚು ಅನುದಾನ ಲಭಿಸಿ, ರೈಲು ನಿಲ್ದಾಣಗಳು ಅಭಿವೃದ್ಧಿಗೊಳ್ಳಲಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

‘ಇನ್ನಂಜೆಯಲ್ಲಿ ಮತ್ಸ್ಯಗಂಧ ರೈಲು ನಿಲ್ಲಲಿ’

ಶಿರ್ವ: ಇನ್ನಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇನ್ನಂಜೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಪೂರಕ ಸವಲತ್ತುಗಳನ್ನು ಕಲ್ಪಿಸಲಾಗಿದ್ದರೂ ಇಲ್ಲಿ ಅಗತ್ಯ ಪ್ಯಾಸೆಂಜರ್ ರೈಲುಗಳ ನಿಲುಗಡೆಯಾಗದೆ ಸಮಸ್ಯೆಯಾಗಿದೆ. ಹತ್ತಿರದಲ್ಲೇ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣ ಇದೆ ಎನ್ನುವ ಕಾರಣಕ್ಕಾಗಿ ಈ ಟ್ರ್ಯಾಕ್‌ನಲ್ಲಿ ದಿನನಿತ್ಯ ಓಡಾಡುತ್ತಿರುವ ಮುಂಬೈ ರೈಲುಗಳು ನಿಲ್ಲದೆ ಸಾರ್ವಜನಿಕರು ನಿರಾಸೆಗೊಂಡಿದ್ದಾರೆ. ಬಹಳ ವರ್ಷಗಳಿಂದ ಗೋವಾ ಮಡ್‌ಗಾವ್ ಹೋಗುವ ಒಂದೆರಡು ರೈಲುಗಳು ಇಲ್ಲಿ ನಿಲ್ಲುತ್ತವೆ. ಬಿಟ್ಟರೆ ಯಾವುದೇ ಅಗತ್ಯವಾದ ರೈಲುಗಳು ನಿಲುಗಡೆಯಾಗುವುದಿಲ್ಲ ಎಂಬುದು ಸ್ಥಳೀಯರ ದೂರು. ಈ ಭಾಗದ ಜನರು ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಸುತ್ತಿ ಬಳಸಿಕೊಂಡು ಹೋಗಬೇಕು. ಇನ್ನಂಜೆಯಲ್ಲಿ ರೈಲು ನಿಂತರೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಅನುಕೂಲವಾಗಲಿದೆ. ಇನ್ನಂಜೆ ರೈಲ್ವೆ ನಿಲ್ದಾಣದಲ್ಲಿ ಮುಂಬೈಗೆ ತೆರಳುವ ಮತ್ಸ್ಯಗಂಧ ರೈಲು ನಿಲುಡೆಗೊಳಿಸುವಂತೆ ಈಗಾಗಲೇ ಶಾಸಕರು, ಸಂಸದರ ಮೂಲಕ ಸರ್ಕಾರಕ್ಕೆ ಒತ್ತಡ ಹೇರಲಾಗಿದೆ. ಮುಂದೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಇನ್ನಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ ತಿಳಿಸಿದ್ದಾರೆ.

‘ಸಂಪರ್ಕ ರಸ್ತೆಯೇ ಇಲ್ಲ’

ಪಡುಬಿದ್ರಿ: ಕಾಪು ತಾಲ್ಲೂಕಿನ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಂದಿಕೂರು ರೈಲು ನಿಲ್ದಾಣಕ್ಕೆ ಸಂಪರ್ಕ ರಸ್ತೆಯೇ ಸಮಸ್ಯೆಯಾಗಿದೆ. ಇಲ್ಲಿರುವ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಸುತ್ತು ಬಳಸಿ ಬರಬೇಕಾಗಿದೆ. ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ರೈಲು ನಿಲುಗಡೆಯಾಗುತಿದ್ದು, ಬೆರಳೆಣಿಕೆಯ ಪ್ರಯಾಣಿಕರು ಮಾತ್ರ ಸಂಚರಿಸುತಿದ್ದಾರೆ. ಇಲ್ಲಿಗೆ ಮುಖ್ಯವಾಗಿ ಸಂಪರ್ಕ ರಸ್ತೆ ಇಲ್ಲದೆ ಇರುವುದರಿಂದ ಪ್ರಯಾಣಿರ ಸಂಖ್ಯೆಯೂ ಕಡಿಮೆಯಾಗಿದೆ.

