ADVERTISEMENT

ಕುಂದಾಪುರ | 'ನಗರದಲ್ಲಿ ರಾತ್ರಿಯೆಲ್ಲಾ ಪಟಾಕಿ ಸದ್ದು'

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:41 IST
Last Updated 30 ಡಿಸೆಂಬರ್ 2025, 7:41 IST
ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತೃಸ್ತರಿಗೆ ಸಾಂತ್ವನ ಹೇಳಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತೃಸ್ತರಿಗೆ ಸಾಂತ್ವನ ಹೇಳಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ   

ಕುಂದಾಪುರ: ನಗರದ ಪೇಟೆ ವೆಂಕಟರಮಣ ದೇವಸ್ಥಾನದ ರಥಬೀದಿಯ ಕಟ್ಟಡದಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ಅಗ್ನಿ ಅನಾಹುತ ಪರಿಣಾಮವಾಗಿ ಅಂಗಡಿಯೊಂದರಲ್ಲಿ ಸಂಗ್ರಹಿಸಿದ್ದ ಪಟಾಕಿಗಳು ಹೊತ್ತಿ ಉರಿದು ರಾತ್ರಿಯಿಡೀ ಪಟಾಕಿ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಂಗಡಿಗಳಲ್ಲಿ ತುಪ್ಪ, ಮರದ ವಸ್ತು, ಪುಸ್ತಕ, ಕರ್ಪೂರ, ಡ್ರೈ ಫ್ರೂಟ್ಸ್ ಹಾಗೂ ಪಟಾಕಿ ಇದ್ದು, ಬೆಂಕಿಯ ಸ್ಪರ್ಶಕ್ಕೆ ಅವು ಸ್ಪೋಟಿಸಿವೆ. ಆದ್ದರಿಂದ ಗಾಢ ನಿದ್ರೆಯಲ್ಲಿದ್ದ ಪೇಟೆಯ ನಿವಾಸಿಗಳು ಶಬ್ದಕ್ಕೆ ಎಚ್ಚರವಾಗಿದ್ದರೂ, ಕಾರ್ಯಕ್ರಮದ ಅಂಗವಾಗಿ ಯಾರೋ ಸುಡುಮದ್ದು ಸುಡುತ್ತಿದ್ದಾರೆ ಎಂದು ಸುಮ್ಮನಾಗಿದ್ದರು.  

ಪೂಜಾ ವಸ್ತು ಹಾಗೂ ಡ್ರೈ ಫ್ರೂಟ್ಸ್ ಮಾರಾಟ ಮಾಡುತ್ತಿದ್ದ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪೂಜಾ ವಸ್ತು, ದಿನಸಿ ಹಾಗೂ ಕಟ್ಲೇರೆ ವಸ್ತು ಮಾರಾಟ ಮಾಡುತ್ತಿದ್ದ ಬಾಲಾಜಿ ಹೆಸರಿನ ಅಂಗಡಿಗೆ ಭಾಗಶಃ ಹಾನಿಯಾಗಿದೆ. ಉಳಿದ ಮೂರು ಅಂಗಡಿಗಳು ಬಹುತೇಕ ಅಗ್ನಿಯ ಕೆನ್ನಾಲಿಗೆಗೆ ಹೊತ್ತಿ ಉರಿದಿದೆ. ಅವಘಡದಿಂದ ಒಟ್ಟು ₹3 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ಹೊತ್ತಿ ಉರಿದ ಅಂಗಡಿಗಳ ಸಾಲಿನಲ್ಲಿ ಇದ್ದ ಪಟಾಕಿ ಅಂಗಡಿಯ ಸಂಗ್ರಹದ ಒಂದಷ್ಟು ಪಟಾಕಿಗಳು ಸುಟ್ಟು ಭಸ್ಮವಾಗಿದೆ. ಗೋದಾಮಿನಲ್ಲಿ ಇದ್ದ ದೊಡ್ಡ ಸಂಗ್ರಹಕ್ಕೆ ಬೆಂಕಿ ತಗುಲಿದ ಕಾರಣ ದೊಡ್ಡ ದುರಂತ ತಪ್ಪಿದೆ. ಅಗ್ನಿ ಹೊತ್ತಿ ಉರಿಯಲು ಕಾರಣವಾದ ಅಂಶಗಳ ಕುರಿತು ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

ರಾತ್ರಿ ಸುಮಾರು 3 ಗಂಟೆ ವೇಳೆ ದಾರಿಹೋಕರು ಅಂಗಡಿಯ ಮಾಡಿನಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಕುಂದಾಪುರ ಘಟಕದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪರಿಸ್ಥಿತಿ ಕೈಮೀರಿದಾಗ ಬೈಂದೂರು, ಉಡುಪಿಯಿಂದ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಯಿಸಿಕೊಂಡು ಕಾರ್ಯಾಚರಣೆ ಮುಂದುವರೆಸಲಾಗಿತ್ತು.

ಘಟನಾ ಸ್ಥಳಕ್ಕೆ ಶಾಸಕ ಎ. ಕಿರಣ್‌ ಕುಮಾರ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್, ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಪೊಲೀಸ್ ನಿರೀಕ್ಷಕ ಜಯರಾಂ ಗೌಡ ಭೇಟಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.