ಕಾರ್ಕಳ: ನಗರದ ಎಸ್‌ವಿಟಿ ಸರ್ಕಲ್‌ನಿಂದ ಸಾಗುವ ಪೆರ್ವಾಜೆ ರಸ್ತೆಯುದ್ದಕ್ಕೂ ದಾರಿಯೇ ಇಲ್ಲದಂತೆ ಹೊಂಡಗಳು ನಿರ್ಮಾಣವಾಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ.
ಇಲ್ಲಿ ದ್ವಿಚಕ್ರ ವಾಹನ ಸವಾರರು ಸಾಗುವುದೇ ಕಷ್ಟವಾಗಿದೆ. ಮಳೆ ನಿಂತರೂ ರಸ್ತೆ ಹೊಂಡಗಳು ಬಾಯ್ತೆರೆದು ಕೊಂಡಿವೆ. ಚಿಕ್ಕಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವ ತಾಯಂದಿರ ಪಾಡು ಹೇಳ ತೀರದಾಗಿದೆ.
ಬಸ್ ನಿಲ್ದಾಣದ ತನಕ ಸಾಗುವ ರಥಬೀದಿಯಲ್ಲಿ ದುರಸ್ತಿ ಮಾಡಿದ ಮ್ಯಾನ್ ಹೋಲ್‌ಗಳಿಗೆ ಸರಿಯಾಗಿ ರಸ್ತೆಯನ್ನು ಸಮತಟ್ಟುಗೊಳಿಸದೇ ಹಾಗೇ ಬಿಡಲಾಗಿದೆ. ಇದರ ಜೊತೆಗೆ ಮಲ್ಲಿಗೆ ಓಣಿಯ ಎದುರು ಪೈಪ್ ಲೈನ್ ಕೊರೆದಿರುವುದನ್ನೂ ಸಮರ್ಪಕವಾಗಿ ಮುಚ್ಚಿಲ್ಲ. ಅಲ್ಲಿ ಹೊಂಡಕ್ಕೆ ತುಂಬಿದ ಜಲ್ಲಿಕಲ್ಲು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ನಗರದ ಬಸ್ ನಿಲ್ದಾಣದಿಂದ ಅನಂತಶಯನ ತನಕ ಸಾಗುವ ರಸ್ತೆಯಲ್ಲಿ ಪವನ್ ಜುವೆಲ್ಲರಿ, ಆಶೋಕ್ ಸ್ವೀಟ್ಸ್ ಎದುರು ಅಡ್ಡಕ್ಕೆ ಅರ್ಧ ರಸ್ತೆ ಸೀಳಿದಂತೆ ಹೊಂಡಗಳಿದ್ದು ನೇರ ಸಾಗುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಈ ರಸ್ತೆಯ ಅಂಗಡಿಗಳ ಎದುರು ಪೈಪ್‌ಲೈನ್‌ಗಾಗಿ ಚರಂಡಿ ಅಗೆದು, ಅದರ ಮೇಲೆ ಕೆಂಪು ಮಣ್ಣು ಹಾಸಿದ ಪರಿಣಾಮ ರಸ್ತೆಯ ಪಕ್ಕ ರಾಡಿಯೆದ್ದಿತ್ತು. ಸದಾ ವಾಹನ ಸಂಚಾರವಿರುವಲ್ಲಿ ಫೂಟ್‌ಪಾತ್ ಕಾಣೆಯಾಗಿದೆ. ಪ್ರಕಾಶ್ ಹೊಟೇಲ್‌ನಿಂದ ಅಶೋಕ ಸ್ವೀಟ್ಸ್ ತನಕ ಫೂಟ್‌ಪಾತ್ ಮೇಲೆ ಹಾಸಿದ ಕಪ್ಪು ಜಲ್ಲಿಕಲ್ಲುಗಳು ಅಸ್ತವ್ಯಸ್ತವಾಗಿ ಹರಡಿಕೊಂಡಿವೆ.
ಅನಂತಶಯನದ ವೃತ್ತದ ಹಿಂಭಾಗದಲ್ಲಿ ರಸ್ತೆಯೂ ಹದಗೆಟ್ಟಿದೆ. ವೃತ್ತದ ಒಂದು ಭಾಗದಲ್ಲಿ ಪದ್ಮಾವತಿ ದೇವಸ್ಥಾನದ ಮೂಲೆಯಿಂದ ರಸ್ತೆಯ ಮಧ್ಯಭಾಗದ ತನಕ ಅಗೆಯಲಾಗಿದ್ದು ಸರಿಯಾಗಿ ಮುಚ್ಚದೇ ಇರುವುದರಿಂದ ಅಲ್ಲಿ ಕೆಂಪು ಕಲ್ಲಿನ ಹುಡಿಯನ್ನೂ ಹಾಸಿದ್ದು ಜಲ್ಲಿ ಕಲ್ಲುಗಳು ಚದುರಿ ವಾಹನ ಸಂಚಾರ ದುಸ್ತರವಾಗಿದೆ.
