ADVERTISEMENT

ಜನಸಾಗರ ಕಂಡು ಸಿದ್ದರಾಮಯ್ಯಗೆ ಭಯ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 13:30 IST
Last Updated 27 ಜನವರಿ 2023, 13:30 IST
ಕಾರ್ಕಳ ತಾಲ್ಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಂಪಾರ್ಕ್ ಅನ್ನು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿದರು.
ಕಾರ್ಕಳ ತಾಲ್ಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಂಪಾರ್ಕ್ ಅನ್ನು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿದರು.   

ಉಡುಪಿ: ಕಲಬುರ್ಗಿ, ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶಗಳಲ್ಲಿ ಜನಸಾಗರ ಕಂಡು ಸಿದ್ದರಾಮಯ್ಯಗೆ ಭಯವಾಗಿದೆ. ಭಯ ಮುಚ್ಚಿಕೊಳ್ಳಲು ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾರ್ಕಳದಲ್ಲಿ ಪರಶುರಾಮ ಥೀಂಪಾರ್ಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿ, ಕಾಂಗ್ರೆಸ್‌ ತುಚ್ಛೀಕರಣದ ರಾಜಕಾರಣ ಮಾಡುತ್ತಿದ್ದು ಒಂದು ವರ್ಗವನ್ನು ತಲೆ ಮೇಲೆ ಕೂರಿಸಿಕೊಂಡು ಕುಣಿಸುತ್ತಿದೆ. ಬಡವರು, ದೀನ ದಲಿತರು, ಹಿಂದುಳಿದ ವರ್ಗದವರನ್ನು ಕಾಂಗ್ರೆಸ್‌ ಕೈಬಿಟ್ಟಿದೆ. ಕೋಲಾರದಲ್ಲಿ ದಲಿತರು, ಮುಸ್ಲಿಮರು, ಕುರುಬರು ಸಿದ್ದರಾಮಯ್ಯ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದಂತೆ ಕರಾವಳಿಯನ್ನು ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಲು ಹೊರಟಿಲ್ಲ. ರಾಜ್ಯದ ಪ್ರಮುಖ ಆರ್ಥಿಕ ವಲಯವಾಗಿರುವ ಕರಾವಳಿಯ ಬಂದರುಗಳ ಅಭಿವೃದ್ಧಿಗೆ, ಮೂಲ ಉದ್ಯೋಗಕ್ಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ವಿಸ್ತರಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ADVERTISEMENT

ನೆಲೆ ಇಲ್ಲದ ಮಾಜಿ ಸಿಎಂ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆಲೆ ಇಲ್ಲದೆ ಪರದಾಡುತ್ತಿರುವ ನಾಯಕ. ವರುಣ, ಚಾಮುಂಡೇಶ್ವರಿ, ಬದಾಮಿ ಬಳಿಕ ಕೋಲಾರದತ್ತ ಮುಖಮಾಡಿದ್ದಾರೆ. ನೆಲೆ ಇಲ್ಲದ ವ್ಯಕ್ತಿಗೆ ಸಿದ್ಧಾಂತಗಳ ಅರಿವು ಏಕೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.

ಹಿಂದುತ್ವ ಎಂದರೆ ರಾಷ್ಟ್ರೀಯತೆ ಹಾಗೂ ಭಾರತೀಯ ಸಂಸ್ಕೃತಿಯಾಗಿದ್ದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ರಾಷ್ಟ್ರೀಯತೆಯ ಪ್ರಯೋಗ ಶಾಲೆ. ದೇಶ ಮೊದಲು ಎಂದು ಯೋಚಿಸುವ ಜನರು ಇಲ್ಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.