
ಕುಂದಾಪುರ: ಯಾವುದೇ ಸಂಸ್ಥೆ ಯಶಸ್ವಿಯಾಗಿ ಮುಂದುವರಿಯುತ್ತಿದ್ದರೆ, ಅದರ ಹಿಂದೆ ಜವಾಬ್ದಾರಿ ಹೊತ್ತವರ ಪರಿಶ್ರಮ ಇರುತ್ತದೆ ಎಂದು ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಹೇಳಿದರು
ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಬಿಎಂಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂದಾಪುರ ಎಜುಕೇಶನ್ ಸೊಸೈಟಿ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಬೆಳೆಸಿಕೊಂಡವರು ಬಿ.ಎಂ.ಸುಕುಮಾರ್ ಶೆಟ್ಟಿ. ಗುಣಮಟ್ಟದ ಶಿಕ್ಷಣ ಕೇಂದ್ರವಾಗಿರುವ ಕುಂದಾಪುರದ ವಿದ್ಯಾ ಸಂಸ್ಥೆಗಳಿಗೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಿರುವ ಬಗ್ಗೆ ಹೆಮ್ಮೆ ಇದೆ. ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿಗಳು ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದರು.
ಮುಖಂಡ ಪಿ.ಎಸ್. ಪ್ರಕಾಶ್ ಮಾತನಾಡಿ, ಯುವ ಸಮುದಾಯ ಶಿಸ್ತುಬದ್ಧವಾಗಿದ್ದರೆ ಆ ದೇಶದ ಭವಿಷ್ಯ ಸುಸ್ಥಿರವಾಗಿರುತ್ತದೆ. ದೇಶದ ಬಗ್ಗೆ ಸದಭಿರುಚಿಯ ಚಿಂತನೆ ಮಾಡುವ ಯುವ ಸಮುದಾಯವೇ ದೇಶದ ನಿಜವಾದ ಆಸ್ತಿ. ಪಠ್ಯದ ಶಿಕ್ಷಣ ನೀಡುವುದಷ್ಟೇ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಅಲ್ಲ, ನೈತಿಕ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಬೇಕು. ನಾಗರಿಕ ಶಿಷ್ಟಾಚಾರ, ಸಂವಿಧಾನ ಪಾಲನೆ, ಪರಿಸರ ಸಂರಕ್ಷಣೆ ಹಾಗೂ ಸ್ವದೇಶಿ ಚಿಂತನೆ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಸೋಲುಗಳನ್ನು ಸವಾಲಾಗಿ ಸ್ವೀಕರಿಸುವವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ವಿದ್ಯಾರ್ಥಿ ಜೀವನ ಗುರಿಗಳ ಹೂರಣವಾಗಬೇಕು. ಯಶಸ್ಸಿನ ಜೊತೆ ಗುಣಮಟ್ಟ ಕಾಪಾಡಿಕೊಳ್ಳಬೇಕು. ಸೈಬರ್ ವಂಚನೆಗೆ ಒಳಗಾಗಬೇಡಿ. ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಿನಲ್ಲಿ ಹಣ ಕಳೆದುಕೊಳ್ಳಬೇಡಿ. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಬಗ್ಗೆ ಜಾಗ್ರತೆ ಇರಲಿ. ಡ್ರಗ್ಸ್ ಹಾಗೂ ಮಾದಕ ವ್ಯಸನದಿಂದ ದೂರವಿರಬೇಕು. ಅಪರಾಧ ಪ್ರಕರಣಗಳ ಮಾಹಿತಿಯನ್ನು ಪೊಲೀಸರಿಗೆ ನೀಡುವ ನಾಗರಿಕ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಮಾತ್ರವಲ್ಲ, ಅದನ್ನು ಸದೃಢವಾಗಿ ಮುನ್ನಡೆಸುವುದು ತ್ರಾಸದಾಯಕ. ಕುಂದಾಪುರ ಎಜುಕೇಷನ್ ಸೊಸೈಟಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಯಾವುದೇ ವ್ಯಾವಹಾರಿಕ ಉದ್ದೇಶ ಇಲ್ಲ ಎಂದರು.
ಕುಂದಾಪುರ ಎಜುಕೇಶನ್ ಸೊಸೈಟಿ ಜತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ ಬಾಂಡ್ಯ, ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಉಮೇಶ್ ಶೆಟ್ಟಿ, ಆರ್.ಎನ್.ಶೆಟ್ಟಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ಎಚ್ಎಂಎಂ ಹಾಗೂ ವಿಕೆಆರ್ ಶಾಲೆಗಳ ಪ್ರಾಂಶುಪಾಲೆ ಚಿಂತನಾ ರಾಜೇಶ್ ಇದ್ದರು.
ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಪ್ರಾಂಶುಪಾಲೆ ಸೀಮಾ ಪಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲರನ್ನು ಗೌರವಿಸಲಾಯಿತು. ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀನಿವಾಸ ಸನ್ಮಾನಿತರ ವಿವರ ನೀಡಿದರು. ಶಿಕ್ಷಕಿ ಜಾನೀಸ್ ಡಿಸೋಜ ಸ್ವಾಗತಿಸಿದರು. ಸುಷ್ಮಾ ಶೆಣೈ, ಜೊಸ್ಲೀನ್ ಆಲ್ಮೇಡಾ, ಅರುಣಾ ಹೊಳ್ಳ, ರೂಪಾ ವರ್ಣೀಕರ್ ಪರಿಚಯಿಸಿದರು. ಜಯಶೀಲ ಪೈ ನಿರೂಪಿಸಿದರು. ಶಿಕ್ಷಕ ಕೃಷ್ಣಮೂರ್ತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.