
ಕಾರ್ಕಳ: ಭಾಷೆಯ ಪರಿಶುದ್ಧತೆ ಗ್ರಾಮೀಣ ಪ್ರದೇಶಗಳಲ್ಲಿ ಉಳಿದುಕೊಂಡಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಇಲ್ಲಿನ ಕಾರ್ಕಳದ ಹೋಟೆಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಕಾರ್ಕಳ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ಭಾಷಾ ವೈವಿಧ್ಯ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾವು ಮಾತನಾಡುವ ಭಾಷೆ ಯಾವುದೇ ಆಗಿರಲಿ, ಅದು ನಮ್ಮ ಸಂಸ್ಕೃತಿಯ ಬೇರು. ಭಾಷಾ ವೈವಿಧ್ಯ ತನ್ನದೇ ಆದ ಅಂತಃಕರಣ ಹೊಂದಿದ್ದು, ಕನ್ನಡದ ಕಂಪನ್ನು ಪರಸ್ಪರ ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಂಗ ಸಂಸ್ಕೃತಿ ಕಾರ್ಕಳದ ಅಧ್ಯಕ್ಷ ಎಸ್. ನಿತ್ಯಾನಂದ ಪೈ ಮಾತನಾಡಿ, ಭಾಷಾ ವೈವಿಧ್ಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ಮನೆಯಲ್ಲಿಯೂ ಭಾಷೆಯ ವೈವಿಧ್ಯ ಕಾಣಬಹುದು ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ. ಬಿ. ಪದ್ಮನಾಭ ಗೌಡ ಮಾತನಾಡಿ, ಭಾಷೆ ಅಂದರೆ ಸಂಸ್ಕೃತಿ. ಇದರ ಉಳಿವಿಗೆ ಭಾಷಾ ಸಮನ್ವಯ ಅಗತ್ಯ ಎಂದರು
ನಂತರ ನಡೆದ ತ್ರಿವಳಿ ಭಾಷಾ ಗೋಷ್ಠಿಯಲ್ಲಿ ಕುಂದಾಪ್ರ ಭಾಷೆಯ ಕುರಿತು ಪತ್ರಕರ್ತ ಸಿದ್ದಾಪುರ ವಾಸುದೇವ ಭಟ್ಟ ಮಾತನಾಡಿ, ಕುಂದಾಪುರ ಕನ್ನಡವು ಹಳೆಗನ್ನಡಕ್ಕೆ ತೀರಾ ಹತ್ತಿರವಾದ ಭಾಷೆಯಾಗಿದ್ದು, ದೂರವಿರುವವರನ್ನು ಹತ್ತಿರ ಮಾಡುತ್ತದೆ. ಭೌಗೋಳಿಕತೆಯ ಆಧಾರದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಭಾಷೆ ಬದಲಾಗುತ್ತದೆ ಎಂದರು.
ಅರೆಭಾಷೆ ಅಧ್ಯಯನಕಾರ ಪುರುಷೋತ್ತಮ ಕೆ.ವಿ ಮಾತನಾಡಿ, ಅರೆಭಾಷೆಯನ್ನು ಸುಳ್ಯ, ಮಡಿಕೇರಿ ಭಾಗಗಳಲ್ಲಿ ಬಳಸಲಾಗುತ್ತದೆ. ಈ ಭಾಷೆಯಲ್ಲಿ ಅನುನಾಸಿಕ ಶಬ್ದಗಳು ಅಧಿಕ. ಪ್ರತಿ ಶಬ್ದದಲ್ಲೂ ಹಿತ, ಸ್ವಾರಸ್ಯಕರ ಅಂಶಗಳಿವೆ. ಭಾಷೆಯ ಉಳಿವಿಗಾಗಿ ಇಂತಹ ವೈವಿಧ್ಯತೆಯ ಗೋಷ್ಠಿಗಳು ಅಗತ್ಯ. ಕನ್ನಡ ಸಾಹಿತ್ಯ ಪರಿಷತ್ತಿನ ವಿಶಿಷ್ಟ ಪ್ರಯತ್ನವಿದು ಎಂದರು.
ಹವ್ಯಕ ಭಾಷೆ ಕುರಿತು ಕಾರ್ಕಳ ತಾಲ್ಲೂಕು ಹವ್ಯಕ ಸಭೆಯ ಕೋಶಾಧಿಕಾರಿ ಎಚ್.ಕೆ. ಗಣಪ್ಪಯ್ಯ ಮಾತನಾಡಿ, ಗೋಕರ್ಣದಿಂದ ಗಂಗೊಳ್ಳಿ ತನಕ ಹವ್ಯಕ ರಾಜ್ಯ ಎಂಬ ಪ್ರತೀತಿ ಇತ್ತು. ಇಂದು ಹವ್ಯಕ ಭಾಷೆ ಪ್ರಪಂಚದಾದ್ಯಂತ ವಿಸ್ತರಿಸಿದೆ. ಭಾಷೆಗಳು ಕುರ್ಕುರೆಗಳಂತೆ, ಪ್ರತಿ ಒಂದಕ್ಕೂ ತನ್ನದೇ ರುಚಿ ಇದೆ ಎಂದು ಹಾಸ್ಯಭರಿತವಾಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ವಸಂತ ಸೇನ ಉಪಸ್ಥಿತರಿದ್ದರು. ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿದರು. ಗಣೇಶ್ ಜಾಲ್ಲೂರು ನಿರೂಪಿಸಿದರು. ಸಾಹಿತ್ಯ ಪರಿಷತ್ ಸದಸ್ಯೆ ಸುಲೋಚನಾ ಬಿ.ವಿ. ವಂದಿಸಿದರು. ಶ್ರಾವರಿ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.