ADVERTISEMENT

ಜನತಾ ಕಾಲೇಜು ಸಾಧನೆ ಮೆಚ್ಚುವಂಥದ್ದು

ಹೆಮ್ಮಾಡಿ: ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿದ ಡಿಡಿಪಿಐ ಲೋಕೇಶ್ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 3:07 IST
Last Updated 13 ನವೆಂಬರ್ 2025, 3:07 IST
ಕುಂದಾಪುರ ಸಮೀಪದ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನೆ ನಡೆಯಿತು.
ಕುಂದಾಪುರ ಸಮೀಪದ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನೆ ನಡೆಯಿತು.   

ಕುಂದಾಪುರ: ‘ಪ್ರಾರಂಭವಾಗಿ ಮೂರು ವರ್ಷದಲ್ಲೇ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದುಕೊಂಡಿರುವ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜು ಬೆಳೆಯುತ್ತಿರುವ ಪರಿ ಮೆಚ್ಚುವಂಥದ್ದು’ ಎಂದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕ ಲೋಕೇಶ್‌ ಸಿ. ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ವಲಯ, ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲಿಷ್ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ 3 ದಿನ ನಡೆಯುವ ಉಡುಪಿ ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ ಬಾಲಕಿಯರ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿ ಅತ್ಯುತ್ತಮ ರೀತಿಯಲ್ಲಿ ಕ್ರೀಡಾಕೂಟದ ಸಂಘಟನೆಯಾಗಿದೆ. ಜಿಲ್ಲೆಯ ಕ್ರೀಡಾಳುಗಳು ಉತ್ತಮ ಪ್ರದರ್ಶನ ನೀಡಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವುದರೊಂದಿಗೆ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.

ADVERTISEMENT

ಗೌರವ ರಕ್ಷೆ ಸ್ವೀಕರಿಸಿದ ಮುಂಬೈಯ ಉದ್ಯಮಿ ಸುರೇಶ್ ಡಿ. ಕಾಂಚನ್ ಮಾತನಾಡಿ, ಶಾಲೆ– ಕಾಲೇಜುಗಳಲ್ಲಿ ಜಾತಿ, ಮತ ಭೇದ ಇರಕೂಡದು. ವಿದ್ಯೆ ಮಕ್ಕಳ ಭವಿಷ್ಯ ರೂಪಿಸುವ ಪುಣ್ಯದ ಕಾರ್ಯ. ಮಕ್ಕಳ ಭವಿಷ್ಯದ ಕನಸುಗಳನ್ನು ನನಸಾಗಿಸುವ ಶಿಕ್ಷಣ ಸಂಸ್ಥೆಗಳನ್ನು ಸದಾ ಪ್ರೋತ್ಸಾಹಿಸೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ಮೊಗವೀರ ಅವರು, ನಮ್ಮ ಸಂಸ್ಥೆಯಲ್ಲಿ ಕಲಿಯುವ ಮಕ್ಕಳ ಸರ್ವತೋಮುಖ ಬೆಳವಣಿಗೆಯೇ ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿಯಿರುವ ಮಕ್ಕಳಿಗೆ ಉತ್ತೇಜನ ನೀಡಲಾಗುತ್ತಿದೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ 40– 50 ಕ್ರೀಡಾಪಟು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಶಿಕ್ಷಣ, ಶುಲ್ಕ ವಿನಾಯಿತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಕ್ರೀಡಾ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಂಸ್ಕೃತಿಕ, ಶೈಕ್ಷಣಿಕ ಮಾರ್ಗದರ್ಶನದ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಕ್ರೀಡಾ ಜ್ಯೋತಿ ಬೆಳಗಿಸಿದರು. ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಬ್ರಹ್ಮಾವರ ಪ್ರಭಾರ ಬಿಇಒ ಉಮಾ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಯುವಜನಾ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಬೈಂದೂರಿನ ವಿಜಯ ಕುಮಾರ್ ಶೆಟ್ಟಿ, ಕಾರ್ಕಳದ ರವಿಚಂದ್ರ ಕಾರಂತ್, ಉಡುಪಿಯ ರವೀಂದ್ರ ಶೆಟ್ಟಿ, ಬ್ರಹ್ಮಾವರದ ನಿತ್ಯಾನಂದ ಶೆಟ್ಟಿ, ಕುಂದಾಪುರದ ಸತ್ಯನಾರಾಯಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ವಿವಿಧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿಶನ್ ರಾಜ್ ಶೆಟ್ಟಿ ಬೆಳ್ವೆ, ಉಪಾಧ್ಯಕ್ಷ ರವಿಶಂಕರ್ ಹೆಗ್ಡೆ, ರವಿ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಮಂಜುನಾಥ ಶೆಟ್ಟಿ, ಸತೀಶ್ ಬಾಡ, ಶೇಖರ್ ಪೂಜಾರಿ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ, ನಿವೃತ್ತ ಮುಖ್ಯಶಿಕ್ಷಕ ನಂದಿ ದೇವಾಡಿಗ, ಜನತಾ ಪ್ರೌಢಶಾಲೆ ಮುಖ್ಯಶಿಕ್ಷಕ ಜಗದೀಶ್ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ರಾಘವೇಂದ್ರ ಕುಲಾಲ್, ವಿವಿವಿ ಮಂಡಳಿ ಸದಸ್ಯರಾದ ಹಸನ್ ಸಾಹೇಬ್, ಸಾಧು ಬಿಲ್ಲವ, ಗ್ರಾ.ಪಂ. ಮಾಜಿ ಸದಸ್ಯ ಯಾಸಿನ್ ಹೆಮ್ಮಾಡಿ, ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ದೀಪಿಕಾ ಆಚಾರ್ಯ ಭಾಗವಹಿಸಿದ್ದರು. 

ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಉದಯ ನಾಯ್ಕ್ ನಿರೂಪಿಸಿದರು. ಕರಾಟೆ ಪಟು ರಜತ್ ಪ್ರತಿಜ್ಞಾವಿಧಿ ಬೋಧಿಸಿದರು. ಸಭಾ ಕಾರ್ಯಕ್ರಮದ ಮೊದಲು ಹೆಮ್ಮಾಡಿ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ ಜನತಾ ಕಾಲೇಜುವರೆಗೆ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.