ಉಡುಪಿ ನಗರದಲ್ಲಿ ಸರ್ಕಾರಿ ಬಸ್‌ನಲ್ಲಿ ತೆರಳುತ್ತಿರುವ ವಿದ್ಯಾರ್ಥಿನಿಯರು
ಪ್ರಜಾವಾಣಿ ಚಿತ್ರ
ಉಡುಪಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಇಂದಿಗೂ ಸಮರ್ಪಕ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯವಿಲ್ಲದೆ ಕಾರ್ಮಿಕರು, ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಖಾಸಗಿ ಬಸ್‌ಗಳ ಭರಾಟೆಯ ನಡುವೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮಂಕಾಗಿರುವುದರಿಂದ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಪ್ರಯೋಜನವೂ ಸಿಗುತ್ತಿಲ್ಲ ಎಂಬುದು ಗ್ರಾಮೀಣ ಪ್ರದೇಶದ ಮಹಿಳೆಯರ ಅಳಲು.
ಕೆಲವು ಹಳ್ಳಿಗಳಿಗೆ ಖಾಸಗಿ ಬಸ್‌ಗಳಾಗಲಿ; ಕೆಎಸ್‌ಆರ್‌ಟಿಸಿ ಬಸ್‌ಗಳಾಗಲಿ ಸಮರ್ಪಕವಾಗಿ ಸಂಚಾರ ನಡೆಸದ ಕಾರಣ ಜನರ ಗೋಳು ಹೇಳ ತೀರದಾಗಿದೆ. ದುಬಾರಿ ದರ ತೆತ್ತು ಆಟೊ ರಿಕ್ಷಾಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಜನರಿಗೆ ಎದುರಾಗಿದೆ ಎನ್ನುತ್ತಾರೆ ಅವರು.
ಬಸ್ ಸೇವೆಗೆ ಆಗ್ರಹಿಸಿ ಕುಂದಾಪುರ, ಬೈಂದೂರು ಭಾಗಗಳ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈಚೆಗೆ ವಿವಿಧ ಸಂಘಟನೆಗಳ ಜೊತೆಗೂಡಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿಯನ್ನೂ ನಡೆಸಿದ್ದರು.
ಹಿಂದೆ ಕೆಲವು ರೂಟ್‌ಗಳಲ್ಲಿ ಸಂಚಾರ ನಡೆಸುತ್ತಿದ್ದ ಬೆರಳೆಣಿಕೆಯ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಖಾಸಗಿ ಬಸ್‌ನವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಬಸ್ ಸಂಚಾರ ಆರಂಭಿಸಲು ಸಾಧ್ಯವಾಗಿಲ್ಲ ಎಂಬುದು ಅಧಿಕಾರಿಗಳ ಉತ್ತರ.
ತಡೆಯಾಜ್ಞೆ ತೆರವುಗೊಳಿಸಿ ಮತ್ತೆ ಸರ್ಕಾರಿ ಬಸ್‌ಗಳನ್ನು ಆರಂಭಿಸಲು ಅಧಿಕಾರಿಗಳು ಮುತುವರ್ಜಿ ತೋರುತ್ತಿಲ್ಲ ಎಂಬುದು ಜನರ ಆರೋಪ. ಕೊರೊನಾ ನಂತರ ಹಲವು ರೂಟ್‌ಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ ಎಂದೂ ಹೇಳುತ್ತಾರೆ ಪ್ರಯಾಣಿಕರು.
ಜಿಲ್ಲೆಯಲ್ಲಿ ಸಂಚಾರ ನಡೆಸುವ ಖಾಸಗಿ ಬಸ್‌ಗಳಿಗೆ ಹೋಲಿಸಿದರೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ ತೀರಾ ಕಡಿಮೆ. ಹೊಸ ಬಸ್‌ಗಳು ಬರುತ್ತವೆ ಎಂದು ಸಂಬಂಧಪಟ್ಟವರು ಭರವಸೆ ನೀಡಿತ್ತಿದ್ದರೂ ಸಮಸ್ಯೆ ಬಗೆ ಹರಿಯುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಬೈಂದೂರು, ಪಡುವರಿ, ಸೋಮೇಶ್ವರ, ದೊಂಬೆ, ಕರಾವಳಿ ಶಿರೂರು ಮಾರ್ಗವಾಗಿ ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಸಂಚಾರ ಆರಂಭಿಸಬೇಕು ಎಂದು ಅಲ್ಲಿನ ಜನರು ಆಗ್ರಹಿಸಿದ್ದಾರೆ.
