ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ಮಹಾನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳಲು ಬರುವ ಭಕ್ತರಿಗೆ ಸೇವಾ-ಸೌಲಭ್ಯಗಳಲ್ಲಿ ಕೊರತೆಯಾಗದಂತೆ ದೇವಸ್ಥಾನ ಆಡಳಿತೆ ಪೂರ್ವ ಸಿದ್ಧತೆ ಮಾಡಿಕೊಂಡಿದೆ.
ಸೆ. 22ರಿಂದ ಪ್ರಾರಂಭಗೊಳ್ಳಲಿರುವ ನವರಾತ್ರಿಯ ಉತ್ಸವದ ಆಚರಣೆಗಳು ಅ. 2ರವರೆಗೂ ನಡೆಯಲಿದ್ದು, ದೇವಸ್ಥಾನದಲ್ಲಿ ದಿನಂಪ್ರತಿ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ವಿಶೇಷ ಪೂಜೆ ಹಾಗೂ ಉತ್ಸವಗಳು ಜರುಗಲಿವೆ.
ಅ. 1ರಂದು ಮಹಾನವಮಿ ಪ್ರಯುಕ್ತ ಬೆಳಿಗ್ಗೆ 11.30ಕ್ಕೆ ಚಂಡಿಕಾಯಾಗ ಹಾಗೂ ಮಧ್ಯಾಹ್ನ 1.30ರ ಧನುರ್ ಲಗ್ನದಲ್ಲಿ ರಥೋತ್ಸವ ಜರುಗಲಿದೆ. 2ರಂದು ವಿಜಯದಶಮಿ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಸಂಜೆ ಶ್ರೀ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ.
ನವರಾತ್ರಿಯ ಪ್ರಾರಂಭದ ದಿನದಿಂದ 8ನೇ ದಿನದವರೆಗೂ ಮೂಕಾಂಬಿಕಾ ದೇವಿಗೆ ಯೋಗಾನಿದ್ರಾ ದುರ್ಗಾ, ದೇವಜಾತಾ ದುರ್ಗಾ, ಮಹಿಷಾಸುರಮರ್ದಿನಿ ದುರ್ಗಾ, ಶೈಲಜಾ ದುರ್ಗಾ, ಧೂಮ್ರಾ ದುರ್ಗಾ, ಚಂಡಮುಂಡ ದುರ್ಗಾ, ರಕ್ತಬೀಜಾ ದುರ್ಗಾ, ನಿಶುಂಭಾ ದುರ್ಗಾ ಪೂಜೆಗಳು ನಡೆಯುತ್ತದೆ. ಮೊದಲ ದಿನದಿಂದ 9ನೇ ದಿನದವರೆಗೂ ಪ್ರತಿದಿನ ಸಂಜೆ ಸುಹಾಸಿನಿ ಪೂಜೆ, 9ನೇ ದಿನ ಶತರುದ್ರಾಭಿಷೇಕ, ಕಲ್ಪೋಕ್ತ ಪೂಜೆ, ಶುಂಭಾ ದುರ್ಗಾ ಪೂಜೆಗಳ ಜತೆಯಲ್ಲಿ ಚಂಡಿಕಾಯಾಗ ನಡೆಯುತ್ತದೆ.
ಉತ್ಸವದ ಪ್ರಯುಕ್ತ ಪ್ರತಿದಿನ ಮಧ್ಯಾಹ್ಮ 3ರಿಂದ ರಾತ್ರಿ 11.30ರವರೆಗೆ ಸ್ವರ್ಣಮುಖಿ ರಂಗಮಂಟಪದಲ್ಲಿ ದೇಶದ ವಿವಿಧ ಭಾಗದಿಂದ ಬರುವ ಕಲಾ ತಂಡಗಳಿಂದ ಸೇವಾರೂಪವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಉತ್ಸವದ ಪಾರಂಪರಿಕ ಆಚರಣೆಯ ಜೊತೆಗೆ ವಿವಿಧ ಸಾಂಸ್ಕೃತಿಕ ವೈಭವಗಳ ವಿಜೃಂಭಣೆಯ ಆಚರಣೆಗಳು ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಉತ್ಸವದ ದಿನಗಳಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಸತಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರತಿ ದಿವಸ ಶ್ರೀದೇವಳದ ದಾಸೋಹ ಭವನದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ದೇವಾಲಯಕ್ಕೆ ವಿದ್ಯುತ್ ದೀಪ ಹಾಗೂ ಹೂವಿನ ಅಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.
