ADVERTISEMENT

ಉಡುಪಿ: ತ್ಯಾಜ್ಯ ಕೊಂಪೆಯಾಗಿದೆ ಇಂದ್ರಾಣಿ ನದಿ

ಜಲಮೂಲಕ್ಕೆ ಸೇರುತ್ತಿದೆ ಕಸ, ತ್ಯಾಜ್ಯ ನೀರು: ದುರ್ವಾಸನೆಯಿಂದ ಸಮೀಪವಾಸಿಗಳಿಗೆ ಸಂಕಷ್ಟ

ನವೀನ್ ಕುಮಾರ್ ಜಿ.
Published 24 ನವೆಂಬರ್ 2025, 4:09 IST
Last Updated 24 ನವೆಂಬರ್ 2025, 4:09 IST
ಉಡುಪಿಯ ಮಠದಬೆಟ್ಟು ಪರಿಸರದಲ್ಲಿ ಇಂದ್ರಾಣಿ ನದಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವುದು
ಉಡುಪಿಯ ಮಠದಬೆಟ್ಟು ಪರಿಸರದಲ್ಲಿ ಇಂದ್ರಾಣಿ ನದಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವುದು   

ಉಡುಪಿ: ನಗರದ ನಡುವೆ ಹರಿದು ಹೋಗಿ, ಸಮುದ್ರ ಸೇರುವ ಇಂದ್ರಾಣಿ ನದಿಯು ಇಂದು ತ್ಯಾಜ್ಯಗಳ ಆಗರವಾಗಿ ರೋಗಕಾರಕ ನೀರಿನೊಂದಿಗೆ ದುರ್ವಾಸನೆ ಬೀರುತ್ತಿದೆ.

ಮಠದಬೆಟ್ಟು, ಕಲ್ಸಂಕ, ಕುಂಜಿಬೆಟ್ಟು ಮೊದಲಾದೆಡೆ ಈ ನದಿಗೆ ತ್ಯಾಜ್ಯಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ತಂದು ಎಸೆಯಲಾಗುತ್ತಿದೆ. ಇದರಿಂದ ನದಿಯಲ್ಲಿ ಹರಿಯುವ ಅಲ್ಪ ಪ್ರಮಾಣದ ನೀರು ಕೂಡ ಕಲುಷಿತವಾಗಿದೆ.

ಜನರು ರಾತ್ರಿ ವೇಳೆ ವಾಹನಗಳಲ್ಲಿ ಬಂದು ಕಸ ಎಸೆದು ಹೋಗುತ್ತಿದ್ದಾರೆ. ತ್ಯಾಜ್ಯಗಳಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ತಿನ್ನಲು ನಾಯಿಗಳು ಸೇರುತ್ತವೆ ಎನ್ನುತ್ತಾರೆ ಈ ನದಿಯ ಅಸುಪಾಸಿನ ಜನರು.

ADVERTISEMENT

‘ಒಂದು ಕಾಲದಲ್ಲಿ ಇಂದ್ರಾಣಿ ನದಿಯಲ್ಲಿ ಶುದ್ಧ ನೀರು ಹರಿದು ಹೋಗುತ್ತಿತ್ತು. ನದಿಯ ನೀರಿನಲ್ಲಿ ಬಟ್ಟೆ ಒಗೆಯುತ್ತಿದ್ದೆವು. ಮಕ್ಕಳೆಲ್ಲಾ ಸ್ನಾನ ಮಾಡುತ್ತಿದ್ದರು. ಇಂದು ಈ ನದಿ ಎಷ್ಟು ಕಲುಷಿತವಾಗಿದೆ ಎಂದರೆ. ಅದರ ನೀರನ್ನು ಮುಟ್ಟಿದರೆ ರೋಗ ಬರುವುದು ಖಚಿತ’ ಎನ್ನುತ್ತಾರೆ ಮಟದಬೆಟ್ಟು ನಿವಾಸಿಗಳು.

ಉಡುಪಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಕೆಲವು ವಾಣಿಜ್ಯ ಸಂಸ್ಥೆಯವರು, ಅಪಾರ್ಟ್‌ಮೆಂಟ್‌ನವರು ರಾತ್ರಿ ವೇಳೆ ಕೊಳಚೆ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ನೇರ ಬಿಡುತ್ತಿದ್ದಾರೆ. ಇದು ಕೆಲವೆಡೆ ಇಂದ್ರಾಣಿ ನದಿಗೂ ಸೇರುತ್ತಿದೆ ಎಂದೂ ದೂರುತ್ತಾರೆ ಜನರು.

ಮಳೆಗಾಲದಲ್ಲಿ ಜೋರು ಮಳೆ ಬಂದಾಗ ಇಂದ್ರಾಣಿ ನದಿಯಲ್ಲಿ ರಭಸದಿಂದ ನೀರು ಹರಿದು ತ್ಯಾಜ್ಯ ಕೊಚ್ಚಿಹೋಗುತ್ತದೆ. ಅಕ್ಟೋಬರ್‌ ನವೆಂಬರ್‌ ತಿಂಗಳಾಗುವಾಗ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿ ಅಲ್ಲಲ್ಲಿ ಕಟ್ಟಿ ನಿಲ್ಲುತ್ತದೆ. ಜೊತೆಗೆ ತ್ಯಾಜ್ಯಗಳನ್ನು ಸುರಿಯುವುದರಿಂದಲೂ ಚರಂಡಿಯಂತಾಗುತ್ತದೆ ಎನ್ನುತ್ತಾರೆ ನದಿಯ ಸಮೀಪವಾಸಿಗಳು.

ನದಿಯಲ್ಲಿ ಕೊಳಚೆ ತುಂಬಿ ದುರ್ವಾಸನೆ ಸೂಸುತ್ತಿರುವುದರಿಂದ ರೋಗ ಭೀತಿಯೂ ಕಾಡುತ್ತಿದೆ. ಬೇಸಿಗೆ ಕಾಲ ಬಂದಾಗೂ ಈ ನದಿಯ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ನದಿಗೆ ತ್ಯಾಜ್ಯ ನೀರು ಹರಿಸುವವರ ಮತ್ತು ಕಸ ಎಸೆಯುವವರ ವಿರುದ್ಧ ಸಂಭಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.

ಉಡುಪಿಯ ಬೈಲಕೆರೆ ಪ್ರದೇಶದಲ್ಲಿ ಇಂದ್ರಾಣಿ ನದಿಯಲ್ಲಿ ಪ್ಲಾಸ್ಟಿಕ್‌ ಕಸದ ರಾಶಿ ಪ್ರಜಾವಾಣಿ ಚಿತ್ರಗಳು: ಉಮೇಶ್‌ ಮಾರ್ಪಳ್ಳಿ
ಕಲ್ಸಂಕದ ಬಳಿ ಇಂದ್ರಾಣಿ ನದಿಯ ದುರವಸ್ಥೆ
ಇಂದ್ರಾಣಿ ನದಿಯ ಒಡಲಿನಲ್ಲಿ ಕಸದ ರಾಶಿ
ಇಂದ್ರಾಣಿ ನದಿ ನೀರು ಕಲುಷಿತವಾಗಿರುವುದು
ಕಸವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಕೆಲವರು ರಾತ್ರಿ ವೇಳೆ ಬಂದು ಇಂದ್ರಾಣಿ ನದಿಗೆ ಎಸೆಯುತ್ತಾರೆ. ಇದರಿಂದ ನದಿಯ ನೀರು ಮಲಿನಗೊಂಡಿದೆ. ನದಿ ದಡಕ್ಕೆ ಆಹಾರ ಹುಡುಕಿಕೊಂಡು ಬರುವ ಬೀದಿನಾಯಿಗಳ ಸಂಖ್ಯೆಯೂ ಜಾಸ್ತಿಯಾಗಿದೆ
ಸುಂದರ್‌ ಕುಂಜಿಬೆಟ್ಟು
ಇಂದ್ರಾಣಿ ನದಿಗೆ ತ್ಯಾಜ್ಯ ನೀರು ಹರಿಸದಂತೆ ಸಂಬಂಧಪಟ್ಟವರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ನದಿಯ ಪುನಃಶ್ಚೇತನಕ್ಕೂ ಮುಂದಾಗಬೇಕು
ವೇಣುಗೋಪಾಲ್‌ ಮಠದಬೆಟ್ಟು