ಇಲ್ಲಿ ಪಡುಬಿದ್ರಿ– ಕಾರ್ಕಳ ರಾಜ್ಯ ಹೆದ್ದಾರಿಯ ರೈಲ್ವೆ ಸೇತುವೆಯ ಬಳಿಯಿಂದ ನೇರ ರೈಲು ನಿಲ್ದಾಣಕ್ಕೆ ರಸ್ತೆ ಸಂಪರ್ಕ ಕಲ್ಪಿಸಿದಲ್ಲಿ ಪ್ರಯಾಣಿರ ಸಂಖ್ಯೆಯ ಹೆಚ್ಚಳವಾಗಬಹುದು. ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಕೆಗಾಗಿ ಹಳಿಗಾಗಿ ನಂದಿಕೂರು ರೈಲು ನಿಲ್ದಾಣ ನಿರ್ಮಾಣಗೊಂಡಿದೆ. ಎಲ್ಲಾ ಸೌಕರ್ಯಗಳಿದ್ದರೂ ಇಲ್ಲಿ ರಸ್ತೆ ಸಂಪರ್ಕವೇ ಬಹುದೊಡ್ಡ ಸಮಸ್ಯೆ. ಈ ಭಾಗದ ಜನರು ಮೂಲ್ಕಿ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದಾರೆ. ಈ ಭಾಗದಲ್ಲಿ ಈಗಾಗಲೇ ವಿದ್ಯುತ್ ಸ್ಥಾವರ, ವಿಶೇಷ ಕೈಗಾರಿಕಾ ವಲಯ, ಬೃಹತ್ ಉದ್ದಿಮೆಗಳು, ಕೈಗಾರಿಕಾ ಪ್ರದೇಶಗಳು ಕಾರ್ಯಾಚರಿಸುತ್ತಿದ್ದು, ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಡುಬಿದ್ರಿ ರೈಲು ನಿಲ್ದಾಣದಲ್ಲಿ ಕೇವಲ ಒಂದು ರೈಲು ನಿಲುಗಡೆಯಾಗುತಿದ್ದು, ಹೆಚ್ಚುವರಿ ರೈಲು ನಿಲುಗಡೆಗೆ ಬೇಡಿಕೆ ಇದೆ. ಬೆಳಪು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಈಚೆಗೆ ಅಭಿವೃದ್ಧಿ ಪಡಿಸಲಾಗಿದೆ. ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಜೊತೆಗೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯ ಕೂಡ ಬೆಳಪು ಗ್ರಾಮದಲ್ಲಿ ಸ್ಥಾಪಿತವಾಗಿರುವುದು ವಿಶೇಷ ಹಾಗೂ ರೈಲ್ವೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ರೈಲು ನಿಲುಗಡೆಯಾಗಬೇಕು ಎಂಬ ಬೇಡಿಕೆಯೂ ಇಲ್ಲಿದೆ.