ಕುಂದಾಪುರ ತಾಲ್ಲೂಕಿನ ಹಕ್ಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂದಾಪುರ, ದೇವಲ್ಕುಂದ, ಬಗ್ವಾಡಿ, ನೂಜಾಡಿ, ಬ್ರಹ್ಮೇರಿ, ಹಳ್ಳಿಜೆಡ್ಡು, ಹೊರ್ನಿ, ಕಟ್ಟಿನ ಮಕ್ಕಿ, ಮಾಣಿಕೊಳಲು, ಮಾಸ್ತಿಕಟ್ಟೆ ಮಾರ್ಗವಾಗಿ ಯಾವುದೇ ಬಸ್ ಸಂಚಾರವಿಲ್ಲ. ಈ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭಿಸಬೇಕು ಎಂಬುದು ಅಲ್ಲಿನ ಜನರ ಬೇಡಿಕೆಯಾಗಿದೆ.
ಕುಂದಾಪುರ, ತ್ರಾಸಿ, ಆನಗೋಡು, ಮೊವಾಡಿ, ನಾಡ, ಪಡುಕೋಣೆ, ಕೋಣ್ಕಿ, ಬಡಾಕೆರೆ ಮಾರ್ಗವಾಗಿ ಒಂದು ವರ್ಷದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ನಡೆಸುತ್ತಿತ್ತು ಆದರೆ ಕಳೆದ ಏಪ್ರಿಲ್ ತಿಂಗಳಿಂದ ಕೋರ್ಟ್ ಆದೇಶದಂತೆ ಬಸ್ ಸಂಚಾರ ನಿಲುಗಡೆಯಾಗಿದೆ. ಇದರಿಂದ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.
ಕೆಲವು ಖಾಸಗಿ ಬಸ್‌ಗಳು ತಮಗೆ ಪರವಾನಗಿ ನೀಡಿರುವ ರೂಟ್‌ನಲ್ಲಿ ಸಂಚಾರ ನಡೆಸುವುದಿಲ್ಲ. ಅಂತಹ ಕಡೆಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಬೇಕು. ಹಿಂದೆ ಸರ್ಕಾರಿ ಬಸ್‌ಗಳು ಓಡಾಟ ನಡೆಸುತ್ತಿದ್ದ ರೂಟ್‌ಗಳಿಗೆ ಮತ್ತೆ ಸರ್ಕಾರಿ ಬಸ್‌ಗಳು ಸಂಚಾರ ಆರಂಭಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಪೂರಕ ಮಾಹಿತಿ: ಹಮೀದ್ ಪಡುಬಿದ್ರಿ, ಶೇಷಗಿರಿ ಭಟ್
ಖಾಸಗಿ ಬಸ್‌ನವರು ಕೆಲವು ರೂಟ್‌ಗಳಿಗೆ ತಡೆಯಾಜ್ಞೆ ತಂದಿರುವುದನ್ನು ತೆರವುಗೊಳಿಸಲು ಮುಖ್ಯ ಕಚೇರಿಯ ಮೂಲಕ ಅರ್ಜಿ ಸಲ್ಲಿಸಿದ್ದೇವೆಉದಯ್ ಶೆಟ್ಟಿ ಕೆಎಸ್‌ಆರ್‌ಟಿಸಿ ಕುಂದಾಪುರ ಡಿಪೊ ಮ್ಯಾನೇಜರ್
ನಮ್ಮ ಊರಿಗೆ ಬರುತ್ತಿದ್ದ ಸರ್ಕಾರಿ ಬಸ್ ಈಗ ಸಂಚಾರ ನಿಲ್ಲಿಸಿದೆ. ಇದರಿಂದ ಪ್ರತಿದಿನ ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಒಂದು ಗಂಟೆ ನಡೆದುಕೊಂಡು ಹೋಗಬೇಕಾಗಿದೆಅಸ್ಮಿತ ವಿದ್ಯಾರ್ಥಿನಿ ಬಡಾಕೆರೆ
ನಮ್ಮ ರೂಟ್‌ನಲ್ಲಿ ಖಾಸಗಿ ಬಸ್‌ಗೆ ಪರ್ಮಿಟ್ ಇದ್ದರೂ ಜನರಿಲ್ಲವೆಂದು ಸಂಚಾರ ನಡೆಸುವುದಿಲ್ಲ. ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಪ್ರತಿದಿನ ಮೂರ್ನಾಲ್ಕು ಕಿ.ಮೀ. ಕಾಡುದಾರಿಯಲ್ಲಿ ಸಾಗಬೇಕುನವ್ಯ ವಿದ್ಯಾರ್ಥಿನಿ ಪಡುಕೋಣೆ
ಬಡಾಕೆರೆ–ನಾವುಂದ ಮಾರ್ಗವಾಗಿ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಇತ್ತು. ಈಗ ಅದರ ಸಂಚಾರವನ್ನು ನಿಲ್ಲಿಸಿರುವುದರಿಂದ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ರಿಕ್ಷಾದಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆಆದಿತ್ಯ ಅಡಿಗ ವಿದ್ಯಾರ್ಥಿ ಬಡಾಕೆರೆ