ಪೂರ್ವ ಸಿದ್ಧತೆಗಳು: ಕುಂದಾಪುರದ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್ ಅವರ ಮಾರ್ಗದರ್ಶನದಲ್ಲಿ ಸಭೆ ನಡೆಸಿ, ಉತ್ಸವದ ಯಶಸ್ಸಿಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳೀಯ ಪೊಲೀಸ್ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ, ಜಿಲ್ಲಾ ಗ್ರಹ ರಕ್ಷಕದಳ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಅವರೊಂದಿಗೆ ಬಂದೋಬಸ್ತ್ ಹಾಗೂ ರಕ್ಷಣಾ ವ್ಯವಸ್ಥೆಗಳ ಕುರಿತು ಸಮಾಲೋಚನೆ ನಡೆಸಲಾಗಿದೆ. ಸಿಸಿ ಟಿ.ವಿ ಕ್ಯಾಮೆರಾ ಗುಣಮಟ್ಟ ಪರಿವೀಕ್ಷಣೆ ನಡೆಸಿ, ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.
ದೇಗುಲದ ಸುತ್ತಲಿನ ಪರಿಸರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಖಾಸಗಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಲಾಗಿದೆ. ಸರತಿ ಸಾಲುಗಳನ್ನು ಹೊರತುಪಡಿಸಿ, ಅನಗತ್ಯ ಗುಂಪು ನಿಲ್ಲುವುದು ಹಾಗೂ ದೇವಸ್ಥಾನದ ಪೌಳಿಯ ಒಳಭಾಗದಲ್ಲಿ ವಿಶ್ರಾಂತಿಗೂ ಕಡಿವಾಣ ಬೀಳಲಿದೆ. ಅ. 1ರ ಮಹಾನವರಾತ್ರಿ ರಥೋತ್ಸವದ ದಿನದಂದು ದೇಗುಲದ ಒಳ ಪೌಳಿಯಲ್ಲಿ ಜನದಟ್ಟಣೆ ಕಡಿಮೆ ಮಾಡಲು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಂದೋಬಸ್ತ್ ಹಾಗೂ ರಕ್ಷಣಾ ಕಾರ್ಯಗಳ ಕರ್ತವ್ಯ ನಿರ್ವಹಣೆಗಾಗಿ ಜಿಲ್ಲಾ ಎಸ್‌ಪಿ ಹರಿರಾಮ್ ಶಂಕರ್ ಹಾಗೂ ಕುಂದಾಪುರ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
ನವರಾತ್ರಿ ಉತ್ಸವಕ್ಕಾಗಿ ದೇಶ-ವಿದೇಶದಿಂದ ಬರುವ ಕ್ಷೇತ್ರದ ಭಕ್ತರಿಗೆ ಯಾವುದೇ ರೀತಿಯ ಮೂಲಸೌಕರ್ಯಕ್ಕೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವ್ಯವಸ್ಥಾಪನಾ ಸಮಿತಿ ಕೈಗೊಂಡಿದೆ.ಕೆ.ಬಾಬು ಶೆಟ್ಟಿ ತಗ್ಗರ್ಸೆ, ಅಧ್ಯಕ್ಷ ವ್ಯವಸ್ಥಾಪನಾ ಸಮಿತಿ
ನವರಾತ್ರಿ ಹಾಗೂ ದಶಮಿ ಸಂಭ್ರಮದಲ್ಲಿ ಸಾವಿರಾರು ಭಕ್ತರು ದೇಗುಲಕ್ಕೆ ಬರುವ ನಿರೀಕ್ಷೆ ಇದ್ದು ಈಗಾಗಲೇ ರಕ್ಷಣಾ ವ್ಯವಸ್ಥೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಾಗಿದೆಪ್ರಶಾಂತ್ಕುಮಾರ ಶೆಟ್ಟಿ ಕಾರ್ಯ ನಿರ್ವಹಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.