ADVERTISEMENT

ಕೊಡೇರಿ ಕಿರು ಬಂದರಿಗೆ DC ಭೇಟಿ: ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:55 IST
Last Updated 12 ನವೆಂಬರ್ 2025, 4:55 IST
<div class="paragraphs"><p>ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೊಡೇರಿ ಕಿರು ಬಂದರಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು</p></div>

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೊಡೇರಿ ಕಿರು ಬಂದರಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು

   

ಬೈಂದೂರು: ತಾಲ್ಲೂಕಿನ ಕೊಡೇರಿ ಕಿರು ಬಂದರಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಂಗಳವಾರ ಭೇಟಿ ನೀಡಿ ಬಂದರು ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೇಡಿಕೆಗಳ ಮನವಿ ಸ್ವೀಕರಿಸಿದರು.

ಕೊಡೇರಿ ಕಿರು ಬಂದರಿನಲ್ಲಿ ಉಪ್ಪುಂದ ಗ್ರಾಮದ ರಾಣಿಬಲೆ ಜೋಡಿಯವರು ಸಹಿತ 800ಕ್ಕೂ ಮಿಕ್ಕಿ ನಾಡದೋಣಿಗಳು 3ರಿಂದ 4 ಸಾವಿರ ಜನ ಪ್ರತಿದಿನ ಮೀನುಗಾರಿಕೆ ಉದ್ಯೋಗ ಮಾಡುತ್ತಿದ್ದಾರೆ. ನೂರಾರು ಸಂಖ್ಯೆಯ ಮಹಿಳೆಯರು, ಇತರ ಕಾರ್ಮಿಕರು ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ಪ್ರತ್ಯಕ್ಷ, ಪರೋಕ್ಷವಾಗಿ ಸುಮಾರು 10 ಸಾವಿರ ಜನರಿಗೆ ಅನುಕೂಲವಾಗುತ್ತದೆ ಎಂದು ಮೀನುಗಾರ ಮುಖಂಡರು ಮನವಿ ನೀಡಿದರು.

ADVERTISEMENT

ಕೊಡೇರಿ ಕಿರು ಬಂದರು ವ್ಯಾಪ್ತಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳು ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರುವುದಿಲ್ಲ. ಶೀಘ್ರವಾಗಿ ಕಾಮಗಾರಿ ಗಳನ್ನು ಪೂರ್ಣಗೊಳಿಸಿ ಮೀನುಗಾರಿಕೆ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದರು.

ಕೊಡೇರಿ ಕಿರು ಬಂದರಿನಲ್ಲಿ 1ನೇ ಮತ್ತು 2ನೇ ಹಂತದ ಕಾಮಗಾರಿಗೆ ಸುಮಾರು ₹70 ಕೋಟಿಗೂ ಮಿಕ್ಕಿ ಅನುದಾನ ರಾಜ್ಯ ಸರ್ಕಾರ ನೀಡಿದೆ. ಆದರೂ ಮೀನುಗಾರರಿಗೆ ಈ ಬಂದರು ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ. ಅಸಮರ್ಪಕ ಕಾಮಗಾರಿಯಿಂದಾಗಿ 8 ಮೀನುಗಾರರು ಅಳಿವೆಯಲ್ಲಿ ಸಂಭವಿಸಿದ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಬ್ರೇಕ್ ವಾಟರ್ ಕಾಮಗಾರಿಗೆ 2 ಬದಿಯಲ್ಲೂ ತಲಾ 300 ಮೀಟರ್ ಉದ್ದಕ್ಕೆ ನಿರ್ಮಾಣ ಮಾಡಲು 3ನೇ ಹಂತದ ಕಾಮಗಾರಿಯನ್ನು ಮಂಜೂರಾತಿ ಮಾಡಿಸಿಕೊಡುವಂತೆ ವಿನಂತಿಸಿದರು.

