ಉಡುಪಿ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಜಲ್‌ಜೀವನ್ ಮಿಷನ್ ಅಡಿ ಮನೆ ಮನೆಗೆ ನಳ ನೀರು ಪೂರೈಸುವ ಯೋಜನೆಯನ್ನು ಕೈಗೊಂಡಿದೆ. ಇದು ಪ್ರತಿಯೊಂದು ಮನೆಗೂ ತಲುಪಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲ ಜೀವನ್ ಮಿಷನ್ ಯೋಜನೆಯಡಿ 525 ಕಾಮಗಾರಿಗಳನ್ನು ₹687.66 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ 487 ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಉಳಿದ 38 ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ ₹ 540.76 ಕೋಟಿ ವ್ಯಯ ಮಾಡಲಾಗಿದೆ ಎಂದರು.
ಕುಡಿಯುವ ನೀರಿನ ಪೂರೈಕೆಗಾಗಿ ನಳ ಸಂಪರ್ಕದ ಪೈಪ್‌ಲೈನ್ ಹಾಕುವ ಕಾಮಗಾರಿ ಕೈಗೊಳ್ಳಲು ರಸ್ತೆ ಅಗೆದಿದ್ದರೆ ಅವುಗಳ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಹೀಗಾಗದಂತೆ ಕ್ರಮ ವಹಿಸಬೇಕು ಎಂದರು.
ಕಲುಷಿತ ನೀರು ಸರಬರಾಜಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಪ್ರತೀ ಗ್ರಾಮ ಪಂಚಾಯಿತಿಗಳಿಗೂ ಫೀಲ್ಡ್ ಟೆಸ್ಟ್ ಕಿಟ್ ವಿತರಿಸಲಾಗಿದ್ದು ನಳ, ಬಾವಿ, ಬೋರ್‌ವೆಲ್ ಹಾಗೂ ಟ್ಯಾಂಕ್‌ಗಳಲ್ಲಿರುವ ನೀರು ಕುಡಿಯಲು ಯೋಗ್ಯ ಇದೆಯೇ ಎಂಬ ಬಗ್ಗೆ ಪ್ರತೀ ತಿಂಗಳು ನೀರು ಪರೀಕ್ಷೆ ಮಾಡಬೇಕು ಎಂದರು.
ನಳ ನೀರು ಸಂಪರ್ಕ ಕಲ್ಪಿಸಿರುವ ಪ್ರತಿಯೊಂದು ಮನೆಗೂ ಮೀಟರ್ ಅನ್ನು ಅಳವಡಿಸಬೇಕು. ಪ್ರತಿ ತಿಂಗಳು ನೀರು ಬಳಕೆಯ ಮಾಪನ ಆಧಾರದ ಮೇಲೆ ಬಿಲ್ ಅನ್ನು ಜನರಿಗೆ ನೀಡುವುದರೊಂದಿಗೆ ನೀರಿನ ಶುಲ್ಕವನ್ನು ಸಂಗ್ರಹಿಸಬೇಕು ಎಂದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿರುವ ಗ್ರಾಮ ನೀರು ನೈರ್ಮಲ್ಯ ಸಮಿತಿಗಳು ಕಾಲಕಾಲಕ್ಕೆ ಸಭೆ ಸೇರಿ ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥಿತ ರೀತಿಯಲ್ಲಿ ಆಗುವಂತೆ ಮೇಲುಸ್ತುವಾರಿ ಕಾರ್ಯಗಳನ್ನು ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಉದಯ್ ಕುಮಾರ್ ಉಪಸ್ಥಿತರಿದ್ದರು.
ಮನೆಗಳಿಗೆ ನೀರು ಪೂರೈಸಲು ನಿರ್ಮಿಸಿರುವ ಟ್ಯಾಂಕ್‌ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಜಿಲ್ಲೆಯಾದ್ಯಂತ ಕುಡಿಯಲು ಯೋಗ್ಯವಾಗಿರುವ ಸ್ವಚ್ಛ ನೀರನ್ನು ಸರಬರಾಜು ಮಾಡಬೇಕುಪ್ರತೀಕ್ ಬಾಯಲ್ ಜಿಲ್ಲಾ ಪಂಚಾಯಿತಿ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.