ADVERTISEMENT

‘ಶಿಲ್ಪಕಲೆಗೆ ಜಕಣಾಚಾರಿ ಕೊಡುಗೆ ಅದ್ವಿತೀಯ’; ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:47 IST
Last Updated 2 ಜನವರಿ 2026, 6:47 IST
ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು
ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು   

ಉಡುಪಿ: ಅಮರಶಿಲ್ಪಿ ಜಕಣಾಚಾರಿ ಹೊಯ್ಸಳ ಮತ್ತು ಕಲ್ಯಾಣಿ ಚಾಲುಕ್ಯ ಶೈಲಿಯ ಅದ್ಭುತ ದೇವಾಲಯಗಳನ್ನು ನಿರ್ಮಿಸಿದ ಪೌರಾಣಿಕ ಶಿಲ್ಪಿ. ಬೇಲೂರು ಮತ್ತು ಹಳೆಬೀಡಿನ ಕೆತ್ತನೆಗಳಿಗೆ ಹೆಸರುವಾಸಿಯಾದ ಅವರು ಭಾರತೀಯ ಕಲೆಯ ಸುವರ್ಣಯುಗಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಕಣಾಚಾರಿ ನಿರ್ಮಿಸಿದ ದೇವಾಲಯಗಳು ಅತ್ಯಂತ ಸೂಕ್ಷ್ಮ ಮತ್ತು ನಾಜೂಕಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಶತಮಾನದ ಹಿಂದೆಯೇ ಕಲಾತ್ಮಕ ದೇವಾಲಯ ನಿರ್ಮಾಣ ಸಾಧ್ಯ ಎಂಬುದನ್ನು ಹಾಸನದ ಬೇಲೂರಿನ ಚೆನ್ನಕೇಶವ ದೇವಸ್ಥಾನದ ಮೂಲಕ ಜಕಣಾಚಾರಿ ತೋರಿಸಿಕೊಟ್ಟಿದ್ದಾರೆ. ಚೆನ್ನಕೇಶವ ದೇವಸ್ಥಾನದ ಒಂದೊಂದು ಕಲ್ಲುಗಳು ಐತಿಹಾಸಿಕ ದಾಖಲೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಕಲಾತ್ಮಕತೆಯ ಮೆರುಗು, ಕಲ್ಲುಗಳ ಮೇಲಿನ ಕುಸುರಿ ಕೆಲಸ ಗಮನಿಸಿದರೆ ಜಕಣಾಚಾರಿ ಅವರನ್ನು ಸರಿದೂಗಿಸುವಂತಹ ಶಿಲ್ಪಿ ಮತ್ತೊಬ್ಬರಿಲ್ಲ ಎಂಬುದು ಮನದಟ್ಟಾಗುತ್ತದೆ ಎಂದು ಹೇಳಿದರು.

ADVERTISEMENT

ಜಕಣಾಚಾರಿಯವರ ಶಿಲ್ಪಕಲೆಯ ಮಹತ್ವವನ್ನು ಮುಂದಿನ ಜನಾಂಗ ಅರಿತುಕೊಳ್ಳಬೇಕು. ಜಕಣಾಚಾರಿ ಅವರ ಆದರ್ಶವನ್ನು ಇಟ್ಟುಕೊಂಡು ವಿಶ್ವಕರ್ಮ ಸಮಾಜ ತನ್ನ ಕುಸುರಿ ಕೆಲಸದ ಮೂಲಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದರು.

ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಅಮರಶಿಲ್ಪ ಜಕಣಾಚಾರಿ ಅವರು ನಾಡಿನ ಶಿಲ್ಪಕಲೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುವುದರೊಂದಿಗೆ ಶಿಲ್ಪಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಹೊಯ್ಸಳರ ಆಡಳಿತದ ಸಂದರ್ಭದಲ್ಲಿದ್ದ ಜಕಣಾಚಾರಿ ಇವರು ಕೇವಲ ಶಿಲ್ಪಿಯಲ್ಲ, ಬದಲಾಗಿ ಭಾರತೀಯ ವಾಸ್ತುಶಿಲ್ಪದ ಸಂಕೇತವಾಗಿದ್ದಾರೆ ಎಂದರು.

ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಉಪನ್ಯಾಸ ನೀಡಿ, ಭಾರತೀಯ ಸಂಸ್ಕೃತಿಯಲ್ಲಿ ಶಿಲ್ಪಕಲೆಗೆ ತನ್ನದೇ ಆದ ವೈಶಿಷ್ಯವಿದೆ. ಶಿಲ್ಪಿಗಳು ಭಾವನಾತ್ಮಕವಾಗಿ ಕೆಲಸ ನಿರ್ವಹಿಸುವವರು. ನಾಡಿನ ಪರಂಪರೆ ಹಾಗೂ ಸಂಸ್ಕೃತಿ, ವಿಜೃಂಭಿಸುವ ಗುಡಿ-ಗೋಪುರಗಳನ್ನು ನಿರ್ಮಿಸುವುದರೊಂದಿಗೆ ತಮ್ಮ ದೈವಿಕ ಭಾವದಲ್ಲಿ ತನ್ಮಯರಾಗಿದ್ದಾರೆ ಎಂದು ಪ್ರತಿಪಾದಿಸಿದರು.

ಶಿಲ್ಪಿ ಕಾರ್ಕಳದ ಕೆ.ಸತೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್.ಕಾದ್ರೋಳ್ಳಿ, ದ.ಕ ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಕುಂಜಿಬೆಟ್ಟು ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ನಾಗರಾಜ್ ಆಚಾರ್ಯ, ವಿಶ್ವಕರ್ಮ ಸಮುದಾಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಮುರಳೀಧರ್ ಆಚಾರ್ಯ ನಿರೂಪಿಸಿದರು.

ನಶಿಸಿಹೋಗುತ್ತಿರುವ ಕಲೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಶ್ವಕರ್ಮ ಯೋಜನೆ ಜಾರಿಗೊಳಿಸಿ ಈಚೆಗೆ ₹12 ಸಾವಿರ ಕೋಟಿಯನ್ನು ಕುಶಲಕರ್ಮಿಗಳ ಭದ್ರತೆಗೆ ಮೀಸಲಿರಿಸಿದೆ.
ಕೋಟ ಶ್ರೀನಿವಾಸ ಪೂಜಾರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.