ಪ್ರತಿದಿನ ಸಾವಿರಾರು ಮಂದಿ ಓಡಾಡುವ ತೆಳ್ಳಾರು ರಸ್ತೆ ತುಂಬಾ ಉಬ್ಬು ತಗ್ಗುಗಳು ಉಂಟಾಗಿ ಅಲ್ಲಿ ನಡೆದುಕೊಂಡು ಸಾಗುವುದೂ ಕಷ್ಟವಾಗುತ್ತಿದೆ. ಈ ರಸ್ತೆಯ ದುರಸ್ತಿಗೊಳಿಸದೆ ಸಂಬಂಧಪಟ್ವವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನರು ದೂರಿದ್ದಾರೆ.
ಆನೆಕೆರೆಯಿಂದ ಗೊಮ್ಮಟ ಬೆಟ್ಟದತ್ತ ಸಾಗುವ ಕಾಂಕ್ರೀಟ್ ರಸ್ತೆಯಲ್ಲಿ ಪೈಪ್‌ಲೈನ್‌ಗಾಗಿ ರಸ್ತೆಯ ಅಡ್ಡಕ್ಕೆ ಅಲ್ಲಲ್ಲಿ ಕಾಂಕ್ರೀಟ್ ರಸ್ತೆ ಕಡಿದು ಹಾಗೇ ಬಿಡಲಾಗಿತ್ತು. ಈಗ ಆ ಹೊಂಡದಲ್ಲಿ ಅವೈಜ್ಞಾನಿಕವಾಗಿ ಕಪ್ಪು ಜಲ್ಲಿಯನ್ನು ತುಂಬಿಸಿ ಮೊದಲಿಗಿಂತ ಹೆಚ್ಚು ಸಮಸ್ಯೆ ಉದ್ಭವವಾಗಿದೆ.
ಆನೆಕೆರೆಯಿಂದ ಕೃಷ್ಣಕ್ಷೇತ್ರದಿಂದ ಎಪಿಎಂಸಿ ಕಡೆಗೆ ಸಾಗುವ ರಸ್ತೆಯಲ್ಲಿ ಹೆದ್ದಾರಿ ದಾಟುವಲ್ಲಿ 4 ಮಾರ್ಗ ಕೂಡುವಲ್ಲಿ ಅಗಲವಾಗಿ ಅಗೆದು ಸರಿಯಾಗಿ ಮುಚ್ಚದೇ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಈಚೆಗೆ ಕಾರ್ಕಳ ಪುರಸಭಾ ಸಭಾಂಗಣದಲ್ಲಿ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ನಗರದ ರಸ್ತೆ ಸಮಸ್ಯೆಯ ನಿರ್ಲಕ್ಷ್ಯವನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು.
ರಸ್ತೆಯ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಡಳಿತದ ಗಮನ ಸೆಳೆಯಲು ಪ್ರಯತ್ನ ಪಡುತ್ತಲೇ ಬಂದಿದ್ದಾರೆ. ‘ಪುರಸಭಾ ವ್ಯಾಪ್ತಿಯ ಅನಂತಶಯನ ದೇವಸ್ಥಾನ ತೆಳ್ಳಾರ್ ರಸ್ತೆ ಪ್ರವಾಸಿ ಮಂದಿರದ ಕೋರ್ಟ್ ರಸ್ತೆಗಳ ಡಾಂಬರನ್ನು ಜೆಸಿಬಿ ಮತ್ತು ಹಿಟಾಚಿ ಯಂತ್ರಗಳನ್ನು ಬಳಸಿ ಕಿತ್ತು ತೆಗೆದು ರಸ್ತೆಗಳನ್ನು ಸಂಪೂರ್ಣ ಹಾಳುಗೆಡವಲಾಗಿದೆ ಈ ರೀತಿ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನಾಗರಿಕರ ಪರವಾಗಿ ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ನೇತೃತ್ವದಲ್ಲಿ ತಹಶೀಲ್ದಾರ್ ಪುರಸಭೆ ಹಾಗೂ ಪೊಲೀಸ್ ಠಾಣೆಗೆ ಈಚೆಗೆ ದೂರು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.