ಜಿಲ್ಲೆಯಲ್ಲಿ ಸಾರಿಗೆ ಪ್ರಾಧಿಕಾರದ ಸಭೆ ಹಲವು ತಿಂಗಳಿಂದ ನಡೆದಿಲ್ಲ. ಬೆಂದೂರು ಕುಂದಾಪುರ ವ್ಯಾಪ್ತಿಯ ಹಳ್ಳಿಗಳಿಗೆ ಸಮರ್ಪಕ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಕಾಡು ದಾರಿಯಲ್ಲಿ ನಡೆದು ಹೋಗಬೇಕಾಗಿದೆರಾಜು ಪಡುಕೋಣೆ ಕಾರ್ಮಿಕ ಮುಖಂಡ
‘ಖಾಸಗಿ ಲಾಬಿಯಿಂದ ಸಮಸ್ಯೆ’
ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಿಗೆ ಖಾಸಗಿಯವರಿಗೆ ಪರ್ಮಿಟ್ ಇದ್ದರೂ ಪ್ರಯಾಣಿಕರು ಇಲ್ಲವೆಂದು ಬಸ್ ಓಡಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಇಂತಹ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಿದರೆ ಅವುಗಳಿಗೆ ತಡೆಯಾಜ್ಞೆ ತರುತ್ತಾರೆ ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್ ತಿಳಿಸಿದರು. ಉಡುಪಿ ನಗರ ಸುತ್ತಮುತ್ತದ ಅಲೆವೂರು ಮರ್ಣೆ ಮಂಚಕಲ್ಲ್ ಮೊದಲಾದೆಡೆ ಸಮರ್ಪಕ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಇಂತಹ ಕಡೆಗೆ ನರ್ಮ್ ಬಸ್‌ಗಳನ್ನು ಹಾಕಬೇಕು. ಖಾಸಗಿಯವರ ಲಾಬಿಯಿಂದ ಜನರಿಗೆ ತೊಂದರೆಯಾಗಿದೆ. ಕೆಲವೆಡೆ ಬೆರಳೆಣಿಕೆಯಷ್ಟು ಬಸ್‌ಗಳು ಓಡಾಟ ನಡೆಸುವುದರಿಂದ ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತು ಪ್ರಯಾಣಿಸಬೇಕಾಗಿದೆ ಎಂದೂ ಅವರು ಹೇಳಿದರು.
‘ಸಮೀಕ್ಷೆ ಮಗಿದ ಮೇಲೆ ಸಭೆ’
ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಬಸ್‌ಗಳಿಲ್ಲದೆ ಸಮಸ್ಯೆಯಾಗುತ್ತಿರುವುದರ ಕುರಿತು ಚರ್ಚಿಸಲು ಇದೇ 15ರಂದು ಸಾರಿಗೆ ಪ್ರಾಧಿಕಾರದ ಸಭೆ ನಿಗದಿಯಾಗಿತ್ತು. ಆದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಇರುವುದರಿಂದ ಸಭೆಯನ್ನು ಮುಂದೂಡಲಾಗಿದೆ. ಸಮೀಕ್ಷೆ ಕಾರ್ಯ ಮುಗಿದ ಬಳಿಕ ಸಭೆ ನಡೆಸಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.
‘ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ’
ಜಿಲ್ಲೆಯ ಎಲ್ಲೆಲ್ಲಿ ಬಸ್ ಸಮಸ್ಯೆ ಇದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರುಗಳಿಗೆ ಸೂಚಿಸಿದ್ದೇನೆ. ಮಾಹಿತಿ ಸಿಕ್ಕಿದ ಬಳಿಕ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದರು.
