ADVERTISEMENT

ಹುಟ್ಟೂರು ಬಿಟ್ಟವರೆಲ್ಲ ಮತದಾನಕ್ಕೆ ಬನ್ನಿ: ಜಿಲ್ಲಾ ಸ್ವೀಪ್ ಸಮಿತಿಯಿಂದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2023, 11:25 IST
Last Updated 9 ಏಪ್ರಿಲ್ 2023, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ಸ್ವೀಪ್‌ ಸಮಿತಿಯು ಈ ಬಾರಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ.

ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಬೇಕು ಎಂಬ ನಿಟ್ಟಿನಲ್ಲಿ ವಿದೇಶಗಳಲ್ಲಿ ಹಾಗೂ ಹೊರರಾಜ್ಯಗಳಲ್ಲಿ ನೆಲೆಸಿರುವ ಜಿಲ್ಲೆಯ ಮತದಾರರು ಚುನಾವಣೆಯ ದಿನ ತವರಿಗೆ ಬಂದು ಮತ ಚಲಾಯಿಸುವಂತೆ ಪ್ರೇರೇಪಿಸುವ ಚಿಂತನೆ ನಡೆಸಿದೆ.

ಸಾಮಾಜಿಕ ಮಾಧ್ಯಮಗಳ ಬಳಕೆ: ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯ ಜತೆಗೂ ಸಂವಹನ ಸುಲಭ ಸಾಧ್ಯವಾಗಿರುವ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡು ಹೊರ ದೇಶಗಳಲ್ಲಿ ಹಾಗೂ ಹೊರ ರಾಜ್ಯದಲ್ಲಿ ನೆಲೆಸಿರುವ ಉಡುಪಿ ಜಿಲ್ಲೆಯ ಮತದಾರರನ್ನು ಸಂಪರ್ಕಿಸಿ ಸಂವಹನ ನಡೆಸಲು ಸ್ವೀಪ್ ಸಮಿತಿ ನಿರ್ಧರಿಸಿದೆ.

ADVERTISEMENT

ಇದರ ಭಾಗವಾಗಿ ಮೊದಲಿಗೆ ವಿದೇಶ ಹಾಗೂ ಹೊರ ರಾಜ್ಯಗಳಲ್ಲಿರುವ ಜಿಲ್ಲೆಯ ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಜೊತೆ ಝೂಮ್ ಅಥವಾ ಯೂಟ್ಯೂಬ್ ಮೂಲಕ ಸಂವನ ನಡೆಸಿ ಮತದಾನದ ಮಹತ್ವವನ್ನು ತಿಳಿಸಿ ಮತ ಚಲಾಯಿಸಲು ತವರಿಗೆ ಬರುವಂತೆ ಮನವೊಲಿಸಲಾಗುವುದು ಎನ್ನುತ್ತಾರೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೂ ಆಗಿರುವ ಎಚ್‌.ಪ್ರಸನ್ನ.

ಎರಡನೇ ಭಾಗವಾಗಿ ಜಿಲ್ಲೆಯಲ್ಲಿ ವಾಸವಾಗಿರುವ ಸಂಬಂಧಿಗಳು, ಪೋಷಕರು ಹಾಗೂ ಆಪ್ತರನ್ನು ಭೇಟಿ ಮಾಡಿ ಅವರಿಗೂ ಮತದಾನದ ಮಹತ್ವ ತಿಳಿಸಿ ವಿದೇಶದಲ್ಲಿರುವ ಬಂಧುಗಳನ್ನು ಮತದಾನಕ್ಕೆ ಕರೆತರುವಂತೆ ಮನವಿ ಮಾಡಲಾಗುವುದು. ಜತೆಗೆ ಪೋಷಕರಿಂದಲೂ ವಿದೇಶದಲ್ಲಿರುವ ಹಾಗೂ ಹೊರ ರಾಜ್ಯಗಳಲ್ಲಿರುವ ಮಕ್ಕಳಿಗೆ ಪತ್ರ ಬರೆಸಿ ಪ್ರೇರೇಪಿಸಲಾಗುವುದು.

ಪತ್ರದಲ್ಲಿ ಏನಿರಲಿದೆ?

ಬಾಲ್ಯದಲ್ಲಿ ಓದಿರುವ ಶಾಲೆಯ ಕಟ್ಟಡಗಳನ್ನು ಸಾಂಪ್ರಾಯಿಕವಾಗಿ ಅಲಂಕರಿಸಿರುವ ಬಗ್ಗೆ, ಕರಾವಳಿಕ ಕಲೆ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿರುವ ಬಗ್ಗೆ ತಿಳಿಸಿ ಮತದಾನದ ದಿನ ನಿಮ್ಮ ನಿರೀಕ್ಷೆಯನ್ನು ಕಾತರದಿಂದ ಎಲ್ಲರೂ ಎದುರು ನೋಡುತ್ತಿರುವ ವಿಚಾರವನ್ನು ತಿಳಿಸಲು ಉದ್ದೇಶಿಸಲಾಗಿದೆ.

ವಿದೇಶ, ಹೊರ ರಾಜ್ಯಗಳಲ್ಲಿ ನೆಲೆಸಿರುವವರು ಜಿಲ್ಲೆಯೊಂದಿಗೆ ಇಂದಿಗೂ ಭಾವನಾತ್ಮಕ ಸಂಬಂಧಗಳನ್ನು ಹೊಂದಿದ್ದು, ಜಿಲ್ಲೆಯ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ಇದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವದ ಘಟ್ಟವಾದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಎಂಬ ವಿಶ್ವಾಸದಿಂದ ಸ್ವೀಪ್ ಸಮಿತಿ ವಿಭಿನ್ನ ಪ್ರಯತ್ನ ಮಾಡುತ್ತಿದ್ದು ಯಶಸ್ವಿಯಾಗುವ ವಿಶ್ವಾಸವಿದೆ ಎನ್ನುತ್ತಾರೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಚ್‌.ಪ್ರಸನ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.