ಉಡುಪಿ: ಭಯ, ಉದ್ವಿಗ್ನತೆ ಮತ್ತು ಕಷ್ಟಗಳಿಂದ ತುಂಬಿರುವ ಇಂದಿನ ಜಗತ್ತಿನಲ್ಲಿ ಮೇರಿ ಮಾತೆ ಭರವಸೆಯ ದಾರಿದೀಪವಾಗಿದ್ದಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ತಮ್ಮ ಜೀವನದಲ್ಲಿ ಮೇರಿ ಮಾತೆಯು ದೇವರ ವಾಕ್ಯಕ್ಕೆ ಸಂಪೂರ್ಣವಾಗಿ ವಿಧೇಯರಾಗಿ ದೇವರಲ್ಲಿ ನಂಬಿಕೆ ಇಟ್ಟರು. ತಮ್ಮ ಜೀವನದಲ್ಲಿ ಬಂದ ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕೂಡ ಹೆದರಿ ಓಡಲಿಲ್ಲ ಬದಲಾಗಿ ದೇವರಲ್ಲಿ ತಮ್ಮ ವಿಶ್ವಾಸ ಅಚಲವಾಗಿಸಿದ್ದರು ಎಂದರು.
ಅಗತ್ಯದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿದ್ದ ಮೇರಿ ಮಾತೆ ಅವರ ಉದಾರತೆಯ ಗುಣ ನಾವು ಕೂಡ ಇತರರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ ಎಂದರು.
ಹಬ್ಬಕ್ಕೆ ಪೂರ್ವ ಸಿದ್ದತೆಯಾಗಿ 9 ದಿನಗಳ ನವೇನಾ ಪ್ರಾರ್ಥನೆ ಜರುಗಿದ್ದು, ವಾರ್ಷಿಕ ಮಹೋತ್ಸವದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಕಲ್ಮಾಡಿ ವೆಲಂಕಣಿ ಮಾತೆ ಪುಣ್ಯಕ್ಷೇತ್ರದ ನಿರ್ದೇಶಕ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಹಬ್ಬದ ಆಯೋಜನೆ ಮತ್ತು ವ್ಯವಸ್ಥೆಯಲ್ಲಿ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಮಹೋತ್ಸವದಲ್ಲಿ ಸಹಕರಿಸಿದ ದಾನಿಗಳು ಹಾಗೂ ಪ್ರಾಯೋಜಕರಿಗೆ, ಧರ್ಮಾಧ್ಯಕ್ಷರು ಆಶೀರ್ವದಿತ ಮೇಣದ ಬತ್ತಿಗಳನ್ನು ನೀಡಿ ಸನ್ಮಾನಿಸಿದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಐಡಾ ಡಿಸೋಜಾ, ಕಾರ್ಯದರ್ಶಿ ಸ್ಟ್ಯಾನ್ಲಿ ಮಿನೇಜಸ್, 20 ಆಯೋಗಗಳ ಸಂಚಾಲಕ ಜೆನವಿವ್ ಲೋಬೊ, ಧರ್ಮಪ್ರಾಂತ್ಯದ ಕುಲಪತಿ ಸ್ಟೀಫನ್ ಡಿಸೋಜಾ, ಉಡುಪಿ ಶೋಕಮಾತಾ ದೇವಾಲಯದ ಪ್ರಧಾನ ಧರ್ಮಗುರು ಚಾರ್ಲ್ಸ್ ಮಿನೇಜಸ್, ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ರೆಕ್ಟರ್ ಆಲ್ಬನ್ ಡಿಸೋಜಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.