ಬ್ರಹ್ಮಾವರ: ಬಸ್ ಮುಖ ಕಾಣದ ಮಟಪಾಡಿ
ಬ್ರಹ್ಮಾವರದಿಂದ ಗ್ರಾಮಾಂತರ ಪ್ರದೇಶಗಳಾದ ಕುಂಜಾಲು ನೀಲಾವರ ಆರೂರು ಮಟಪಾಡಿ ಹಾರಾಡಿ ಹೊನ್ನಾಳಕ್ಕೆ ಸರ್ಕಾರಿ ಬಸ್‌ಗಳ ಸೇವೆ ಅತೀ ಅಗತ್ಯವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಬ್ರಹ್ಮಾವರ ಪೇತ್ರಿ ಹೆಬ್ರಿ ಮತ್ತು ಕೆಲವೊಂದು ಗ್ರಾಮೀಣ ಭಾಗಗಳಿಗೆ ಕರ್ನಾಟಕ ಸಾರಿಗೆ ಇಲಾಖೆಯ ಗ್ರಾಮಾಂತರ ಬಸ್‌ಗಳು ಓಡಾಟ ನಡೆಸುತ್ತಿತ್ತು. ಆದರೆ ಅನಂತರ ನಿಲ್ಲಿಸಲಾಯಿತು. ಇದೀಗ ಬ್ರಹ್ಮಾವರ ಹೆಬ್ರಿಗೆ ಕೇವಲ ಒಂದು ಬಸ್ ಓಡಾಟ ನಡೆಸುತ್ತಿದೆ. ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟಪಾಡಿ ಗ್ರಾಮಕ್ಕೆ ಇದುವರೆಗೆ ಬಸ್ ಸಂಪರ್ಕ ಆಗಿಲ್ಲ. ಸಾವಿರಾರು ಜನಸಂಖ್ಯೆ ಇದ್ದರೂ ರಸ್ತೆ ಸಂಪರ್ಕವಿದ್ದರೂ ಇಲ್ಲಿಯ ಜನರಿಗೆ ಬಸ್ ಸೌಕರ್ಯ ತಲುಪಿಲ್ಲ. ಬ್ರಹ್ಮಾವರ ನೀಲಾವರಕ್ಕೆ ಇರುವ ಮೂರ್ನಾಲ್ಕು ಕಿ.ಮೀ. ಅಂತರವನ್ನು ಇಲ್ಲಿಯ ಜನತೆ ನಡೆದುಕೊಂಡೇ ಸಾಗಬೇಕಾಗಿದೆ. ಬ್ರಹ್ಮಾವರ ಮಂದಾರ್ತಿ ಪೇತ್ರಿ ಕಡೆಯಿಂದ ಆರೂರು ಕೊಳಲಗಿರಿ ಮೂಲಕ ಮಣಿಪಾಲಕ್ಕೆ ಸರ್ಕಾರಿ ಬಸ್‌ಗಳ ಓಡಾಟ ಆರಂಭಿಸಬೇಕು ಎಂಬುದು ಅಲ್ಲಿನ ಜನರ ಆಗ್ರಹವಾಗಿದೆ.
ಕಾಪು: ಸರ್ಕಾರಿ ಬಸ್‌ಗಳಿಲ್ಲದೆ ಸಮಸ್ಯೆ
ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್‌ಗಳು ಸಂಚಾರ ನಡೆಸದೆ ಜನರಿಗೆ ಸಮಸ್ಯೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಾದ ಪಡುಕುತ್ಯಾರು ಪಡುಬಿದ್ರಿಯ ಅವರಾಲು ಮಟ್ಟು ಸಹಿತ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಖಾಸಗಿ ಬಸ್ ಸಂಚರಿಸುತಿತ್ತು. ಇದೀಗ ಪ್ರಯಾಣಿಕರ ಕೊರತೆ ನೆಪ ಒಡ್ಡಿ ಸಂಚಾರ ನಡೆಸುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಜನರು ರಿಕ್ಷಾದಲ್ಲಿ ಹೆಚ್ಚು ವ್ಯಯ ಮಾಡಿ ತೆರಳಬೇಕಾಗಿದೆ. ಪಡುಬಿದ್ರಿಯಿಂದ ಕಾರ್ಕಳ ರಸ್ತೆಯಲ್ಲಿ ಸರ್ಕಾರಿ ಬಸ್‌ಗಳ ಬೇಡಿಕೆ ವ್ಯಾಪಕವಾಗಿದೆ. ಬೆರಳೆಣಿಕೆ ಬಸ್‌ಗಳು ಇರುವುದರಿಂದ ಕೆಲವೆಡೆ ವಿದ್ಯಾರ್ಥಿಗಳು ಸಾರ್ವಜನಿಕರು ಬಸ್ಸಿನಲ್ಲಿ ನೇತಾಡಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.