ADVERTISEMENT

ಕರ್ನಾಟಕ ಪುಣ್ಯ ಭೂಮಿ ಅಧ್ಯಾತ್ಮದ ನಾಡು: ಕೈಲಾಸಾನಂದ ಗಿರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 4:27 IST
Last Updated 22 ಡಿಸೆಂಬರ್ 2025, 4:27 IST
ಕಾರ್ಯಕ್ರಮದಲ್ಲಿ ಶ್ರೀಲ ಪ್ರಭುಪಾದರ ಮೂರ್ತಿಗೆ ಪುಚ್ಪಾರ್ಚನೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಶ್ರೀಲ ಪ್ರಭುಪಾದರ ಮೂರ್ತಿಗೆ ಪುಚ್ಪಾರ್ಚನೆ ಮಾಡಲಾಯಿತು   

ಉಡುಪಿ: ಶ್ರೀಕೃಷ್ಣನು ತನ್ನ ಭಕ್ತನಿಗಾಗಿ ತಿರುಗಿ ನಿಂತು ದರ್ಶನ ನೀಡಿದ ಕರ್ನಾಟಕದ ಪುಣ್ಯ ಭೂಮಿಯು ಅಧ್ಯಾತ್ಮದ ನಾಡಾಗಿದೆ ಎಂದು ಹರಿದ್ವಾರದ ನಿರಂಜನಿ ಅಖಾರಾದ ಆಚಾರ್ಯ ಮಹಾಮಂಡಲೇಶ್ವರ ಕೈಲಾಸಾನಂದ ಗಿರಿ ಮಹಾರಾಜರು ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಇಸ್ಕಾನ್‌ ಬೆಂಗಳೂರು ವತಿಯಿಂದ ಶ್ರೀಕೃಷ್ಣನಿಗೆ ಶ್ರೀಲ ಪ್ರಭುಪಾದರ ವಿಶ್ವಗುರು ಗೌರವ ಸಮರ್ಪಣೆ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಸಮರ್ಪಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕವು ನನಗೆ ಅತ್ಯಂತ ಪ್ರಿಯವಾದ ಸ್ಥಳವಾಗಿದೆ. ಹರಿದ್ವಾರ ಬಿಟ್ಟರೆ ನೀವು ಎಲ್ಲಿರಲು ಇಷ್ಟಪಡುತ್ತೀರಾ ಎಂದು ಯಾರಾದರೂ ಕೇಳಿದರೆ ನಾನು ಖಂಡಿತವಾಗಿಯೂ ಕರ್ನಾಟಕ ಎನ್ನುತ್ತೇನೆ ಎಂದು ಹೇಳಿದರು.

ADVERTISEMENT

ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದ ಅವರಿಗೆ ‘ವಿಶ್ವಗುರು’ ಬಿರುದನ್ನು ಸಮಸ್ತ ಅಖಾಡಗಳ ಒಪ್ಪಿಗೆಯಿಂದ ನೀಡಲಾಗಿತ್ತು ಎಂದು ತಿಳಿಸಿದರು.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಶ್ರೀ ಕೃಷ್ಣನ ಭಕ್ತಿ ವೇದಾಂತ ಸಾರವನ್ನು ತಮ್ಮ ಉಪನ್ಯಾಸ ಹಾಗೂ ಭಕ್ತಿ ಚಳುವಳಿಯ ಮೂಲಕ ಜಗತ್ತಿಗೆ ಪಸರಿಸಿದ ಶ್ರೀಲ ಪ್ರಭುಪಾದರು ನಿವಾಗಿಯೂ ವಿಶ್ವಗುರುವಾಗಿದ್ದಾರೆ ಎಂದರು.

ಉತ್ತರ ಭಾರತವು ಭಗವಂತ ಬೇರೆ ಬೇರೆ ಅವತಾರದಲ್ಲಿ ಜನಿಸಿದ ಪುಣ್ಯ ಭೂಮಿಯಾಗಿರುವುದರಿಂದ ಅದು ದೇವಭೂಮಿಯಾಗಿದೆ. ದಕ್ಷಿಣ ಭಾರತವು ಆಚಾರ್ಯರಾದ ಮಧ್ವ, ರಾಮಾನುಜ, ಶಂಕರರು ಅವತರಿಸಿದ ಪುಣ್ಯಭೂಮಿಯಾಗಿದೆ. ಕೈಲಾಸಾನಂದ ಗಿರಿ ಅವರು ಉಡುಪಿಗೆ ಬರುವ ಮೂಲಕ ಇಲ್ಲಿ ದಕ್ಷಿಣೋತ್ತರ ಸಂಗಮವಾಗಿದೆ ಎಂದು ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಇಸ್ಕಾನ್ ಬೆಂಗಳೂರಿನ ಚೈತನ್ಯದಾಸ್, ವಾಸುದೇವ ಕೇಶವದಾಸ್ ಉಪಸ್ಥಿತರಿದ್ದರು. ಇಸ್ಕಾನ್ ಬೆಂಗಳೂರು ಇದರ ಅಕ್ಷಯಪಾತ್ರ ಫೌಂಡೇಶನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಸ್ಕಾನ್ ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ಚಂಚಲಾಪತಿ ದಾಸ್ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಹರಿದ್ವಾರ ನಿರಂಜನಿ ಕೈಲಾಸಾನಂದ ಗಿರಿ ಮಹಾರಾಜ್ ಅವರನ್ನು ಪುತ್ತಿಗೆ ಶ್ರೀಗಳು ಗೌರವಿಸಿದರು. ಕಬ್ಬಿನಾಲೆ ವಸಂತ ಕುಮಾರ್ ಅವರು ಸಂಪಾದಿಸಿದ ‘ಶ್ರೀಲ ಪ್ರಭುಪಾದ ಚೈತನ್ಯಮೃತಂ’ ಕನ್ನಡ ಕೃತಿಯ ಲೋಕಾರ್ಪಣೆ ನಡೆಯಿತು. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರಿಗೆ ವಿಶ್ವಗುರು ಬಿರುದು ನೀಡಿ ಗೌರವಿಸಿದ ಕ್ಷಣಗಳ ವೀಡಿಯೊ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.