ಕಾಪು (ಪಡುಬಿದ್ರಿ): ಕಾರು ಪಲ್ಟಿಯಾದ ಪರಿಣಾಮ ಯುವ ಕಲಾವಿದ, ಡಿ.ಜೆ ಮರ್ವಿನ್ ಮೆಂಡೋನ್ಸಾ (35) ಸಾವನ್ನಪ್ಪಿದ್ದು, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ಗಾಯಾಳುಗಳಾದ ಕಾರು ಚಾಲಕ ಅಂಬಲಪಾಡಿಯ ಪ್ರಜ್ವಲ್, ಕಾರ್ಕಳದ ಪ್ರಸಾದ್ ಮತ್ತು ವಿಘ್ನೇಶ್ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಬಲಪಾಡಿಯಿಂದ ಬೆಳ್ಮಣ್ ಕಡೆಗೆ ತೆರಳುತ್ತಿದ್ದ ವೇಳೆ ನಾಯಿಯೊಂದು ಕಾರಿಗೆ ಅಡ್ಡ ಬಂದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ.
ಮರ್ವಿನ್ ಮೆಂಡೋನ್ಸಾ ಅವರು, ಬೆಳ್ಮಣ್ ರೋಟರಿ ಕ್ಲಬ್‌ನ ಸ್ಥಾಪಕ ಸದಸ್ಯರಾಗಿದ್ದು, ವಿವಿಧ ಸಂಘ–ಸಂಸ್ಥೆಗಳ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಹ್ಯೂಮಾನಿಟಿ ಸಂಸ್ಥೆಯ ಸ್ಥಾಪನೆಯಲ್ಲೂ ಮುಂಚೂಣಿಯಲ್ಲಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸುವುದರ ಜೊತೆಗೆ ನಿರೂಪಕರಾಗಿ, ಬೆಳ್ಮಣ್‌ನಲ್ಲಿ ಕಾಸ್ಟ್ಯೂಮ್ ಹೌಸ್ ಎಂಬ ವಸ್ತ್ರವಿನ್ಯಾಸ ಸಂಸ್ಥೆಯನ್ನು ನಡೆಸುತ್ತಿದ್ದರು.
ಕೊಂಕಣಿ ಸಿನಿಮಾ ಸೇರಿದಂತೆ ಕನ್ನಡ–ಕೊಂಕಣಿ ಕಿರುಚಿತ್ರಗಳಿಗೆ ನಿರ್ದೇಶಕರಾಗಿದ್ದರು. ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದು, ಸಿನಿಮಾ ರಂಗದಲ್ಲಿ ಮಿಂಚುವ ಕನಸು ಕಂಡಿದ್ದರು. ಆಗಸ್ಟ್ 22ರಂದು ಅವರ ನಿರ್ದೇಶನದ ‘ತುಜೊಚ್ಚ್ ಜಾಲಾ’ ಎಂಬ ಕೊಂಕಣಿ ಆಲ್ಬಮ್ ಗೀತೆ ಬಿಡುಗಡೆಯಾಗಿತ್ತು.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.