ADVERTISEMENT

ಸಕ್ಕರೆ, ಕಾರ್ಬೊಹೈಡ್ರೇಟ್‌ ಅತಿಯಾದ ಸೇವನೆ ಅಪಾಯ: ಡಾ.ರಾಜೀವ್ ಲೋಚನ್

ಕೆಎಂಸಿಯಲ್ಲಿ ವಿಶ್ವ ಯಕೃತ್ತಿನ ದಿನ; ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 13:13 IST
Last Updated 20 ಏಪ್ರಿಲ್ 2022, 13:13 IST
ಯಕೃತ್ತು ಹಾಗೂ ರೋಗಗಳ ಬಗ್ಗೆ ಅರಿವು ಮೂಡಿಸಲು ಕೆಎಂಸಿ ವೈದ್ಯಕೀಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದಿಂದ ಮಂಗಳವಾರ ಆಸ್ಪತ್ರೆಯಲ್ಲಿ ಯಕೃತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.
ಯಕೃತ್ತು ಹಾಗೂ ರೋಗಗಳ ಬಗ್ಗೆ ಅರಿವು ಮೂಡಿಸಲು ಕೆಎಂಸಿ ವೈದ್ಯಕೀಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದಿಂದ ಮಂಗಳವಾರ ಆಸ್ಪತ್ರೆಯಲ್ಲಿ ಯಕೃತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.   

ಉಡುಪಿ: ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಕೊಬ್ಬಿನ ಪಿತ್ತಜನಕಾಂಗ (ಫ್ಯಾಟಿ ಲಿವರ್‌) ಕಾಯಿಲೆಗೆ ಕಾರಣವಾಗುತ್ತದೆ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಮುಖ್ಯ ಹೆಪಟೊ-ಪ್ಯಾಂಕ್ರಿಯಾಟಿಕೊ-ಬಿಲಿಯರಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಸಲಹೆಗಾರ ಡಾ.ರಾಜೀವ್ ಲೋಚನ್ ಸಲಹೆ ನೀಡಿದರು.

ಯಕೃತ್ತು ಹಾಗೂ ರೋಗಗಳ ಬಗ್ಗೆ ಅರಿವು ಮೂಡಿಸಲು ಕೆಎಂಸಿ ವೈದ್ಯಕೀಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಹಾಗೂ ಯಕೃತ್ತಿನ ಮೇಲೆ ಬೀರುವ ದುಷ್ಪರಿಣಾಮಗಳು ಮುಂದೆ ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಸವಾಲಾಗಿ ಕಾಡಲಿವೆ. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡದಿದ್ದರೆ ಯಕೃತ್ತಿನ ಸಿರೋಸಿಸ್ ಮತ್ತು ಯಕೃತ್ತಿನ ಹಾನಿಗೆ ಕಾರಣವಾಗಬಹುದು. ಸಮತೋಲಿತ ಆಹಾರ, ವ್ಯಾಯಾಮ ಹಾಗೂ ಜೀವನಶೈಲಿಯ ಮಾರ್ಪಾಡುಗಳಿಂದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ, ಯಕೃತ್ತು ದೇಹದ ಬಹಳ ಮುಖ್ಯವಾದ ಅಂಗವಾಗಿದ್ದು, ಯಕೃತ್ತಿನ ರಕ್ಷಣೆ ಬಹಳ ಮುಖ್ಯವಾಗಿದ್ದು, ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು.

ದೀರ್ಘಕಾಲದ ಯಕೃತ್ತಿನ ಕಾಯಿಲೆ, ಆಲ್ಕೊಹಾಲ್‌ ಯುಕ್ತ ಹೆಪಟೈಟಿಸ್ ಹಾಗೂ ಇತರ ಹಲವು ಕಾಯಿಲೆಗಳಿಗೆ, ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯಕೃತ್ತಿನ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕೆಎಂಸಿ ಕಾರ್ಯ ಶ್ಲಾಘನೀಯ ಎಂದು ಅಭಿನಂದಿಸಿದರು.

ಕೆಎಂಸಿ ಡೀನ್ ಡಾ.ಶರತ್ ಕುಮಾರ್ ರಾವ್ ಮಾತನಾಡಿ, ಮನುಷ್ಯನ ದೇಹದಲ್ಲಿ ಯಕೃತ್ತು 2ನೇ ಅತಿದೊಡ್ಡ ಅಂಗವಾಗಿದ್ದು, 500 ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ. ತೆಗೆದುಕೊಂಡ ಆಹಾರದಲ್ಲಿ ವಿಷಕಾರಿ ಅಂಶ ಬೇರ್ಪಡಿಸಿ ಪೌಷ್ಟಿಕಾಂಶವನ್ನು ಮಾತ್ರ ದೇಹಕ್ಕೆ ಪೂರೈಸುವ ಕಾರ್ಯ ಮಾಡುತ್ತದೆ.

ಕೊಬ್ಬಿನ ಮಟ್ಟ, ಸಕ್ಕರೆಯ ಮಟ್ಟ, ರಕ್ತದ ಶುದ್ಧೀಕರಣ ಮಾಡುತ್ತದೆ. ಅಪರೂಪದ ಗುಣವೆಂದರೆ ಯಕೃತ್ತಿನ ಕಸಿ ಮಾಡಿದರೆ, ಅದು ಕೂಡಲೇ ಬೆಳೆದು ತನ್ನ ಸಹಜ ಆಕೃತಿಗೆ ಮರಳುತ್ತದೆ ಎಂದರು.

ಮಣಿಪಾಲ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಶಿರನ್ ಶೆಟ್ಟಿ ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.