ADVERTISEMENT

ಕಾರ್ಕಳ | ಆರೋಪಿಗೆ ಅಮಲು ಪದಾರ್ಥ ಸಿಕ್ಕಿದ್ದು ಎಲ್ಲಿಂದ: ಶಾಸಕ ಸುನಿಲ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 4:44 IST
Last Updated 27 ಆಗಸ್ಟ್ 2024, 4:44 IST
<div class="paragraphs"><p>ತಾಲ್ಲೂಕಿನಲ್ಲಿ ಈಚೆಗೆ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಹಿಂದೂ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಕಾರ್ಕಳದಲ್ಲಿ ಖಂಡನಾ ಜಾಥಾ ಸೋಮವಾರ ನಡೆಯಿತು</p></div>

ತಾಲ್ಲೂಕಿನಲ್ಲಿ ಈಚೆಗೆ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಹಿಂದೂ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಕಾರ್ಕಳದಲ್ಲಿ ಖಂಡನಾ ಜಾಥಾ ಸೋಮವಾರ ನಡೆಯಿತು

   

ಕಾರ್ಕಳ: ‘ತಾಲ್ಲೂಕಿನ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಅಮಲು ಪದಾರ್ಥ ತಂದು ಕೊಟ್ಟವರು ಯಾರು? ಅದು ಎಲ್ಲಿಂದ ಸಿಕ್ಕಿತು? ಇದರ ಹಿಂದಿರುವ ಷಡ್ಯಂತ್ರ ಯಾವುದು ಎಂಬ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದು ಶಾಸಕ ವಿ.ಸುನಿಲ್ ಕುಮಾರ್ ಒತ್ತಾಯಿಸಿದರು.

ಈಚೆಗೆ ನಡೆದ ಯುವತಿಯ ಅತ್ಯಾಚಾರವನ್ನು ಖಂಡಿಸಲು ಹಿಂದೂ ಹಿತ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಇಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ನಿರ್ಭಯಾ, ಕೇರಳದ ‘ಲವ್ ಜಿಹಾದ್’, ಹುಬ್ಬಳ್ಳಿಯ ಸ್ನೇಹಾ ಕೊಲೆ, ಬಾಂಗ್ಲಾದೇಶದ ಘಟನೆಗಳನ್ನು ಖಂಡಿಸುವ ಹೊತ್ತಿನಲ್ಲೇ ನಮ್ಮ ತಾಲ್ಲೂಕಿನಲ್ಲೇ ಯುವತಿಯ ಮೇಲೆ  ಪೈಶಾಚಿಕ ಕೃತ್ಯ ನಡೆದುಹೋಗಿದೆ. ಇದಕ್ಕೆ ಸರ್ಕಾರದ ಓಲೈಕೆ ನೀತಿ ಹಾಗೂ ಮೃದು ಧೋರಣೆಯೇ ಕಾರಣ. ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತಿರುವ ಅತ್ಯಾಚಾರದಂತಹ ಪ್ರಕರಣಗಳು ಮುಂದೆ ಗ್ರಾಮ ಗ್ರಾಮಗಳಲ್ಲಿ ನಡೆದರೂ ಅಚ್ಚರಿ ಪಡಬೇಕಿಲ್ಲ’ ಎಂದರು.

‘ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ಹಿಜಾಬ್ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕುವುದರ ಹಿಂದಿನ ಆರ್ಥಿಕ ಶಕ್ತಿ ಯಾವುದು ಎಂಬುದನ್ನು ಅರಿತುಕೊಳ್ಳಬೇಕು. ‘ಷರಿಯತ್‌ ಕಾನೂನೇ ನಮಗೆ ಆದರ್ಶ’ ಎಂದು ವಾದಿಸುವವರು ಅದರಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಳವು ಮಾಡಿದವರ ಕೈ ಕಡಿಯಬೇಕು. ಅತ್ಯಾಚಾರಿಗಳನ್ನು ಕಲ್ಲು ಹೊಡೆದು ಸಾಯಿಸಬೇಕು ಎಂದು ಷರಿಯತ್‌ ಕಾನೂನಿನಲ್ಲಿದೆ. ಮೊನ್ನೆ ನಡೆದ ಘಟನೆಯ ಆರೋಪಿಗೆ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ಕಲ್ಲು ಹೊಡೆಯಲು ಸಿದ್ಧರಿದ್ದೀರಾ’ ಎಂದು ಸವಾಲು ಹಾಕಿದರು.

‘ಘಟನೆ ನಡೆದ ಬಳಿಕ ಹೇಳಿಕೆ ನೀಡುವ ಮುಸ್ಲಿಂ ಮುಖಂಡರು, ಅದಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ನಿಮ್ಮ ಸಮಾಜದ ಯುವಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು’ ಎಂದರು.