‘ಇರುವುದೊಂದೇ ಪ್ಲಾಟ್‌ಫಾರ್ಮ್‌’

ಬ್ರಹ್ಮಾವರ: ಕೋಟ ಹಾಗೂ ಬ್ರಹ್ಮಾವರ ಹೋಬಳಿ ವ್ಯಾಪ್ತಿಯ ನಿವಾಸಿಗಳು ಹಾಗೂ ಹೊರ ಜಿಲ್ಲೆಗಳಿಂದ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಿಗೆ ಬರುವ ರೈಲು ಪ್ರಯಾಣಿಕರು ಬಾರ್ಕೂರಿನ ರೈಲು ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಇದು ಬಹ್ಮಾವರ ತಾಲ್ಲೂಕಿನ ಏಕೈಕ ರೈಲು ನಿಲ್ದಾಣ. ಬಹಳಷ್ಟು ಮಂದಿ ಪ್ರತಿದಿನ ಇಲ್ಲಿಂದ ಪ್ರಯಾಣ ಬೆಳೆಸುತ್ತಾರೆ. ಇಲ್ಲಿ ಪ್ರಮುಖವಾಗಿ ಮಡ್‌ಗಾಂವ್– ಮಂಗಳೂರು ಪ್ಯಾಸೆಂಜ‌ರ್ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳು, ಬೆಂಗಳೂರು– ಕಾರವಾರ ಪಂಚಗಂಗಾ ರೈಲು, ಮುಂಬೈಗೆ ತೆರಳುವ ಮತ್ಸ್ಯಗಂಧ ರೈಲು, ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆಯಾಗುತ್ತವೆ.

ಹೇರಾಡಿ ಗ್ರಾಮದಲ್ಲಿರುವ ಬಾರ್ಕೂರು ರೈಲು ನಿಲ್ದಾಣದಲ್ಲಿ ಬಹು ಮುಖ್ಯವಾಗಿ ಪ್ಲಾಟ್‌ಫಾರ್ಮ್ ಸಮಸ್ಯೆ ಎದ್ದು ಕಾಣುತ್ತಿದೆ. ಇಲ್ಲಿ ಒಂದೇ ಪ್ಲಾಟ್‌ಫಾರ್ಮ್‌ ಇದ್ದು, ರೈಲ್ವೇ ಕ್ರಾಸಿಂಗ್ ಸಂದರ್ಭದಲ್ಲಿ ಒಂದು ಪ್ಲಾಟ್‌ಫಾರ್ಮ್‌‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌‌ಗೆ ಹೋಗಬೇಕಾದರೆ ಎರಡು ಅಡಿಗಿಂತ ಆಳವಾದ ಸ್ಥಳದಲ್ಲಿ ಇಳಿದು ಕಂಬಿಗಳ ಮಧ್ಯದಲ್ಲಿ ನಡೆದೇ ಸಾಗಬೇಕಿದೆ. ಇದು ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರಿಗೆ ತುಂಬಾ ಕಷ್ಟದ ಕೆಲಸವಾಗಿದೆ. ಹೀಗಾಗಿ ಕೆಲವೊಮ್ಮೆ ಕ್ರಾಸಿಂಗ್ ಸಂದರ್ಭದಲ್ಲಿ ದೂರದ ಉಡುಪಿ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ತಮ್ಮ ಊರುಗಳಿಗೆ ತೆರಳಬೇಕಾದ ಸ್ಥಿತಿ ಪ್ರಯಾಣಿಕರದ್ದಾಗಿದೆ.

ಹೆಚ್ಚುವರಿಯಾಗಿ ಎರಡನೇ ಪ್ಲಾಟ್‌ಫಾರ್ಮ್ ತುರ್ತಾಗಿ ನಿರ್ಮಾಣವಾದರೆ ಕ್ರಾಸಿಂಗ್ ಸಮಯದಲ್ಲಿ ವೃದ್ಧರು, ಮಹಿಳೆ– ಮಕ್ಕಳಿಗೆ ಸಹಾಯವಾಗಲಿದೆ. ಕೆಲವೊಂದು ರೈಲುಗಳ ನಿಲುಗಡೆಗಾಗಿ ಮತ್ತು ನಿಲ್ದಾಣದ ಅಭಿವೃದ್ಧಿ ಬಗ್ಗೆ ಸಂಸದರ ಮೂಲಕ ರೈಲ್ವೆ ಸಚಿವರಿಗೆ ಬೇಡಿಕೆಗಳನ್ನು ಸಲ್ಲಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ಪ್ರಯತ್ನಗಳು ಜನಪ್ರತಿನಿಧಿಗಳು, ರೈಲ್ವೇ ಯಾತ್ರಿಕರ ಸಂಘಟನೆ ಮೂಲಕ ಅಗತ್ಯವಿದೆ ಎನ್ನುವುದು ರೈಲ್ವೆ ಹಿತರಕ್ಷಣಾ ಸಮಿತಿಯ ಪ್ರಮುಖರ ಅಭಿಪ್ರಾಯವಾಗಿದೆ.