ಬಂದರು ನಿರ್ಮಾಣವಾಗಿ 13 ವರ್ಷಗಳು ಕಳೆದರೂ ಬಂದರಿಗೆ ಸಮರ್ಪಕ ರಸ್ತೆ ಸಂಪರ್ಕ, ದಾರಿದೀಪ ಇಲ್ಲ. ಉಪ್ಪುಂದ ಗ್ರಾಮದ ಕರ್ಕಿಕಳಿಯಿಂದ ಬಂದರು ಭಾಗಕ್ಕೆ ಸುಮಾರು 2ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆ, ದಾರಿ ದೀಪ ಅಳವಡಿಕೆ ಕಾಮಗಾರಿ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು. ಮಹಿಳಾ ಮೀನು ಕೂಲಿ ಕಾರ್ಮಿಕರಿಗೆ ತುರ್ತು ಅವಶ್ಯಕತೆ, ವಿಶಾಂತ್ರಿಗಾಗಿ ವಿಶ್ರಾಂತಿ ಕೊಠಡಿ ಮೀಸಲಿಡುವ ಕುರಿತು, ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು, ಇತರ ಬೇಡಿಕೆಗಳ ಕುರಿತು ಮನವಿ ನೀಡಲಾಯಿತು.

ಕೊಡೇರಿಯ ಮೀನುಗಾರಿಕೆ ಸಹಾಯಕ ನಿರ್ದೇಶಕ ಬಿ.ಎ೦.ಯಕ್ಕರನಾಳ, ಗ೦ಗೊಳ್ಳಿಯ ಮೀನುಗಾರಿಕೆ ಉಪನಿರ್ದೇಶಕ ಸ೦ಜೀವ ಅರಕೇರಿ, ತಹಶೀಲ್ದಾರ್‌ ರಾಮಚಂದ್ರಪ್ಪ, ಉಪ್ಪುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನಚಂದ್ರ, ಕಿರಿಮಂಜೇಶ್ವರ ಪಿಡಿಒ, ಉಪ್ಪುಂದ ರಾಣಿ ಬಲೆ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ನಾಗೇಶ್ ಖಾರ್ವಿ ಅಳ್ವಿವೆಕೋಡಿ, ಮಡಿಕಲ್ ಈಶ್ವರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಬಿ. ರಾಮ ಖಾರ್ವಿ, ನಾಡದೋಣಿ ಮೀನುಗಾರರ ಸಂಘದ ಉಪಾಧ್ಯಕ್ಷ ನಾಗೇಶ್ ಖಾರ್ವಿ ಉಪ್ಪುಂದ, ಮೀನುಗಾರ ಮುಖಂಡರು ಜೊತೆಗಿದ್ದರು.

ಜೆಟ್ಟಿ ನಿರ್ಮಿಸಿಕೊಡಲು ಆಗ್ರಹ

ಜೆಟ್ಟಿಯ ಎತ್ತರ ಹೆಚ್ಚಾಗಿರುವುದರಿಂದ ನಾಡದೋಣಿಗಳು ನಿಲುಗಡೆ ಸಾಧ್ಯವಾಗುವುದಿಲ್ಲ. ನಾಡದೋಣಿಗಳ ಮೀನನ್ನು ಸಾಗಿಸಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಈಗ ಇರುವ ಜೆಟ್ಟಿಯ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ತಲಾ 100 ಮೀ. ಉದ್ದದ ಜೆಟ್ಟಿ ನಿರ್ಮಿಸಬೇಕು. 

ಉತ್ತರ, ದಕ್ಷಿಣ ದಿಕ್ಕಿನ ಬ್ರೇಕ್ ವಾಟರ್ ಕಲ್ಲುಗಳು ಕುಸಿದಿದ್ದು, ದುರಸ್ತಿ ಮಾಡಿಸಬೇಕು. ಹೊಳೆಯಲ್ಲಿ ನೀರು ಕಡಿಮೆ ಇದ್ದಾಗ ದೋಣಿಗಳು ಜೆಟ್ಟಿ ಹತ್ತಿರ ಮೀನು ಖಾಲಿ ಮಾಡಲು ಸಾಧ್ಯವಾಗದೆ ಹೊಳೆ ಮಧ್ಯ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತಾಗಿ ಹೂಳೆತ್ತುವ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.