ಚಿತ್ರದುರ್ಗ ಭೋವಿ ಮಠದ ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ‘ಇಡೀ ವಿಶ್ವಕ್ಕೆ ಸಂಸ್ಕೃತಿ, ಸಂಸ್ಕಾರದ ರಾಯಭಾರಿಯಾಗಿದ್ದ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿರುವುದು ದುರದೃಷ್ಟಕರ.  ಮಹಿಳೆ ಮೇಲೆ ಅತ್ಯಾಚಾರ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಆತಂಕಕಾರಿ.  ಪೂಜನೀಯ ಸ್ತ್ರೀ ಕುಲಕ್ಕೆ ಗೌರವ ನೀಡದ ಕಸಗಳನ್ನು ಕಿತ್ತು ಬಿಸಾಡುವ ಕೆಲಸ ಸರ್ಕಾರದಿಂದ ಆಗಬೇಕಾಗಿದೆ. ಅತ್ಯಾಚಾರದ ವಿರುದ್ಧದ ಹೋರಾಟಕ್ಕೆ ಜಾತಿ‌–ಮತ ಭೇದಮರೆತು ಕೈಜೋಡಿಸಬೇಕು’ ಎಂದರು.

ಮುಖಂಡ ಮಹೇಶ್‌ ಕುಡುಲ್ಪಾಜೆ, ‘ಮುಂದೆ ಇಂತಹ ಘಟನೆ ಮರುಕಳಿಸಿದರೆ ತಕ್ಕ ಉತ್ತರ ನೀಡುತ್ತೇವೆ. ತಾಳ್ಮೆ ಪರೀಕ್ಷೆ ಬೇಡ’ ಎಚ್ಚರಿಕೆ ನೀಡಿದರು.

ಬಜರಂಗದಳ ರಾಜ್ಯ ಸಂಚಾಲಕ ಕೆ.ಆ‌ರ್. ಸುನೀಲ್ ಕುಮಾ‌ರ್, ‘ಯುವತಿಯ  ಅತ್ಯಾಚಾರಕ್ಕೂ ಮುನ್ನ ಆಕೆಗೆ  ಮಾದಕ ದ್ರವ್ಯ ನೀಡಿರುವುದು ಬಯಲಾಗಿದೆ. ಕರಾವಳಿಯಲ್ಲಿ ಲವ್ ಜಿಹಾದ್, ಡ್ರಗ್ಸ್ ಮಾಫಿಯಾವನ್ನು ಮಟ್ಟ‌ಹಾಕಬೇಕಿದೆ. ಪೊಲೀಸ್‌ ಇಲಾಖೆಯೂ ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು’ ಎಂದು ಒತ್ತಾಯಿಸಿದರು.

ವಿಶ್ರಾಂತ ಪ್ರಾಂಶುಪಾಲರಾದ ಮಿತ್ರ ಪ್ರಭಾ ಹೆಗ್ಡೆ, ಮುಖಂಡ ಮುನಿಯಪ್ಪ ದೊಡ್ಡ ಹಳ್ಳಿ, ಜಾಗರಣ ವೇದಿಕೆಯ ಪ್ರಮುಖ ಶಂಕರ ಕೋಟ ಭಾಗವಹಿಸಿದ್ದರು.

ಮನೀಶ್ ಶೆಟ್ಟಿ ಸ್ವಾಗತಿಸಿದರು. ಶೈಲೇಶ್ ನಿರೂಪಿಸಿದರು.

ಅತ್ಯಾಚಾರ– ಖಂಡನಾ ಜಾಥಾ
ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಇಲ್ಲಿನ ಅನಂತಶಯನದಿಂದ ಬಸ್ ನಿಲ್ದಾಣ ವೆಂಕಟ‌ರಮಣ ದೇವಸ್ಥಾನ ಮಾರ್ಗವಾಗಿ ಮಂಜುನಾಥ ಪೈ ಸಭಾಂಗಣದವರೆಗೆ ಖಂಡನಾ ಜಾಥಾ ನಡೆಯಿತು. ಅತ್ಯಾಚಾರ ನಡೆಸಿದವರನ್ನು ಗಲ್ಲಿಗೇರಿಸಬೇಕು ‘ಲವ್ ಜಿಹಾದ್’ ನಿಲ್ಲಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ನಿರ್ದಾಕ್ಷಿಣ್ಯ ಕ್ರಮಕ್ಕೆ ಜಿಲ್ಲಾ ಕೊರಗ ಸಂಘ ಆಗ್ರಹ
ತಾಲ್ಲೂಕಿನಲ್ಲಿ ಈಚೆಗೆ ನಡೆದ ಬಡ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಡುಪಿ ಜಿಲ್ಲಾ ಕೊರಗ ಸಂಘವು ತೀವ್ರವಾಗಿ ಖಂಡಿಸಿದೆ.  ಈ ಕೃತ್ಯ ಖಂಡಿಸಿ ಕರ್ನಾಟಕ ಬೋವಿ ಸಮಾಜವು ನಡೆಸುತ್ತಿರುವ ಹೋರಾಟಕ್ಕೆ ನೈತಿಕ ಬೆಂಬಲವನ್ನು ಸೂಚಿಸಿರುವ ಸಂಘದ ಅಧ್ಯಕ್ಷರಾದ ಗೌರಿ ಕೊರಗ ‘ಇಂತಹ ಸಮಾಜ ಘಾತುಕರ ವಿರುದ್ಧ ಪೋಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.