ಲೂಪ್ ಲೈನ್ ವ್ಯವಸ್ಥೆ ಇಲ್ಲ

ಬೈಂದೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವನ್ನು ಸಂಪರ್ಕಿಸುವ ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಎಲ್ಲಾ ರೈಲುಗಳಿಗೆ ನಿಲುಗಡೆ ಇದೆ. ಆದರೆ ಎಲ್ಲಾ ರೈಲುಗಳು ಮುಖ್ಯ ಟ್ರ್ಯಾಕ್‌ನಲ್ಲಿಯೇ ನಿಲ್ಲುತ್ತಿದ್ದು ಲೂಪ್ ಲೈನ್ ವ್ಯವಸ್ಥೆ ಇಲ್ಲವಾಗಿದೆ. ಮುಖ್ಯ ಟ್ರ್ಯಾಕ್ ನಿಲ್ದಾಣದಿಂದ ಸುಮಾರು 30 ಮೀಟರ್ ದೂರವಿದ್ದು ಮಳೆಗಾಲದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಇಂದ್ರಾಳಿ ರೈಲು ನಿಲ್ದಾಣದ ಪಕ್ಕದಲ್ಲೇ ಇಂದ್ರಾಣಿ ತೋಡು ಹರಿಯುತ್ತಿದ್ದು ಜೋರು ಮಳೆ ಬಂದರೆ ನಿಲ್ದಾಣದ ಪಾರ್ಕಿಂಗ್‌ ಪ್ರದೇಶದಲ್ಲಿ ಮಳೆನೀರು ಸಂಗ್ರಹಗೊಳ್ಳಲಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
ನಿತ್ಯಾನಂದ ಒಳಕಾಡು, ಸಾಮಾಜಿಕ ಕಾರ್ಯಕರ್ತ
ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯೊಂದಿಗೆ ವಿಲೀನವಾದರಷ್ಟೇ ರೈಲು ನಿಲ್ದಾಣಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು.
ಉದಯ್‌ ಖಜಾಂಚಿ, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕುಂದಾಪುರ


ಪೂರಕ ಮಾಹಿತಿ: ಹಮೀದ್‌ ಪಡುಬಿದ್ರಿ, ಶೇಷಗಿರಿ ಭಟ್, ಪ್ರಕಾಶ್‌ ಸುವರ್ಣ ಕಟಪಾಡಿ, ವಿಶ್ವನಾಥ ಆಚಾರ್ಯ

ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಫ್ಲ್ಯಾಟ್‌ಫಾರ್ಮ್‌ ಹಿಂಭಾಗದಲ್ಲಿ ಕಾಡು ಬೆಳೆದಿರುವುದು
ಇಂದ್ರಾಳಿ ರೈಲು ನಿಲ್ದಾಣದಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಕಾರಂಜಿ
ನಂದಿಕೂರು ರೈಲು ನಿಲ್ದಾಣ
ಬಾರ್ಕೂರಿನ ರೈಲು ನಿಲ್ದಾಣ
ಬಾರ್ಕೂರಿನ ರೈಲು ನಿಲ್ದಾಣದಲ್ಲಿ ರೈಲು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.