‘ಕಮ್ಯುನಿಟಿ ಮೊಬಿಲೈಸರ್‌ಗಳ ನೇಮಕ’

ನಗರದಲ್ಲಿ ರಸ್ತೆ ಬದಿಗೆ ಕಸ ತಂದು ಸುರಿಯುವವರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಸಲುವಾಗಿ ಸರ್ಕಾರದ ಆದೇಶದಂತೆ ನಗರ ಸಭೆಯು 25 ಮಂದಿ ಕಮ್ಯುನಿಟಿ ಮೊಬಿಲೈಸರ್‌ಗಳನ್ನು ನೇಮಕ ಮಾಡಿದೆ. ಅವರು ರಸ್ತೆ ಬದಿಗೆ ಕಸ ಸುರಿಯುವವರಿಗೆ ತಿಳಿಹೇಳುತ್ತಾರೆ. ಪದೇ ಪದೇ ಕಸ ಸುರಿಯುವವರಿಗೆ ದಂಡ ವಿಧಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಕಮ್ಯುನಿಟಿ ಮೊಬಿಲೈಸರ್‌ಗಳು ಶಾಲೆ ಕಾಲೇಜುಗಳಿಗೂ ತೆರಳಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಗತಿ ನಗರ ಬೀಡಿನ ಗುಡ್ಡೆಯಲ್ಲಿ ರಸ್ತೆ ಬದಿ ಕಸ ಎಸೆಯುತ್ತಿರುವುದು ಈಗ ನಿಯಂತ್ರಣಕ್ಕೆ ಬಂದಿದೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್‌ ಹಂಗರಗಿ ತಿಳಿಸಿದರು. ನದಿಗೆ ಕಸ ಎಸೆಯುವುದನ್ನು ತಡೆಯಲು ಕೆ–ಶೋರ್‌ ಯೋಜನೆಯ ಅಡಿಯಲ್ಲಿ ಅಲ್ಲಲ್ಲಿ ನೆಟ್‌ ಹಾಕಲು ಚಿಂತನೆ ನಡೆಸಿದ್ದು ಈ ಕುರಿತು ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳುಹಿಸಲಾಗುವುದು. ಜನರು ಹೆಚ್ಚು ಕಸ ಸುರಿಯುವ ಪ್ರದೇಶಗಳಲ್ಲಿ 10 ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಹದಿನೈದು ದಿವಸಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ. ಮಳೆ ನೀರು ಹರಿದು ಹೋಗುವ ತೋಡುಗಳಿಗೆ ತ್ಯಾಜ್ಯ ನೀರನ್ನು ಹರಿಸುವವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ ಎಂದು ಹೇಳಿದರು.

‘ನದಿಯ ಸ್ವಚ್ಛತೆಗೆ ಆದ್ಯತೆ ನೀಡಿ’

ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಉಡುಪಿ ನಗರದ ಬಹುಮುಖ್ಯ ಸಮಸ್ಯೆಯಾಗಿದೆ. ಇಂದ್ರಾಣಿ ನದಿಯ ಅಕ್ಕ ಪಕ್ಕದ ಮನೆಯವರು ತಮ್ಮ ಮನೆಯ ಮುಂದೆ ಹರಿದು ಹೇೂಗುವುದು ತೇೂಡು ಎಂದು ಭಾವಿಸಿ ಈ ನದಿಗೆ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ ಎನ್ನುತ್ತಾರೆ ಇಂದ್ರಾಳಿ ನಿವಾಸಿ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ. ಮಳೆಗಾಲದಲ್ಲಿ ತುಂಬಿ ಹರಿಯುವ ಇಂದ್ರಾಣಿ ನದಿ ಬೇಸಿಗೆಯಲ್ಲಿ ನೀರಿಲ್ಲದೆ ಬತ್ತಿ ಹೇೂಗಿ ಗಬ್ಬು ವಾಸನೆ ಬರುವ ನೀರಿನ ಹೊಂಡವಾಗುತ್ತದೆ. ನೀರು ಸರಿಯಾಗಿ ಹರಿದು ಹೇೂಗಲು ಹೂಳೆತ್ತುವ ಕೆಲಸವು ಆಗಿಲ್ಲ. ಇಂದ್ರಾಳಿಂದ ಹುಟ್ಟಿ ಸ್ವಲ್ಪ ದೂರದ ತನಕ ಇದೊಂದು ಕೃಷಿ ಭೂಮಿಗೆ ನೀರುಣಿಸುವ ಪವಿತ್ರವಾದ ನದಿಯೆಂದು ಕರೆಸಿಕೊಂಡು ಮತ್ತೆ ನಗರದ ಮಧ್ಯದಲ್ಲಿ ಹರಿದು ಹೇೂಗುವ ಪ್ರದೇಶಗಳಲ್ಲಿ ತ್ಯಾಜ್ಯ ನೀರು ವಸ್ತುಗಳನ್ನು ತುಂಬಿಕೊಂಡು ಕಲುಷಿತವಾಗಿದೆ. ನದಿಯ ಇಕ್ಕಡೆಗಳಲ್ಲಿ ಯಾವುದೇ ಕಲ್ಲಿನ ಗೇೂಡೆಯ ಆವರಣವೂ ಇಲ್ಲ. ನದಿಯ ಶುದ್ಧತೆ ಸ್ವಚ್ಛತೆ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಉಡುಪಿ ನಗರಸಭೆ ಉಡುಪಿ ಜಿಲ್ಲಾಡಳಿತ ಜವಾಬ್ದಾರಿಯನ್ನು ತೆಗೆದುಕೊಂಡು ಮುಂದೆ ಬರಬೇಕಾಗಿದೆ. ಇದರ ಸುತ್ತ ಮುತ್ತಲಿನ ಜನರಲ್ಲಿ ನದಿಯ ಪಾವಿತ್ರ್ಯತೆಯ ಅರಿವು ಮೂಡಿಸುವ ಕೆಲಸ ಆಗಬೇಕಾದ ತುತು೯ ಅನಿವಾರ್ಯತೆಯೂ ಇದೆ ಎನ್ನುತ್ತಾರೆ ಅವರು.

ಬಾವಿ ನೀರೂ ಕಲುಷಿತ

ಉಡುಪಿ ನಗರ ವ್ಯಾಪ್ತಿಯಲ್ಲಿ ಈಗಲೂ ನೂರಾರು ಮಂದಿ ಬಾವಿ ನೀರನ್ನು ಆಶ್ರಯಿಸಿದ್ದಾರೆ. ಆದರೆ ನಗರದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೆಲವೆಡೆ ಮಳೆ ನೀರು ಹರಿಯುವ ತೋಡಿನಲ್ಲೇ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಹಾಗೂ ಇಂದ್ರಾಣಿ ನದಿಯ ಆಸುಪಾಸಿನ ಮನೆಗಳ ಬಾವಿಯ ನೀರು ಕಲುಷಿತಗೊಂಡಿವೆ. ಇಂದ್ರಾಣಿ ನದಿಯಲ್ಲಿ ದುರ್ವಾಸನೆಭರಿತ ಕೊಳಚೆ ನೀರು ಹರಿಯುತ್ತಿರುವುದರಿಂದ ನಮ್ಮ ಬಾವಿಗಳ ನೀರಿನ ಬಣ್ಣವೂ ಬದಲಾಗಿದೆ ಎನ್ನುತ್ತಾರೆ ಮಠದಬೆಟ್ಟು ನಿವಾಸಿಗಳು.